ADVERTISEMENT

ಮಾತೃಭಾಷೆ ಕಡ್ಡಾಯಕ್ಕೆ ಸುಗ್ರೀವಾಜ್ಞೆ ಹೊರಡಿಸಿ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜರಗನಹಳ್ಳಿ ಶಿವಶಂಕರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:36 IST
Last Updated 23 ಏಪ್ರಿಲ್ 2017, 19:36 IST
ಶಿವಶಂಕರ್‌
ಶಿವಶಂಕರ್‌   

ಬೆಂಗಳೂರು: ‘ಕೇರಳದಲ್ಲಿ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿವರೆಗೆ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿ ಅಲ್ಲಿನ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಕರ್ನಾಟಕ ಸರ್ಕಾರವೂ ಇದೇ ನಿಲುವು ತಾಳಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜರಗನಹಳ್ಳಿ ಶಿವಶಂಕರ್‌ ಒತ್ತಾಯಿಸಿದರು.

ವಿಜಯನಗರದಲ್ಲಿ ಏರ್ಪಡಿಸಿದ್ದ  ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಸಂವಾದದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ರಾಜ್ಯದಲ್ಲಿರುವ ಕಚೇರಿಗಳು, ಸಿಬಿಎಸ್‌ಇ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಹೇರುತ್ತಿದೆ. ಪ್ರಾದೇಶಿಕ ಭಾಷೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು’ ಎಂಬ ಡಾ.ಎ.ವಿ. ಲಕ್ಷ್ಮಿನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಶಿವಶಂಕರ್‌, ‘ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳಿಗೂ ಮಾನ್ಯತೆ ಇದೆ. ಹಿಂದಿ ರಾಷ್ಟ್ರಭಾಷೆಯಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಕುರಿತು ಕೇರಳದ ಮಾರ್ಗವನ್ನೇ ನಮ್ಮ ಸರ್ಕಾರವೂ ಅನುಸರಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ನಾವು ದೂರುತ್ತೇವೆ. ಆದರೆ, ಇಂಗ್ಲಿಷ್‌ ಭಾಷೆಯನ್ನು ಯಾರು ಹೇರುತ್ತಿದ್ದಾರೆ. ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವವರು ಯಾರು’ ಎಂದು ಅವರು ಪ್ರಶ್ನಿಸಿದರು.

‘ಮುಂದಿನ ಪೀಳಿಗೆಗೆ ಕನ್ನಡ ಉಳಿಸಿಕೊಳ್ಳಲು ಅಗತ್ಯ ಮಾರ್ಗಸೂಚಿ ರೂಪಿಸಬೇಕು’ ಎಂದು ಆಗ್ರಹಿಸಿದರು. ‘ಬೆಂಗಳೂರು ವಲಸಿಗರ ನಗರವಾಗುತ್ತಿದೆ. ವಲಸಿಗರೂ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಹೇಗೆ’ ಎಂದು ಡಾ.ಬಿ.ಎನ್‌.ಶಾರದ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ‘ವಿವಿಧ ಧರ್ಮ, ಸಂಸ್ಕೃತಿ, ಭಾಷಿಕರು ಇರುವ ವಿಶಿಷ್ಟ ನಗರ ಬೆಂಗಳೂರು. ಇಂತಹ ನಗರ ಜಗತ್ತಿನಲ್ಲೇ ಎಲ್ಲೂ ಸಿಗುವುದಿಲ್ಲ. ಆದರೆ, ವಲಸಿಗರನ್ನು ಕನ್ನಡದ ಕೆಲಸಕ್ಕೆ ಬಳಸಿಕೊಳ್ಳುವ ಕುರಿತ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. ಆದರೆ, ಇದಕ್ಕೆ ಉತ್ತರ ಸುಲಭವಾಗಿ ಸಿಗುವುದಿಲ್ಲ.

12ನೇ ಶತಮಾನದಲ್ಲಿ ಬಸವಣ್ಣ ಅವರ ಪ್ರಭಾವಕ್ಕೆ ಒಳಗಾಗಿ ಕೆಲವರು ಸೌರಾಷ್ಟ್ರ, ಗುಜರಾತ್‌, ಕಾಶ್ಮೀರದಿಂದ ಬಸವ ಕಲ್ಯಾಣಕ್ಕೆ ಬಂದು ಕನ್ನಡವನ್ನು ಕಲಿತು ವಚನಗಳನ್ನು ರಚಿಸಿದ್ದರು. ಹೀಗಾಗಿ ಇಲ್ಲಿರುವ ವಲಸಿಗರಿಗೂ ಕನ್ನಡದ ಮಹತ್ವವನ್ನು ತಿಳಿಸಬೇಕು’ ಎಂದರು.

‘ಅನ್ಯಭಾಷಿಕರನ್ನು ಹೇಗೆ ಕನ್ನಡಿಗರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಒಂದು ನಿಲುವು ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವ ಜನಪ್ರತಿನಿಧಿಗಳು ಸೂಕ್ತ ನಿಲುವು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಫ್ರಾನ್ಸ್‌, ಚೀನಾ ದೇಶಗಳು ಭಾಷೆಯ ಬಗ್ಗೆ ಸ್ಪಷ್ಟ ನಿಲುವು ಹೊಂದಿವೆ. ಅಂತಹ ಇಚ್ಛಾಶಕ್ತಿಯನ್ನು ನಮ್ಮವರೂ ಪ್ರದರ್ಶಿಸಬೇಕು’ ಎಂದು ಹೇಳಿದರು.

ಹನಿಗವನವು ಮುಕ್ತ ಸಾಹಿತ್ಯ: ‘ಹನಿಗವನವು ಮುಕ್ತ ಸಾಹಿತ್ಯ. ಅದು ಜನಸಾಮಾನ್ಯರಿಗೆ ನಿಲುಕುವ ಸಾಹಿತ್ಯ. ಸಂಸಾರಿಗೆ ಮಡದಿ, ಸನ್ಯಾಸಿಗೆ ಬಿಡದಿ ಎಂದು ಒಬ್ಬ ಕವಿ ಬರೆಯುತ್ತಾನೆ. ಇದರಲ್ಲಿ ಎಂತಹ ವಿಡಂಬನೆ ಇದೆ. ಗಂಭೀರ, ಸಂಕೀರ್ಣ ವಿಚಾರಗಳನ್ನೂ ಹನಿಗವಿತೆಗಳಲ್ಲಿ ಮನತಟ್ಟುವಂತೆ ಹೇಳಬಹುದು’ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಸಲ್ಲ: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಬಾರದು. ಅದನ್ನು ಕಾಪಾಡಿಕೊಳ್ಳಬೇಕು’ ಎಂದು ಶಿವಶಂಕರ್‌ ಹೇಳಿದರು.
ಬ್ಯಾಡರಹಳ್ಳಿ ಶಿವರಾಜ್‌ ಪ್ರಶ್ನೆಗೆ ಅವರು ಉತ್ತರಿಸಿದರು.

‘ಕೆಲ ದುಷ್ಟಶಕ್ತಿಗಳು ಇಂತಹ ಕೆಲಸವನ್ನು ಮಾಡುತ್ತಿವೆ. ಸತ್ಯವನ್ನು ಹೇಳಲು ಹೋದರೆ, ಅದನ್ನು ಹತ್ತಿಕ್ಕುವಂತಹ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ’ ಎಂದರು.

ADVERTISEMENT

ಒಂದು ಕವಿತೆಗೆ ₹300!
‘ನನ್ನ ಕವಿತೆಗಳನ್ನು  ಪತ್ರಿಕೆಗೆ ಕಳುಹಿಸುತ್ತಿದ್ದೆ. ಅವರು ಒಂದು ಕವಿತೆಗೆ ₹5 ನೀಡುತ್ತಿದ್ದರು. ನವಿಲಿನ ನಾಟ್ಯವನ್ನು ಪ್ರತಿಮೆಯಾಗಿ ತೆಗೆದುಕೊಂಡು ಒಂದು ಕವನ ಬರೆದಿದ್ದೆ. ಅದನ್ನು ಪ್ರಕಟಿಸಿದ್ದ ಪಿ.ಲಂಕೇಶ್‌ ಅವರು ₹300 ಗೌರವಧನ ನೀಡಿದ್ದರು’ ಎಂದು ಶಿವಶಂಕರ್‌ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.