ADVERTISEMENT

ಮೆಟ್ರೊ: 12ರಿಂದ ಪರೀಕ್ಷಾರ್ಥ ಸಂಚಾರ?

ಎಂ.ಜಿ. ರಸ್ತೆ– ಮೈಸೂರು ರಸ್ತೆ ಮಾರ್ಗ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬೆಂಗಳೂರು: ಎಂ.ಜಿ. ರಸ್ತೆ ನಿಲ್ದಾಣ­ದಿಂದ ಮೈಸೂರು ರಸ್ತೆಯ ನಾಯಂಡ­ಹಳ್ಳಿವರೆಗಿನ ‘ನಮ್ಮ ಮೆಟ್ರೊ’ ಮಾರ್ಗ­ದಲ್ಲಿ ಈ ತಿಂಗಳ 12ರಿಂದ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲು ಬೆಂಗ­ಳೂರು ಮೆಟ್ರೊ ರೈಲು ನಿಗಮವು ಸಿದ್ಧತೆ ನಡೆಸಿದೆ.

ಈ ಮಾರ್ಗದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ ಈಗಾಗಲೇ ನಿರ್ಮಾಣಗೊಂಡಿರುವ  ಸುರಂಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ.

ಮಿನ್ಸ್ಕ್ ಚೌಕ, ವಿಧಾನಸೌಧ, ಸೆಂಟ್ರಲ್‌ ಕಾಲೇಜು, ಮೆಜೆಸ್ಟಿಕ್‌ ಮತ್ತು ನಗರ ರೈಲು ನಿಲ್ದಾಣ– ಇವು ಈ ಮಾರ್ಗದ ನೆಲದಡಿಯ ನಿಲ್ದಾಣಗಳು.

ಈ ಬಗ್ಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ, ‘ಇದೇ ಮೊದಲ ಬಾರಿಗೆ ಸುರಂಗದಲ್ಲಿ ರೈಲು ಓಡಿಸುತ್ತಿದ್ದೇವೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಪರೀಕ್ಷಾರ್ಥ ಸಂಚಾರವನ್ನು ಗಮನಿಸಲು ನಿರ್ಧರಿಸಲಾಗಿದೆ’ ಎಂದರು.

‘ಮೊದಲ ರೈಲು ನೆಲದಡಿಯ ಐದು ನಿಲ್ದಾಣಗಳನ್ನು ಕ್ರಮಿಸಲು  ನಾಲ್ಕು ದಿನಗಳನ್ನು ತೆಗೆದುಕೊಳ್ಳಲಿದೆ. ಐದನೇ ದಿನ ಮಾಗಡಿ ರಸ್ತೆಯ ಎತ್ತರಿಸಿದ ಮಾರ್ಗವನ್ನು ತಲುಪಲಿದೆ’ ಎಂದು ಅವರು ತಿಳಿಸಿದರು.

‘ಪರೀಕ್ಷಾರ್ಥ ಸಂಚಾರ ಆರಂಭವಾದ ಮೂರು ತಿಂಗಳ ನಂತರ ವಾಣಿಜ್ಯ ಸಂಚಾರ ಶುರುವಾಗಲಿದೆ’ ಎಂದು ಅವರು ನುಡಿದರು.
ಬ್ಯಾರಿಕೇಡ್‌ ಮುಕ್ತ: ಮೇ ಮಧ್ಯ ಭಾಗದ ವೇಳೆಗೆ ಮಿನ್ಸ್ಕ್ ಚೌಕ, ವಿಧಾನಸೌಧ, ಸೆಂಟ್ರಲ್‌ ಕಾಲೇಜು ಬಳಿ ಮೆಟ್ರೊ ಕಾಮಗಾರಿಗೆ
ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವು­ಗೊಳಿಸಲಾಗುವುದು. ಆ ಹೊತ್ತಿಗೆ ಈ ಪ್ರದೇಶದಲ್ಲಿ ರಸ್ತೆಗಳನ್ನು ಮೊದಲು ಇದ್ದ ಹಾಗೆ ಪುನರ್‌ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

‘ಕೇಂದ್ರ ಬಜೆಟ್‌ನಲ್ಲಿ ಮೆಟ್ರೊ ಯೋಜನೆಗಾಗಿ  ₨ 1000 ಕೋಟಿ ನೀಡಲಾಗಿದೆ. ಎರಡನೇ ಹಂತದ ಯೋಜನೆಯ ಕಾಮಗಾರಿಗಳನ್ನೂ ಸದ್ಯದಲ್ಲೇ ಪ್ರಾರಂಭಿಸಲಾಗುವುದು.   ನಿಗಮಕ್ಕೆ ಹಣದ ಕೊರತೆ ಇಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.