ADVERTISEMENT

ಮುಗಿಲದಾರಿಯಲ್ಲಿ ನೀವೇ ಪೈಲಟ್‌ ಆಗಿರಿ...!

ರೋಚಕ ಅನುಭವ ನೀಡುವ ತೇಜಸ್‌ ಸಿಮುಲೇಟರ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ವೀಕ್ಷಕರೊಬ್ಬರು ತೇಜಸ್‌ ವಿಮಾನದ ಸಿಮುಲೇಟರ್‌ ಚಲಾಯಿಸಿದರು –ಪ್ರಜಾವಾಣಿ ಚಿತ್ರ
ವೀಕ್ಷಕರೊಬ್ಬರು ತೇಜಸ್‌ ವಿಮಾನದ ಸಿಮುಲೇಟರ್‌ ಚಲಾಯಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶರವೇಗದಲ್ಲಿ ಬಾನಿಗೆ ಏರಿ, ಗಿರಕಿ ಹೊಡೆದು, ಮೋಡಗಳ ನಡುವೆ ಲಾಗಾ  ಹಾಕುತ್ತಾ ಶತ್ರುಗಳ ಕಣ್ತಪ್ಪಿಸುವ ಭಾರತೀಯ ವಾಯುಪಡೆಯ ಸೂಪರ್‌ಸಾನಿಕ್‌ ‘ತೇಜಸ್‌’ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ರೋಚಕ ಅನುಭವವನ್ನು ಪಡೆಯಬೇಕೇ?

ಏರೊ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಬಂದವರಿಗೆ  ಈ ರೋಚಕ ಅನುಭವ ಕಟ್ಟಿಕೊಡಲು ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಎ) ತೇಜಸ್‌ನ ಮಾದರಿಯೊಂದನ್ನು (ಸಿಮುಲೇಟರ್‌) ತನ್ನ ಪ್ರದರ್ಶನ ಮಳಿಗೆಯಲ್ಲಿ ಸ್ಥಾಪಿಸಿದೆ. ಆಗಸದಲ್ಲಿ ತೇಜಸ್‌ ವಿಮಾನವನ್ನು ಮುನ್ನಡೆಸುವಾಗ  ಪಡೆಯುವ ಎಲ್ಲ ರೀತಿಯ ರೋಮಾಂಚನಕಾರಿ ಅನುಭವವನ್ನೂ  ಈ  ಸಿಮುಲೇಟರ್‌ ವಿಮಾನದ  ಕಾಕ್‌ಪಿಟ್‌ನಲ್ಲಿ ಕುಳಿತೂ  ಪಡೆಯಬಹುದು.  ಈ ಮಾದರಿ ವಿಮಾನದ ಪೈಲಟ್‌ ತಪ್ಪೆಸಗಿದರೂ ವಿಮಾನ ಅಪಘಾತವಾಗಿ ಜೀವ ಕಳೆದುಕೊಳ್ಳುವ ಭಯವಿಲ್ಲ. ಏಕೆಂದರೆ  ಈ ವಿಮಾನ ನಿಂತಲ್ಲಿಂದ ಕದಲುವುದೇ ಇಲ್ಲ! 

ಪ್ರಮುಖ ಡಿಸ್‌ಪ್ಲೇ ಹಾಗೂ ಇತರ ಮೂರು ಸಣ್ಣ ಡಿಸ್‌ಪ್ಲೇಗಳನ್ನೊಳಗೊಂಡ   ಮಲ್ಟಿ ಫಂಕ್ಷನಲ್‌ ಸ್ಮಾರ್ಟ್‌ ಡಿಸ್‌ಪ್ಲೇ ತೇಜಸ್‌ನ ಕಾಕ್‌ಪಿಟ್‌ನಲ್ಲಿದೆ.  ವಿಮಾನದ ವೇಗ, ಅದು  ಎಷ್ಟು ಎತ್ತರದಲ್ಲಿ ಚಲಿಸುತ್ತಿದೆ, ರನ್‌ವೇ ಪಥದ ವಿವರಗಳು ಇದರಲ್ಲಿ ಮೂಡುತ್ತವೆ. ಎಡಭಾಗದಲ್ಲಿ ಥ್ರಾಟಲ್‌ (ವೇಗ ನಿಯಂತ್ರಕ) ಅಳವಡಿಸಲಾಗಿದೆ. ಆಸನದ ಮುಂಭಾಗದಲ್ಲಿ ಕಂಟ್ರೋಲ್‌ ಸ್ಟಿಕ್‌ (ಸ್ಟಿಯರಿಂಗ್‌) ಅಳವಡಿಸಲಾಗಿದೆ.

ಕಾಕ್‌ಪಿಟ್‌ ಏರಿ ಸೀಟ್‌ ಬೆಲ್ಟ್‌ ಕಟ್ಟಿಕೊಂಡು, ಬ್ರೇಕ್‌ ತೆಗೆಯುತ್ತಿದ್ದಂತೆಯೇ ವಿಮಾನ ಮುಂದಕ್ಕೆ ಚಲಿಸಲು ಆರಂಭಿಸುತ್ತದೆ. ಥ್ರಾಟಲ್‌ ಬಳಸಿ ವೇಗವನ್ನು ನಿಧಾನವಾಗಿ ಹೆಚ್ಚಿಸುತ್ತಾ ಹೋಗಬೇಕು.  ಟೇಕಾಫ್‌ ಆಗಲು ವಿಮಾನವು ತಾಸಿನಲ್ಲಿ ಕನಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸಬೇಕು. ಒಮ್ಮೆ  ಟೇಕಾಫ್‌ ಆದ ಬಳಿಕ ಕಂಟ್ರೋಲ್‌ ಸ್ಟಿಕ್‌ ಬಳಸಿ ವಿಮಾನವನ್ನು ಬೇಕಾದ ದಿಕ್ಕಿನಲ್ಲಿ ಹಾರಿಸಬಹುದು. ಶರವೇಗದಲ್ಲಿ ಸಾಗುತ್ತಾ ಪಲ್ಟಿ ಹೊಡೆಯುವಂತೆ ಮಾಡಬಹುದು, ತಲೆ ಕೆಳಗಾಗಿ ಚಲಿಸಬಹುದು, ವೇಗವನ್ನು  ಹೆಚ್ಚಿಸಬಹುದು.

ವಿಮಾನ ಹಾರುವಾಗ ಭೂದೃಶ್ಯ ಹೇಗೆ ಕಾಣಿಸುತ್ತದೋ ಅದೇ ಅನುಭವವನ್ನೂ ಈ ಮಾದರಿ ವಿಮಾನವೂ ನೀಡುತ್ತದೆ. ಮಳೆ, ಸುಡುಬಿಸಿಲು, ಮೋಡಗಳು, ಮಂಜು ಮುಸುಕಿದ ವಾತಾವರಣದ ನಡುವೆ ವಿಮಾನವನ್ನು ಚಲಾಯಿಸುವ ಅನುಭವಗಳನ್ನೂ ಪಡೆಯಬಹುದು.  ರಾತ್ರಿ ವೇಳೆಯ ಹಾರಾಟ, ದಿನದ ಬೇರೆ ಅವಧಿಯಲ್ಲಿ ಹಾರಾಟ ನಡೆಸುವ ಅನುಭೂತಿಯನ್ನೂ ಇದು ನೀಡಬಲ್ಲುದು.

‘ಸರಿಯಾದ ತರಬೇತಿ ಇಲ್ಲದೇ ವಿಮಾನ ಹಾರಾಟ ನಡೆಸುವುದೆಂದರೆ ಜೀವವನ್ನು  ಪಣಕ್ಕೊಡ್ಡಿದಂತೆ. ಪೈಲಟ್‌ಗಳಿಗೆ ಆರಂಭಿಕ ತರಬೇತಿ ನೀಡಲು ಈ ಸಿಮುಲೇಟರ್‌ ಅನ್ನು ಬಳಸುತ್ತೇವೆ. ಇದನ್ನು ಬಳಸಿ ಪೈಲಟ್‌ಗಳಿಗೆ ತರಬೇತಿ ನೀಡುವುದು ಸುಲಭ. ಇದಕ್ಕೆ ತಗಲುವ ವೆಚ್ಚವೂ ಕಡಿಮೆ’ ಎಂದು ಎಡಿಎ ಪೈಲೆಟ್‌ ವೆಹಿಕಲ್‌ ಇಂಟರ್‌ಪೇಸ್‌ ಕಾರ್ಯಕ್ರಮದ ಮುಖ್ಯಸ್ಥ ಪಿ.ಸುರೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅವರು ಹೇಗೆ ವಿಮಾನ ಹಾರಾಟ ನಡೆಸುತ್ತಾರೆ ಎಂಬುದನ್ನು ಪರೀಕ್ಷಿಸಲು ಈ ಮಾದರಿ ವಿಮಾನ ತುಂಬಾ ಸಹಕಾರಿ.  ನೈಜ ಹಾರಾಟದಲ್ಲಿ ಒಬ್ಬ ಪೈಲಟ್‌ಗೆ ಸಿಗುವ ಎಲ್ಲಾ ಅನುಭವವನ್ನೂ ಈ ಸಿಮುಲೇಟರ್‌ನ ಮೂಲಕವೂ ಪಡೆಯಬಹುದು’  ಎಂದರು.

‘ತೇಜಸ್‌ ವಿಮಾನದಲ್ಲಿ ಪೈಲಟ್‌ಗೆ  ಕೆಲಸ ಕಡಿಮೆ. ಕೇವಲ ಥ್ರಾಟಲ್‌ ಹಾಗೂ ಕಂಟ್ರೋಲ್‌ ಸ್ಟಿಕ್‌ ಬಳಸುವ ಮೂಲಕ ಬಹುತೇಕ ಎಲ್ಲ ರೀತಿಯ ಕಾರ್ಯಾಚರಣೆಯನ್ನು ನಡೆಸಬಹುದು. ಆಪತ್ಕಾಲದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡುವುದು ಕಷ್ಟಸಾಧ್ಯ ಎಂದು ಕಂಡರೆ,  ಸ್ವಯಂಚಾಲಿತ ಮೋಡ್‌ ಆಯ್ಕೆ ಮಾಡಿಕೊಳ್ಳಬಹುದು. ಆಗ ವಿಮಾನ ತನ್ನಿಂದತಾನೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡುತ್ತದೆ’ ಎಂದು ಅವರು ತಿಳಿಸಿದರು. ವೈಮಾನಿಕ ಪ್ರದರ್ಶನದಲ್ಲಿ  ಸಾರ್ವಜನಿಕರು ಉಚಿತವಾಗಿ ತೇಜಸ್‌ ವಿಮಾನ ಹರಿಸುವ ಅನುಭವ ಪಡೆಯಲು ಎಡಿಎ ಅವಕಾಶ ಕಲ್ಪಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.