ADVERTISEMENT

ಮಾವನಿಂದ ಲೈಂಗಿಕ ಕಿರುಕುಳ: ದೂರು

ಅಮೆರಿಕದಲ್ಲಿರುವ ಸಂತ್ರಸ್ತೆಯ ಪತಿ, ಅತ್ತೆಗೆ ಪೊಲೀಸ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 20:04 IST
Last Updated 2 ಮಾರ್ಚ್ 2017, 20:04 IST
ಬೆಂಗಳೂರು: ‘ಮಾವ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಅದಕ್ಕೆ ಸಹಕರಿಸುವಂತೆ ಪತಿ ಹಾಗೂ ಅತ್ತೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಪತ್ನಿ ಬಸವನಗುಡಿ ಠಾಣೆಗೆ ದೂರು ಕೊಟ್ಟಿದ್ದಾರೆ.
 
ದೂರಿನ ಅನ್ವಯ ಲೈಂಗಿಕ ದೌರ್ಜನ್ಯ (ಐಪಿಸಿ 354) ಹಾಗೂ ವರದಕ್ಷಿಣೆ ಕಿರುಕುಳ (ಐಪಿಸಿ 498ಎ) ಆರೋಪಗಳಡಿ ಪ್ರಕರಣ ದಾಖಲಿಸಿರುವ ಪೊಲೀಸರು, ಸಂತ್ರಸ್ತೆಯ ಮಾವನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅಮೆರಿಕದಲ್ಲಿರುವ ಅವರ ಪತಿ ಹಾಗೂ ಅತ್ತೆಗೆ ಕರೆ ಮಾಡಿ ವಿಚಾರಣೆಗೆ ಕರೆದಿದ್ದಾರೆ.
 
‘ಮದುವೆ ಬಳಿಕ ಕೆಲಸದ ನಿಮಿತ್ತ ಪತಿ ವಿದೇಶಕ್ಕೆ ತೆರಳಿದರು. ಹೀಗಾಗಿ, ನಾನು ಅತ್ತೆ–ಮಾವನ ಜತೆ ಇಂದಿರಾನಗರದ ಮನೆಯಲ್ಲಿದ್ದೆ. ಆಗ ಮೈ ಮುಟ್ಟಿ ಮಾತನಾಡಿಸುತ್ತಿದ್ದ ಮಾವ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದರು. ಈ ಬಗ್ಗೆ ಪತಿ ಹಾಗೂ ಅತ್ತೆ ಬಳಿ ಅಲವತ್ತುಕೊಂಡರೆ, ಅವರ ಇಚ್ಛೆಯಂತೆಯೇ ನಡೆದುಕೊ ಎಂದು ತಾಕೀತು ಮಾಡಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. 
 
ಅಲ್ಲಿಗೂ ಬಂದರು: ‘ಈ ನಡುವೆ ಮಾವ ಮನೆಯಲ್ಲಿ ಮೈ–ಕೈ ಮುಟ್ಟಿ ಮಾತನಾಡಿಸುತ್ತಿದ್ದರು. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದರು. ಮುಕ್ತವಾಗಿ ಬೆರೆಯುವಂತೆ ಪೀಡಿಸುತ್ತಿದ್ದರು. ಈ ಬಗ್ಗೆ ಪತಿಗೆ ಕರೆ ಮಾಡಿ ಹೇಳಿದಾಗ, ನಾನು ಬರುವವರೆಗೂ ಅನುಸರಿಸಿಕೊಂಡು ಹೋಗು. ಇಲ್ಲದಿದ್ದರೆ, ಸಾಯಿಸಿಬಿಡುತ್ತೇನೆ ಎಂದು ಬೆದರಿಸಿದ್ದರು.’
 
‘ಈ ಹಿಂಸೆ ಸಹಿಸಲಾರದೆ ಸ್ವಂತ ಖರ್ಚಿನಲ್ಲಿ ನಾನೇ ಅಮೆರಿಕಕ್ಕೆ ತೆರಳಿ ಪತಿಯ ಮನೆಯನ್ನು ಸೇರಿಕೊಂಡೆ. ಕೆಲ ದಿನಗಳ ಬಳಿಕ ಅತ್ತೆ–ಮಾವ ಅಲ್ಲಿಗೂ ಬಂದರು. ಹೀಗೆ, ನನಗೆ ಅಮೆರಿಕದಲ್ಲೂ ಕಿರುಕುಳ ತಪ್ಪಲಿಲ್ಲ. ಮಾವನ ಕಾಟ ತಾಳಲಾರದೆ ನಗರಕ್ಕೆ ವಾಪಸಾದ ನಾನು, ತವರು ಮನೆ ಸೇರಿಕೊಂಡೆ.’
 
‘ಈಗ ಮಾವ ಕೂಡ ನಗರಕ್ಕೆ ಮರಳಿದ್ದಾರೆ. ಈ ರೀತಿಯಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಪತಿ ಹಾಗೂ ಅತ್ತೆ–ಮಾವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಕೋರಿರುವುದಾಗಿ ಬಸವನಗುಡಿ ಪೊಲೀಸರು ತಿಳಿಸಿದರು.  
 
ವಿದೇಶಕ್ಕೆ ಹಾರಿದ ಪತಿ
ಸಂತ್ರಸ್ತೆ ತುಮಕೂರಿನರಾಗಿದ್ದು,  ಇಂದಿರಾನಗರದ ಸಾಫ್ಟ್‌ವೇರ್ ಉದ್ಯೋಗಿ ಜತೆ  ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ 2016ರ ಏಪ್ರಿಲ್‌ 27ರಂದು ವಿವಾಹ ನೆರವೇರಿತ್ತು ಎಂದು ಪೊಲೀಸರು ಹೇಳಿದ್ದಾರೆ.

‘ಮದುವೆ ಸಂದರ್ಭದಲ್ಲಿ ಪತಿಗೆ 40 ಗ್ರಾಂನ ಎರಡು ಚಿನ್ನದ ಸರಗಳು, ಕೈಗಡಿಯಾರ, ಎರಡೂವರೆ ಕೆ.ಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಅಲ್ಲದೆ, ಪೋಷಕರು ₹ 10 ಲಕ್ಷ ವ್ಯಯಿಸಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ವಿವಾಹವಾದ ಏಳನೇ ದಿನಕ್ಕೇ ಪತಿ ಕೆಲಸದ ನಿಮಿತ್ತ ಅಮೆರಿಕಕ್ಕೆ ಹೊರಟರು. ನಾನೂ ಜೊತೆಗೆ ಬರುವುದಾಗಿ ಹೇಳಿದಾಗ,  ವೀಸಾ ಬಂದ ಕೂಡಲೇ ಕರೆಸಿಕೊಳ್ಳುವುದಾಗಿ ಭರವಸೆ ನೀಡಿ ಹೋಗಿದ್ದರು. ಆ ನಂತರ ಮತ್ತೆಂದೂ ಅಲ್ಲಿಗೆ ಕರೆಸಿಕೊಳ್ಳುವ ಪ್ರಸ್ತಾಪವನ್ನೇ ಮಾಡಲಿಲ್ಲ.’

‘ಇತ್ತೀಚೆಗೆ ಪತಿಗೆ ನಾನೇ ಕರೆ ಮಾಡಿ, ಅಲ್ಲಿಗೆ ಕರೆಸಿಕೊಳ್ಳುವಂತೆ ಕೋರಿದೆ. ಅದಕ್ಕೆ ತವರು ಮನೆಯಿಂದ ₹ 5 ಲಕ್ಷ ನಗದು ಹಾಗೂ ₹ 2 ಲಕ್ಷ ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ಬರುವುದಾದರೆ ಬಾ. ಇಲ್ಲದಿದ್ದರೆ ಅಲ್ಲೇ ಇದ್ದುಬಿಡು ಎಂದರು’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.