ADVERTISEMENT

ಮೆಟ್ರೊ ಸಂಪರ್ಕ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಪ್ರದೀಪ್‌ಸಿಂಗ್‌ ಖರೋಲಾ(ಎಡತುದಿ) ಸಂಪರ್ಕ ಸಾರಿಗೆ ಸೇವೆಗೆ ಚಾಲನೆ ನೀಡಿದರು. ನಗರ ಯೋಜನಾ ತಜ್ಞ ಆರ್‌.ಕೆ.ಮಿಶ್ರಾ, ಬಿ–ಪ್ಯಾಕ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ರೇವತಿ ಅಶೋಕ್‌ ಇದ್ದರು. –ಪ್ರಜಾವಾಣಿ ಚಿತ್ರ
ಪ್ರದೀಪ್‌ಸಿಂಗ್‌ ಖರೋಲಾ(ಎಡತುದಿ) ಸಂಪರ್ಕ ಸಾರಿಗೆ ಸೇವೆಗೆ ಚಾಲನೆ ನೀಡಿದರು. ನಗರ ಯೋಜನಾ ತಜ್ಞ ಆರ್‌.ಕೆ.ಮಿಶ್ರಾ, ಬಿ–ಪ್ಯಾಕ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ರೇವತಿ ಅಶೋಕ್‌ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ, ಡಬ್ಲ್ಯುಆರ್‌ಐ ಇಂಡಿಯಾ, ಟೊಯೊಟಾ ಮೊಬಿಲಿಟಿ ಪ್ರತಿಷ್ಠಾನ ಹಾಗೂ ಬಿ–ಪ್ಯಾಕ್‌ ಸಂಸ್ಥೆಗಳ ಸಹಯೋಗದಲ್ಲಿ ರೂಪಿಸಿರುವ ‘ಮೆಟ್ರೊ ಸಂಪರ್ಕ ಸಾರಿಗೆ ಸೇವೆ’ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಅವರು ಶನಿವಾರ ಚಾಲನೆ ನೀಡಿದರು.

ಈ ಸೇವೆ ನೀಡಲು ಐದು ನವೋದ್ಯಮಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಉತ್ಸಾಹಿ ಯುವಜನರು ಸ್ಥಾಪಿಸಿರುವ ಕ್ವಿಕ್‌ ರೈಡ್‌, ಟಾಪ್‌ ರೂಟ್‌, ಮೆಟ್ರೊ ಬೈಕ್‌, ಕಾನ್‌ಸ್ಟಪಾರ್ಕ್‌ ಮತ್ತು ಸಿಫಾರ್ಸ್‌ ನವೋದ್ಯಮಗಳು ಇವೆ.

‘ಕ್ವಿಕ್‌ ರೈಡ್‌ ಆ್ಯಪ್‌ ಮೂಲಕ ನಿಗದಿತ ಸ್ಥಳದೆಡೆಗೆ ಹೋಗುತ್ತಿರುವ ವಾಹನಗಳನ್ನು ಗುರುತಿಸಿ, ಆ ವಾಹನ ಸವಾರರೊಂದಿಗೆ ಸಂಪರ್ಕ ಸಾಧಿಸಬಹುದು. ಸವಾರರಿಗೆ ನಿಗದಿತ ಮೊತ್ತ ನೀಡಿ ನಿರ್ದಿಷ್ಟ ಸ್ಥಳ ತಲುಪಲು ಈ ಆ್ಯಪ್‌ ಸಹಕಾರಿ’ ಎಂದು ಕಂಪನಿಯ ಅನಿಶ್‌ ತಿಳಿಸಿದರು.

ADVERTISEMENT

ಟಾಪ್‌ರೂಟ್‌ ಕಂಪನಿಯ ಸಿಬಿಶ್‌, ‘ಮನೆಯಿಂದ ಮೆಟ್ರೊ ನಿಲ್ದಾಣಗಳಿಗೆ ತಲುಪಲು ಮತ್ತು ಮೆಟ್ರೊ ನಿಲ್ದಾಣದಿಂದ ನಿಗದಿತ ಸ್ಥಳಕ್ಕೆ ತೆರಳಲು ಟಾಪ್‌ರೂಪ್‌ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಬೇಕು. ಮೆಟ್ರೊದಿಂದ ಇಳಿಯುವ ಮುನ್ನವೇ ನೋಂದಾಯಿಸಿದ ಪ್ರಯಾಣಿಕರ ಆಟೊವು ನಿಲ್ದಾಣದ ಎದುರಿಗೆ ಕಾಯುತ್ತಿರುತ್ತದೆ’ ಎಂದು ಹೇಳಿದರು.

ಮೆಟ್ರೊ ನಿಲ್ದಾಣದಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಖಾಲಿ ಇರುವ ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಿ, ವಾಹನ ನಿಲುಗಡೆ ಮಾಡಲು ನೆರವಾಗುವ ಕಾನ್‌ಸ್ಟಪಾರ್ಕ್‌ ಆ್ಯಪ್‌ ಈ ಸೇವೆಯಲ್ಲಿದೆ. ಮೆಟ್ರೊ ನಿಲ್ದಾಣಗಳಿಂದ ನಿಗದಿತ ಸ್ಥಳಗಳಿಗೆ ತೆರಳಲು ಸುಲಭಸಾಧ್ಯವಾದ ಮೆಟ್ರೊ ಬೈಕ್‌ ಸೇವೆ ಸಹ ಈ ಸಂಪರ್ಕ ಸಾರಿಗೆ ಸೇವೆಯ ಭಾಗವಾಗಿದೆ. ಈ ಸೇವೆ ಪಡೆಯಲು ಪ್ರತಿ ಕಿ.ಮೀ.ಗೆ ₹ 5 ಪಾವತಿಸಬೇಕು.

ಈ ಸೇವೆಯಲ್ಲಿನ ಸಿಫಾರ್ಸ್‌ ನವೋದ್ಯಮವು ಸಾರ್ವಜನಿಕ ಸಾರಿಗೆ ಬಳಸುವ ಜನರ ಸಮೀಕ್ಷೆ ಮಾಡುತ್ತಿದೆ. ಈ ಆ್ಯಪ್‌ಗಳನ್ನು ಗೂಗಲ್‌ ಪ್ಲೆ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.