ADVERTISEMENT

ಮಳಿಗೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:51 IST
Last Updated 4 ಮೇ 2017, 19:51 IST
ಮಳಿಗೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ
ಮಳಿಗೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ   
ಬೆಂಗಳೂರು: ‘ಬೆಂಗಳೂರು ಆರೋಗ್ಯ ಉತ್ಸವ’ದ ವಸ್ತುಪ್ರದರ್ಶನ ಮಳಿಗೆಗಳು ವೈದ್ಯಕೀಯ ಕ್ಷೇತ್ರದ ಅತ್ಯಾಧುನಿಕ ಬೆಳವಣಿಗೆಗಳ ಕುರಿತ ಸಮಗ್ರ ಮಾಹಿತಿ ಒದಗಿಸುತ್ತಿವೆ.  ಮಳಿಗೆಗಳ ಕುರಿತು  ಮಾಹಿತಿ ಒದಗಿಸಲು ವಿಶೇಷ ಮೊಬೈಲ್‌ ಆ್ಯಪ್‌ ಕೂಡ ಸಿದ್ಧಪಡಿಸಲಾಗಿದೆ. 
 
ಉಚಿತ ವೈದ್ಯಕೀಯ ತಪಾಸಣೆ:  ಉಚಿತ ವೈದ್ಯಕೀಯ ತಪಾಸಣಾ ಸೌಲಭ್ಯವನ್ನೂ ಕಲ್ಪಿಸಲಾಗಿದೆ.  ಮಿಂಟೊ ಕಣ್ಣಿನ ಆಸ್ಪತ್ರೆಯ ಮಳಿಗೆಯಲ್ಲಿ ಉಚಿತ   ನೇತ್ರ ತಪಾಸಣೆ ಮಾಡಿಸಿಕೊಳ್ಳಬಹುದು. ನೇತ್ರದಾನ ಮಾಡುವ ಒಪ್ಪಂದ ಮಾಡಿಕೊಳ್ಳಲು ಅವಕಾಶ ಇದೆ.
 
ಆರ್‌.ವಿ. ದಂತ ವೈದ್ಯಕೀಯ ಕಾಲೇಜಿನ ಮಳಿಗೆಯಲ್ಲಿ  ಹಲ್ಲುಗಳ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು.   ಹಲ್ಲು ಹಾಳಾಗದಂತೆ ಕಾಪಾಡುವ ಬಗ್ಗೆ ಹಾಗೂ ಮಕ್ಕಳಲ್ಲಿ ಹಲ್ಲಿನ  ಬಗ್ಗೆ ಕಾಳಜಿ ಬೆಳೆಸುವ ಕುರಿತು   ಇಲ್ಲಿ ಮಾಹಿತಿ ಪಡೆಯಬಹುದು.   ರಕ್ತದೊತ್ತಡ ಹಾಗೂ ಮಧುಮೇಹದ ಉಚಿತ ಪರೀಕ್ಷೆ ಸೌಲಭ್ಯ ಗಳು ಅನೇಕ ಮಳಿಗೆಗಳಲ್ಲಿವೆ. 
 
ಅಲೋಪಥಿ ಜೊತೆಗೆ  ಆಯುರ್ವೇದ, ಹೋಮಿಯೋಪಥಿ, ಆಕ್ಯುಪಂಕ್ಚರ್‌,  ಪ್ರಕೃತಿ ಚಿಕಿತ್ಸೆ, ಯೋಗಕ್ಕೆ ಸಂಬಂಧಿಸಿದ ಮಳಿಗೆಗಳೂ ಇವೆ. ಬೊಜ್ಜು ಕರಗಿಸುವ ಸರಳ ವಿಧಾನ,  ಆರೋಗ್ಯಕ್ಕೆ ಹಿತಕರ ಆಹಾರದ ಕುರಿತು ಮಾಹಿತಿ ನೀಡುವ  ಮಳಿಗೆಗಳಿವೆ.     
 
60 ಬಗೆಯ ಪಾನೀಯ: ಆಯುಷ್‌ ಇಲಾಖೆಯ ಮಳಿಗೆಯಲ್ಲಿ ಬೇಸಿಗೆಯ ಬೇಗೆಗೆ ತಂಪು ನೀಡುವ ಪಾನೀಯಗ ಳನ್ನು ಮನೆಯಲ್ಲೇ ತಯಾರಿಸುವ ಕುರಿತು ಮಾಹಿತಿ ಪಡೆಯಬಹುದು. ತರಕಾರಿ ಮತ್ತು ಹಣ್ಣುಗಳಿಂದ 60 ಬಗೆಯ ಪಾನೀಯಗಳನ್ನು ತಯಾರಿಸುವ ವಿಧಾನ ಗಳನ್ನು  ಇಲ್ಲಿ  ತಿಳಿಸಿಕೊಡುತ್ತಾರೆ.
 
ಸಸ್ಯಜನ್ಯ ಸೊಳ್ಳೆಬತ್ತಿ: ಸಸ್ಯಜನ್ಯ ಪದಾರ್ಥ ಗಳಿಂದ ತಯಾರಿಸಿದ ಸೊಳ್ಳೆಬತ್ತಿ, ಕ್ರೀಮ್‌ಗಳು, ವಿದ್ಯಾರ್ಥಿಗಳೇ ತಯಾರಿಸಿರುವ ಮುಖಕಾಂತಿ ಲೇಪ, ಕೇಶ ರಂಜನ ಲೇಪ, ಲಿಪ್‌ಬಾಮ್‌, ತಲೆಹೊಟ್ಟು ನಿವಾರಕ ಪುಡಿ   ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಮಳಿಗೆಯಲ್ಲಿವೆ.
****
ಸ್ಕೂಟರ್‌  ಆಂಬುಲೆನ್ಸ್‌
ಬ್ರೂಕ್‌ಫೀಲ್ಡ್‌ ಆಸ್ಪತ್ರೆ ವತಿಯಿಂದ ಪ್ರಾಥಮಿಕ ಐಸಿಯು ಸೌಲಭ್ಯವುಳ್ಳ ದ್ವಿಚಕ್ರವಾಹನದ ಆಂಬುಲೆನ್ಸ್‌  ಗಮನ ಸೆಳೆಯಿತು. ‘ಈ ಸೇವೆ ಪಡೆಯಲು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.