ADVERTISEMENT

ಮೀಸಲಾತಿ ನಿಗದಿ: ಮುಂದೂಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:16 IST
Last Updated 26 ನವೆಂಬರ್ 2015, 20:16 IST

ಬೆಂಗಳೂರು: ‘ವಿಧಾನ ಪರಿಷತ್‌  ಚುನಾವಣೆ ಮುಗಿಯುವವರೆಗೆ  ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಬಾರದು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ಮೀಸಲಾತಿ ನಿಗದಿಪಡಿಸಬೇಕು.  ಎಂದೂ ಕೆಲವು ಶಾಸಕರು ಗುರುವಾರ ಇಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಒತ್ತಾಯಿಸಿದರು.

ರಾಜ್ಯ ಚುನಾವಣಾ ಆಯೋಗವೇ ಮೀಸಲಾತಿ ನಿಗದಿಪಡಿಸುತ್ತದೆ ಎಂದು ಸಚಿವರೊಬ್ಬರು ತಿಳಿಸಿದರು. ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದರು.

ಜೆಡಿಎಸ್‌ ಜತೆ ಮೈತ್ರಿಗೆ ಆಕ್ಷೇಪ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವುದಕ್ಕೂ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ಮೈತ್ರಿಯಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದೂ  ಕೆಲವು ಶಾಸಕರು ಪ್ರತಿಪಾದಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

ರೈತರ ಆತ್ಮಹತ್ಯೆ ತಡೆಯಲು ಅವರ ಸಾಲಮನ್ನಾ ಮಾಡಬೇಕು ಎಂದು  ಶಾಸಕರೊಬ್ಬರು ಪ್ರಸ್ತಾಪಿಸಿದಾಗ, ‘ಸದ್ಯದ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ತಿಳಿಸಿದರು.‘ಸಚಿವರು ಶಾಸಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ’ ಎಂಬ ದೂರು ಈ ಬಾರಿಯೂ ಸಭೆಯಲ್ಲಿ ಪ್ರತಿಧ್ವನಿಸಿತು. 

ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರು, ಸಚಿವರು ಶಾಸಕರ ಬಗ್ಗೆ ಅನಾದರ ತೋರಿಸುವ ಬಗ್ಗೆ  ಪ್ರಸ್ತಾಪಿಸಿದರು. ಆಗ ಸಚಿವ ದಿನೇಶ್‌ ಗುಂಡೂರಾವ್‌, ‘ಶಾಸಕರು ಪ್ರತಿ ಸಭೆಯಲ್ಲಿ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಯಾವ ಸಚಿವರು ಮನವಿಗೆ ಸ್ಪಂದಿಸಿಲ್ಲ ಎಂಬ ಬಗ್ಗೆ ನೇರವಾಗಿ ಮುಖ್ಯಮಂತ್ರಿಗೆ ದೂರು ನೀಡಬೇಕು’ ಎಂದು ಏರುದನಿಯಲ್ಲೇ ತಿಳಿಸಿದರು.

ಇದಕ್ಕೆ ಮುಖ್ಯಮಂತ್ರಿ ಕೂಡಾ ಸಹಮತ ವ್ಯಕ್ತಪಡಿಸಿದರು. ‘ಎತ್ತಿನಹೊಳೆ ಯೋಜನೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕರಾವಳಿ ಜಿಲ್ಲೆಗಳಿಗೆ ಪಶ್ಚಿಮವಾಹಿನಿ ಯೋಜನೆಗಾದರೂ ಅನುದಾನ ಒದಗಿಸಬೇಕು’ ಎಂದು ಶಾಸಕ ಮೊಯಿದ್ದೀನ್‌ ಬಾವಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.