ADVERTISEMENT

ಮೀಸಲಾತಿ ಪಟ್ಟಿ ಅಸಿಂಧು?

​ಪ್ರಜಾವಾಣಿ ವಾರ್ತೆ
Published 27 ಮೇ 2015, 20:22 IST
Last Updated 27 ಮೇ 2015, 20:22 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಲುವಾಗಿ ನಗರಾಭಿವೃದ್ಧಿ ಇಲಾಖೆ ಹೊಸ ಮೀಸಲಾತಿ ಪಟ್ಟಿಯನ್ನು ನಿಗದಿಪಡಿಸಲು ಮುಂದಾಗಿದೆ. ಆದರೆ, ರಾಜ್ಯ ಚುನಾವಣಾ ಆಯೋಗವು ಹೊಸ ಮೀಸಲಾತಿ ಪಟ್ಟಿಯನ್ನು ಒಪ್ಪಿಕೊಳ್ಳುವುದು ಅನುಮಾನ ಎನ್ನಲಾಗಿದೆ.

ಮೇ 31ರ ಒಳಗೆ  ಬಿಬಿಎಂಪಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು  ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಏಕಸದಸ್ಯ ಪೀಠ ಮಾರ್ಚ್‌ 30ರಂದು ನಿರ್ದೇಶನ ನೀಡಿತ್ತು. ಇದನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಪಡಿಸಿತು. ಈ ಆಧಾರದಲ್ಲಿ ನಗರಾಭಿವೃದ್ಧಿ ಇಲಾಖೆಯು ಆಯೋಗಕ್ಕೆ ಸಲ್ಲಿಸಿದ್ದ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಹಿಂದಕ್ಕೆ ಪಡೆದಿತ್ತು.

‘ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ಸುಪ್ರಿಂಕೋರ್ಟ್‌ನ ತ್ರಿಸದಸ್ಯ ಪೀಠ    ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ. ಹಾಗಾಗಿ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರುವುದು ಊರ್ಜಿತವಾಗುವುದಿಲ್ಲ. ನಗರಾಭಿವೃದ್ಧಿ ಇಲಾಖೆ ಈಗಾಗಲೇ ಸಲ್ಲಿಸಿರುವ ಮೀಸಲಾತಿ ಪಟ್ಟಿಯ ಆಧಾರದಲ್ಲೇ ಚುನಾವಣೆ ನಡೆಸಬೇಕಾಗುತ್ತದೆ’ ಎಂದು ಆಯೋಗದ ಮೂಲಗಳು ತಿಳಿಸಿವೆ.

‘ಈಗಾಗಲೇ ಸಲ್ಲಿಸಲಾದ ಮೀಸಲಾತಿ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಬೇಕೇ? ಬೇಡವೇ? ಎಂಬ ಬಗ್ಗೆ ಕಾನೂನು  ತಜ್ಞರ ಸಲಹೆ ಪಡೆಯುತ್ತಿದ್ದೇವೆ’ ಎಂದು ಆಯೋಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ನಿಗದಿಯಂತೆ ಮೇ 31ರ ಒಳಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದೆವು. ಬೆಂಗಳೂರು  ನಗರ ಜಿಲ್ಲಾಧಿಕಾರಿ ಅವರು ವಾರ್ಡ್‌  ಪುನರ್ವಿಂಗಡಣಾ ಪಟ್ಟಿಯನ್ನೂ ಸಲ್ಲಿಸಿದ್ದರು. ಮೇ 17ರಂದು ಚುನಾವಣೆ ನಡೆಸಿ ಮೇ 20ರಂದು ಮತ ಎಣಿಕೆ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಮೇ 17ರಂದು ಐಪಿಎಲ್‌ ಕ್ರಿಕೆಟ್‌ ಪಂದ್ಯ ನಿಗದಿಯಾಗಿದ್ದ ಕಾರಣ ಮತದಾನದ ದಿನಾಂಕವನ್ನು ಮೇ 27ಕ್ಕೆ, ಮತ ಎಣಿಕೆಯನ್ನು ಮೇ 30ಕ್ಕೆ ನಿಗದಿ ಪಡಿಸಿದ್ದೆವು. ಅಷ್ಟರಲ್ಲಿ ಸುಪ್ರೀಂ ಕೋರ್ಟ್‌,  ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಿತು’ ಎಂದು ಅವರು ತಿಳಿಸಿದರು.  

‘ನಗರದಲ್ಲಿ ಕೆರೆ ಒತ್ತುವರಿ ಮಾಡಿಕೊಂಡ ಮನೆಗಳನ್ನು ಜಿಲ್ಲಾಡಳಿತ ಕೆಡವಿದ್ದರೂ, ಸಂತ್ರಸ್ತರ ಮತದಾನದ ಹಕ್ಕು ಮೊಟಕುಗೊಳ್ಳುವುದಿಲ್ಲ’ ಎಂದು ಅವರು ತಿಳಿಸಿದರು.

‘ಮೂರು ತಿಂಗಳೊಳಗೆ ಚುನಾವಣೆ’
‘ಸುಪ್ರೀಂ ಕೋರ್ಟ್‌, ಬಿಬಿಎಂಪಿಗೆ ಮೂರು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಮೇ 5ರಂದು ಸೂಚಿಸಿದೆ. ನಮಗೆ ಚುನಾವಣಾ ಸಿದ್ಧತೆಗೆ 12 ವಾರಗಳ ಕಾಲಾವಕಾಶ ಸಾಕು. ಗ್ರಾಮ ಪಂಚಾಯಿತಿ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಈ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರಿ ತಿಳಿಸಿದರು.

‘ಬಿಬಿಎಂಪಿಯ ವಾರ್ಡ್‌ಗಳ  ಪುನರ್ವಿಂಗಡಣೆ, ವಾರ್ಡ್‌ವಾರು ಮೀಸಲಾತಿಯ ಸರದಿಪಟ್ಟಿ (ರೋಸ್ಟರ್‌) ನಿಗದಿಪಡಿಸುವ ಅಧಿಕಾರ ಆಯೋಗಕ್ಕಿಲ್ಲ. ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ದಿನಾಂಕ ನಿಗದಿಪಡಿಸುವ ಮುನ್ನ ಸರ್ಕಾರದ ಜತೆ ಸಮಾಲೋಚನೆ ನಡೆಸಬೇಕು ಎಂಬ ನಿಯಮ ಇದೆ. ಸರ್ಕಾರದ ಜತೆ ಸಮಾಲೋಚನೆ ನಡೆಸುವುದಕ್ಕೆ ತೊಡಕೇನೂ ಇಲ್ಲ. ಆದರೆ, ಸರ್ಕಾರ ವಾರ್ಡ್‌ಗಳ ಪುನರ್ವಿಂಗಡಣೆ ಮಾಡಿ ಮತದಾರರ ಪಟ್ಟಿಯನ್ನು ಸಕಾಲದಲ್ಲಿ ಒಪ್ಪಿಸದಿದ್ದರೆ, ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸದಿದ್ದರೆ ಆಯೋಗವು ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದು.  ಈ ಅಧಿಕಾರವನ್ನೂ ಆಯೋಗಕ್ಕೇ ನೀಡಬೇಕು ಎಂದು ಅನೇಕ ಬಾರಿ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.