ADVERTISEMENT

ಮುಖ್ಯಮಂತ್ರಿ ಸೇರಿ 469 ಮಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

ಸರ್ಕಾರಿ ಜಾಗ ಒತ್ತುವರಿ, ಭ್ರಷ್ಟರ ರಕ್ಷಣೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:16 IST
Last Updated 27 ಆಗಸ್ಟ್ 2016, 20:16 IST

ಬೆಂಗಳೂರು: ‘ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಹಾಗೂ ಭ್ರಷ್ಟರನ್ನು ರಕ್ಷಿಸಿದ’ ಆರೋಪದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 469 ಮಂದಿ ವಿರುದ್ಧ ಪಾಲಿಕೆಯ ಸದಸ್ಯ ಎನ್‌.ಆರ್‌.ರಮೇಶ್‌ ಅವರು 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶುಕ್ರವಾರ ಖಾಸಗಿ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ.

‘ನಗರದಲ್ಲಿ 480 ಕಿ.ಮೀ ಉದ್ದದ ರಾಜಕಾಲುವೆ, 1,500 ಎಕರೆ ವಿಸ್ತೀರ್ಣದ ಮೀಸಲು ವಲಯ ಒತ್ತುವರಿಯಾಗಿದೆ. ಅದರ ಪೈಕಿ ಶೇ 75ರಷ್ಟು ಜಾಗವನ್ನು ರಾಜಕಾರಣಿಗಳು, ಪ್ರಭಾವಿಗಳು ಕಬಳಿಸಿದ್ದಾರೆ. ಕೆಲ ರಾಜಕಾರಣಿಗಳು,  ಪ್ರಭಾವಿಗಳಿಗೆ ಸಹಕರಿಸಿದ್ದರೆ, ಇನ್ನು ಕೆಲವರು ಭ್ರಷ್ಟ ಅಧಿಕಾರಿಗಳ ಪರ ನಿಂತಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಾಖಲೆಗಳ ಸಮೇತ ಕೋರ್ಟ್‌ ಮೆಟ್ಟಿಲೇರಿದ್ದೇನೆ’ ಎಂದು ಎನ್‌.ಆರ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್‌, ಆರ್‌.ವಿ.ದೇವರಾಜ್‌, ಬಿ.ಗುರಪ್ಪ ನಾಯ್ಡು, ಎನ್‌.ಎ.ಹ್ಯಾರೀಸ್‌, ಶ್ಯಾಮನೂರು ಶಿವಶಂಕರಪ್ಪ, ಗೋವಿಂದ್‌ರಾಜು, ಎಂ.ವಿ.ರಾಜೀವ್‌ ಗೌಡ, ಜಿ.ಎ.ಬಾವಾ, ಎಂ.ಆರ್‌. ಸೀತಾರಾಮ್‌, ವಿವಿಧ ಇಲಾಖೆಗಳ 91 ಅಧಿಕಾರಿಗಳು ಹಾಗೂ 368 ಮಂದಿ ಬಿಲ್ಡರ್‌ಗಳ ವಿರುದ್ಧ ಮೊಕದ್ದಮೆ ಹೂಡಿದ್ದೇನೆ’.

‘ಅಕ್ರಮ ಎಸಗಿದ ಕೆಲ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ. ಅಷ್ಟಾದರೂ ಅಂಥ ಅಧಿಕಾರಿಗಳನ್ನು ಮೂಲ ಹುದ್ದೆಯಲ್ಲಿ ಮುಂದುವರಿಸಲು ಈ ಎಲ್ಲ ರಾಜಕಾರಣಿಗಳು ಶಿಫಾರಸ್ಸು ಪತ್ರವನ್ನೂ ನೀಡಿದ್ದಾರೆ. ಆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯೊಂದಿಗೆ ಲಗತ್ತಿಸಲಾಗಿದೆ’.

‘ಒರಿಯನ್‌ ಹಾಗೂ ಮಂತ್ರಿ ಮಾಲ್‌, ಯುಬಿ ಸಿಟಿ, ಪ್ರೆಸ್ಟೀಜ್‌ ಫೆರ್‌್ನ ರೆಸಿಡೆನ್ಸಿ, ಎಚ್‌.ಎಂ.ವರ್ಲ್ಡ್‌ ಸಿಟಿ, ಮಾನ್ಯತಾ ಟೆಕ್‌ ಪಾರ್ಕ್‌, ಎಸ್‌.ಎಸ್‌. ಆಸ್ಪತ್ರೆ ಸೇರಿ ಹಲವು ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಈ ಬಗ್ಗೆ  ದಾಖಲೆಗಳಿದ್ದರೂ ಮುಖ್ಯಮಂತ್ರಿ ಅವರು ಕ್ರಮ ಕೈಗೊಂಡಿಲ್ಲ’ ಎಂದು ರಮೇಶ್‌ ದೂರಿದರು.
ಈ ಅರ್ಜಿಯನ್ನು ಪರಿಶೀಲಿಸಿರುವ ನ್ಯಾಯಾಲಯವು ವಿಚಾರಣೆಯನ್ನು  ಸೆಪ್ಟೆಂಬರ್‌ 6ಕ್ಕೆ ನಿಗದಿಪಡಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.