ADVERTISEMENT

ಮೂರು ಸ್ಕೈವಾಕ್‌ಗಳು ಸಾರ್ವಜನಿಕರಿಗೆ ಮುಕ್ತ

ಫೋರಂ ಮಾಲ್‌ ಬಳಿ ಎಸ್ಕಲೇಟರ್‌ ಸಹಿತ ಪಾದಚಾರಿ ಮೇಲ್ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 2 ಮೇ 2016, 20:01 IST
Last Updated 2 ಮೇ 2016, 20:01 IST
ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ ಬಳಿ ಸೋಮವಾರ ಉದ್ಘಾಟನೆಗೊಂಡ ಸ್ಕೈವಾಕ್‌
ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ ಬಳಿ ಸೋಮವಾರ ಉದ್ಘಾಟನೆಗೊಂಡ ಸ್ಕೈವಾಕ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಹೊಸೂರು ರಸ್ತೆಯ ಫೋರಂ ಮಾಲ್ ಹತ್ತಿರ, ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಗಳನ್ನು (ಸ್ಕೈವಾಕ್‌) ಸೋಮವಾರ ಉದ್ಘಾಟಿಸಲಾಯಿತು.

ಫೋರಂ ಮಾಲ್‌ ಬಳಿಯ  ಎಸ್ಕಲೇಟರ್‌ ಸಹಿತ ಸ್ಕೈವಾಕ್‌ನಲ್ಲಿ ಸಿಸಿ ಟಿವಿ ಕ್ಯಾಮೆರಾ, ಜನರೇಟರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಲಿಫ್ಟ್‌ ಚಾಲನೆ ಮಾಡುವ ಆಪರೇಟರ್‌ಗಳನ್ನು ನೇಮಿಸಲಾಗಿದೆ. ಬೆಳಿಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ಎಸ್ಕಲೇಟರ್‌ ಕಾರ್ಯಾಚರಣೆ ನಡೆಸಲಿದೆ.

ಗೋಪಾಲನ್‌ ಮಾಲ್‌ ಬಳಿ  ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಯ ಸ್ಕೈವಾಕ್‌ನಲ್ಲಿ ಲಿಫ್ಟ್‌ ಸೌಲಭ್ಯ, ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಳಿಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ಲಿಫ್ಟ್‌ಗಳು ಕಾರ್ಯಾಚರಣೆ ನಡೆಸಲಿವೆ.

ಫೋರಂ ಮಾಲ್‌ ಬಳಿ ನಿರ್ಮಿಸಿರುವ ಎಸ್ಕಲೇಟರ್‌ ಸಹಿತ ಸ್ಕೈವಾಕ್‌ ಅನ್ನು ಉದ್ಘಾಟಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ನಗರದಲ್ಲಿ ಅಗತ್ಯವಿರುವ ಕಡೆ ಅತ್ಯಾಧುನಿಕ ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡಬೇಕು. ಆದರೆ, ದುಬಾರಿ ನೆಲ ಬಾಡಿಗೆ ವಿಧಿಸಿರುವುದರಿಂದ ಸ್ಕೈವಾಕ್‌ ನಿರ್ಮಾಣಕ್ಕೆ ಟೆಂಡರ್‌ ಕರೆದರೂ ಬಿಡ್‌ ಮಾಡಲು ಯಾರೂ ಮುಂದೆ ಬರುತ್ತಿಲ್ಲ.  ನೆಲಬಾಡಿಗೆ ಇಲ್ಲದೆ ಗುತ್ತಿಗೆ ನೀಡಬೇಕು. ಆ ಮೂಲಕ ಜನರ ಹಿತ ಕಾಪಾಡಬೇಕು’ ಎಂದರು.

‘ಬಸ್ ತಂಗುದಾಣ, ಸಾರ್ವಜನಿಕ ಶೌಚಾಲಯ, ಸ್ಕೈವಾಕ್‌ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಏಕಗವಾಕ್ಷಿ ವ್ಯವಸ್ಥೆ ಮೂಲಕ ಕಲ್ಪಿಸಬೇಕು. ಇದರಿಂದ ಕಾಮಗಾರಿಗಳು ವಿಳಂಬವಾಗುವುದು ತಪ್ಪುತ್ತವೆ’ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ‘ಸಾರ್ವಜನಿಕರು, ಅಂಗವಿಕಲರು, ವೃದ್ಧರ ಅನುಕೂಲಕ್ಕಾಗಿ ಕಡ್ಡಾಯವಾಗಿ ಲಿಫ್ಟ್‌ ಅಥವಾ ಎಸ್ಕಲೇಟರ್‌ಗಳನ್ನು ಒಳಗೊಂಡ ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ಸ್ಕೈವಾಕ್‌ಗಳ ನಿರ್ಮಾಣಕ್ಕೆ ಬೇಗ ಅನುಮತಿ ದೊರೆಯುತ್ತಿಲ್ಲ’ ಎಂದರು.

ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ, ‘ಬೆಂಗಳೂರಿನಲ್ಲೇ ಮೊದಲ ಎಸ್ಕಲೇಟರ್‌ ಸಹಿತ ಸ್ಕೈವಾಕ್‌ ಇದು. ಗುತ್ತಿಗೆ ಪಡೆದ ಸಂಸ್ಥೆಯು 20 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ. ಸುರಕ್ಷತೆ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು’ ಎಂದರು.

‘ನಗರದ 120 ಕಡೆಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲು ಸಾಧ್ಯತಾ ವರದಿಯನ್ನು ಪಡೆಯಲಾಗಿದೆ. ಇದುವರೆಗೂ ಒಟ್ಟು 29 ಸ್ಥಳಗಳಲ್ಲಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. 9 ಸ್ಥಳಗಳಲ್ಲಿ ಸ್ಕೈವಾಕ್‌ಗಳು ನಿರ್ಮಾಣಗೊಂಡಿವೆ. 3 ಸ್ಕೈವಾಕ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 17 ಕಡೆಗಳಲ್ಲಿ ತಾಂತ್ರಿಕ ಕಾರಣಗಳಿಂದ ನಿರ್ಮಾಣ ವಿಳಂಬವಾಗಿದೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌, ‘20 ವರ್ಷಗಳ ಹಿಂದೆ ಮೆಜೆಸ್ಟಿಕ್‌ನಲ್ಲಿ ಸಿಮೆಂಟ್‌ನಿಂದ ಸ್ಕೈವಾಕ್‌ ನಿರ್ಮಿಸಲಾಗಿತ್ತು. ಎರಡೂ ಕಡೆ ಗೋಡೆ ನಿರ್ಮಾಣದಿಂದ ಸುರಂಗದಂತೆ ಭಾಸವಾಗುತ್ತಿತ್ತು. ಹೀಗಾಗಿ ಜನರು ಸ್ಕೈವಾಕ್‌ ಅನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಇಸ್ಪೀಟ್‌ ಆಡುವವರು, ಅಕ್ರಮ ಚಟುವಟಿಕೆಗಳ ತಾಣವಾಗಿತ್ತು’ ಎಂದರು.

‘ಫೋರಂ ಮಾಲ್‌ ಬಳಿ ತೆರೆದ ಸ್ಕೈವಾಕ್‌ ನಿರ್ಮಾಣದ ಜತೆಗೆ ಎಸ್ಕಲೇಟರ್‌ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ವೃದ್ಧರು, ಹಿರಿಯರಿಗೆ ಅನುಕೂಲವಾಗಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರೊಂದಿಗೆ ವಾಗ್ವಾದ
ಗೋಪಾಲನ್‌ ಮಾಲ್‌ ಬಳಿ ನಿರ್ಮಿಸಿರುವ ಸ್ಕೈವಾಕ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಆಜಾದ್‌ ನಗರದ ಪಾಲಿಕೆ ಸದಸ್ಯೆ ಸುಜಾತಾ ಡಿ.ಸಿ.ರಮೇಶ್‌ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತ ವರಪ್ರಸಾದ್‌ ಅವರು ಸಚಿವ ಕೆ.ಜೆ.ಜಾರ್ಜ್‌ ಅವರೊಂದಿಗೆ ವಾಗ್ವಾದ ನಡೆಸಿದರು.

‘ಸ್ಕೈವಾಕ್‌ ಆಜಾದ್‌ ನಗರದ ವ್ಯಾಪ್ತಿಗೂ ಒಳಪಡುತ್ತದೆ. ಆದರೆ ಈ ಭಾಗದ ಬಿಬಿಎಂಪಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕೆ.ಜೆ.ಜಾರ್ಜ್‌ ಅವರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ನಗರದ ವಸತಿ ಕಟ್ಟಡಗಳಿಗೆ ಶೇ 20, ವಾಣಿಜ್ಯ ಕಟ್ಟಡಗಳಿಗೆ ಶೇ 25ಕ್ಕಿಂತ ಹೆಚ್ಚಿನ ತೆರಿಗೆ ವಿಧಿಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಮುಂದಿನ ವರ್ಷ ತೆರಿಗೆ ಕಟ್ಟುವಾಗ ಸರಿಪಡಿಸಲಾಗುವುದು
-ಕೆ.ಜೆ. ಜಾರ್ಜ್‌  
ಬೆಂಗಳೂರು ನಗರಾಭಿವೃದ್ಧಿ ಸಚಿವ

ಅಂಕಿ–ಅಂಶ
₹21.50 ಲಕ್ಷ ಮೂರೂ ಸ್ಕೈವಾಕ್‌ಗಳಿಂದ ಬಿಬಿಎಂಪಿಗೆ ಬರುವ ವಾರ್ಷಿಕ ಆದಾಯ
20 ವರ್ಷಗಳು ಸ್ಕೈವಾಕ್‌ಗಳ ನಿರ್ವಹಣೆ ಅವಧಿ
₹2.50 ಕೋಟಿ ಎಸ್ಕಲೇಟರ್‌ ಸಹಿತ ಸ್ಕೈವಾಕ್‌ಗೆ ತಗುಲಿದ ವೆಚ್ಚ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.