ADVERTISEMENT

ಮೂರೇ ತಾಸಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಹಲ್ಲೆಕೋರ

ಬಿಎಂಟಿಸಿ ಬಸ್‌ನಲ್ಲಿದ್ದ ಮಹಿಳಾ ಟೆಕಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2017, 20:32 IST
Last Updated 31 ಆಗಸ್ಟ್ 2017, 20:32 IST

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಕಿಟಕಿ ಪಕ್ಕ ಕುಳಿತಿದ್ದ ಸಾಫ್ಟ್‌ವೇರ್ ಉದ್ಯೋಗಿ ಸ್ನೇಹಾ (22) ಎಂಬುವರ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ವಿರಾಚಿ (26) ಎಂಬಾತನನ್ನು, ಕೃತ್ಯ ನಡೆದ ಮೂರು ತಾಸುಗಳಲ್ಲೇ ಪತ್ತೆ ಮಾಡುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಒಡಿಶಾದ ವಿರಾಚಿ, 20 ದಿನಗಳ ಹಿಂದಷ್ಟೇ ನಗರಕ್ಕೆ ಬಂದು ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದ. ಹೊಸೂರು ರಸ್ತೆಯ ಹೋಟೆಲ್‌ವೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಈತ, ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ.

ಸ್ನೇಹಾ ಅಂಕೋಲಾದವರಾಗಿದ್ದು, ವೈಟ್‌ಫೀಲ್ಡ್‌ನಲ್ಲಿರುವ ‘ಕ್ಯಾಪ್ ಜೆಮಿನಿ’ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿಯ ‘ವೇಲಾಂಕಿಣಿ’ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದ ಅವರು, ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿಎಂಟಿಸಿ ಬಸ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.

ADVERTISEMENT

ಕೂಡ್ಲುಗೇಟ್ ಜಂಕ್ಷನ್‌ ಬಳಿ ಕೆಂಪು ಸಿಗ್ನಲ್ ಇದ್ದುದರಿಂದ ಚಾಲಕ ಬಸ್ ನಿಲ್ಲಿಸಿದ್ದರು. ಸಿಗ್ನಲ್ ಬಿಟ್ಟು ಇನ್ನೇನೂ ಬಸ್ ಹೊರಡಬೇಕು ಎನ್ನುವಷ್ಟರಲ್ಲಿ ಕಟ್ಟಡವೊಂದರ ಮರೆಯಿಂದ ಓಡಿ ಬಂದ ವಿರಾಚಿ, ಅವರ ಕೈಗೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ತಕ್ಷಣ ಇತರೆ ಪ್ರಯಾಣಿಕರು ಗಾಯಾಳುವನ್ನು ಬ್ಲಾಸಮ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಮನೆಗೆ ಮರಳಿದ್ದರು.

‘ಆ ವ್ಯಕ್ತಿಯನ್ನು ನೋಡಿದ್ದು ಇದೇ ಮೊದಲು. ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದ ಎಂದು ಸ್ನೇಹಾ ಹೇಳಿಕೆ ಕೊಟ್ಟರು. ಸ್ಥಳೀಯ ಕಟ್ಟಡಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆತನ ಚಹರೆ ಸಿಕ್ಕಿತು. ಅದನ್ನು ಎಲ್ಲ ಠಾಣೆಗಳಿಗೂ ರವಾನಿಸಿ ಕಾರ್ಯಾಚರಣೆ ಶುರು ಮಾಡಿದ್ದೆವು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮಧ್ಯಾಹ್ನ 2 ಗಂಟೆ ಸುಮಾರಿಗೆ ಈತ ಕೂಡ್ಲು ಬಳಿ ಸ್ಥಳೀಯರಿಗೆ ಬ್ಲೇಡ್ ತೋರಿಸಿ ಬೆದರಿಸುತ್ತಿದ್ದ. ಈ ವಿಚಾರ ತಿಳಿದ ಸ್ಥಳಕ್ಕೆ ದೌಡಾಯಿಸಿದ ಬಂಡೇಪಾಳ್ಯ ಪೊಲೀಸರು, ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು. ವಿಚಾರಣೆ ನಡೆಸಿದ ಬಳಿಕ ಸ್ನೇಹಾ ಅವರ ಮೇಲೆ ಹಲ್ಲೆ ನಡೆಸಿದ್ದು ಈತನೇ ಎಂಬುದು ಖಚಿತವಾಯಿತು’ ಎಂದು ಅವರು ಮಾಹಿತಿ ನೀಡಿದರು.

*
ವಿರಾಚಿ ಬಳಿ ಇದ್ದ ಎರಡು ಬ್ಲೇಡ್‌ಗಳನ್ನು ಜಪ್ತಿ ಮಾಡಲಾಗಿದೆ. ಸ್ನೇಹಾಗೂ ಆರೋಪಿಗೂ ಪರಿಚಯವಿಲ್ಲ. ಮಾನಸಿಕ ಅಸ್ವಸ್ಥನಂತೆ ವರ್ತಿಸುವ ಈತ, ಸಿಕ್ಕ ಸಿಕ್ಕವರ ಜತೆಗೆಲ್ಲ ಗಲಾಟೆ ಮಾಡಿಕೊಂಡು ಓಡಾಡಿದ್ದಾನೆ. ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ.
–ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.