ADVERTISEMENT

ಮೂಲ ಬೆಂಗಳೂರು ಮಾಯವಾಗಿದೆ

ವಿಜ್ಞಾನಿ ಟಿ.ವಿ. ರಾಮಚಂದ್ರ ವಿಷಾದ

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 19:52 IST
Last Updated 31 ಜುಲೈ 2015, 19:52 IST

ಬೆಂಗಳೂರು: ‘ಜಲಮೂಲಗಳ ಅತಿಕ್ರಮಣ, ವಿಪರೀತ ಪರಿಸರ ಮಾಲಿನ್ಯ, ಅವೈಜ್ಞಾನಿಕ ಕೈಗಾರಿಕೀಕರಣ, ಕಸದ ಸಮಸ್ಯೆ, ಎಲ್ಲೆ ಮೀರಿದ ನಗರೀಕರಣದಿಂದ ಮೂಲ ಬೆಂಗಳೂರು ತನ್ನ ಸೊಬಗು ಕಳೆದುಕೊಂಡಿದೆ’ ಎಂದು ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಕಳವಳ ವ್ಯಕ್ತಪಡಿಸಿದರು.

ಶುಕ್ರವಾರ ನಗರದಲ್ಲಿ  ‘ವಿಕಸನಕ್ಕಾಗಿ ವಿದ್ಯಾರ್ಥಿ’ (ಎಸ್‌ಎಫ್‌ಡಿ) ಸಂಘಟನೆ ಏರ್ಪಡಿಸಿದ್ದ ‘ಉತ್ತಮ ಬೆಂಗಳೂರು’ ಕುರಿತು ಏರ್ಪಡಿಸಿದ್ದ ಸಮ್ಮೇಳನ  ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಬಾಲ್ಯದಲ್ಲಿ ಬೆಂಗಳೂರಿನ ಹವಾಗುಣ ಅತ್ಯಂತ ಹಿತಕರವಾಗಿತ್ತು. ಬೇಸಿಗೆಯಲ್ಲಿ ಹೆಚ್ಚೆಂದರೆ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತಿತ್ತು. ಆದರೆ ಈಗ ಬೆಂಗಳೂರಿನ ವಾಯುಮಾಲಿನ್ಯ ಹೆಚ್ಚಾಗಿದ್ದು ಬೇಸಿಗೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರುತ್ತಿದೆ’ ಎಂದರು.

ಬೆಂಗಳೂರಿನಲ್ಲಿ ಮಿತಿಮೀರಿದ ನಗರೀಕರಣದಿಂದ ಮರ–ಗಿಡಗಳ ಸಂಖ್ಯೆ ಕುಸಿಯುತ್ತಿದೆ. ಬಿಲ್ಡರ್‌ಗಳ  ದುರಾಸೆಗೆ ಬೆಂಗಳೂರಿನ ಬಹುತೇಕ ಜಲಮೂಲಗಳು ಬಲಿಯಾಗಿವೆ. ಅಲ್ಲೀಗ ಬೃಹತ್ ಶಾಪಿಂಗ್‌ ಮಾಲ್‌ಗಳು, ಅಪಾರ್ಟೆಮೆಂಟ್‌ಗಳು ತಲೆ ಎತ್ತಿವೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಏಳುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳಿದರು.

‘ಶುದ್ದ ನೀರು ಎಂದು ಕರೆಯುವ ಬಾಟಲ್ ನೀರೂ ಶುದ್ದ ಅಲ್ಲ. ಬಾಟಲ್ ನೀರು ತಯಾರಿಕೆಯಿಂದ ಹಿಡಿದು ಸಾಗಣೆವರೆಗೂ ನಡೆಯುವ ರಾಸಾಯನಿಕ ಪ್ರಕ್ರಿಯೆಗಳು ನೀರನ್ನು ವಿಷವಾಗಿಸುತ್ತದೆ. ಇದರಿಂದ ಕ್ಯಾನ್ಸರ್ ರೋಗ ಕಂಡು ಬರುತ್ತಿರುವುದು ಸಂಶೋಧನೆಗಳಿಂದ ದೃಡಪಟ್ಟಿದೆ’ ಎಂದು ತಿಳಿಸಿದರು.

ಬೆಂಗಳೂರಿನ ನಿವಾಸಿಗಳಲ್ಲಿ ಇಲ್ಲಿನ ವಾತಾವರಣದಿಂದ 35ನೇ ವಯಸ್ಸಿನಲ್ಲೇ ಹೃದಯಾಘಾತ ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ತೀವ್ರ ಆತಂಕದ ವಿಚಾರವಾಗಿದೆ ಎಂದರು.

‘ಪರಿಸರ ರಕ್ಷಣೆಗಾಗಿ ಜನಜಾಗೃತಿ ಉಂಟುಮಾಡಬೇಕಿದೆ’ ಎಂದರು. ಪರಿಸರವಾದಿ ಹರಿಕೃಷ್ಣ, ‘ಸದ್ಯ ಉತ್ತಮ ಬೆಂಗಳೂರು ನಿರ್ಮಿಸಬೇಕಾದರೆ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಅಭಿವೃದ್ಧಿ ಎಂದರೆ ಕಾರು, ಬಂಗ್ಲೆ ಹೊಂದುವುದಲ್ಲ. ಭೂತಾಯಿಯನ್ನು ಉಳಿಸುವುದೇ ಅಭಿವೃದ್ಧಿ’ ಎಂದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬೆಂಗಳೂರು ಅಭಿವೃದ್ಧಿಯ ಅಂಶಗಳ ಬಗ್ಗೆ ಚರ್ಚಿಸಿದರು.
*
ಎತ್ತಿನಹೊಳೆ ಯೋಜನೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಯೋಜನೆಗಳು ರಾಜಕಾರಣಿಗಳಿಗೆ, ಗುತ್ತಿಗೆದಾರರಿಗೆ ಲಾಭ ಮಾಡುತ್ತವೆಯೇ ಹೊರತು ಜನಸಾಮಾನ್ಯರಿಗಲ್ಲ
-ಟಿ.ವಿ. ರಾಮಚಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.