ADVERTISEMENT

ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಲು ‘ಸುಪ್ರೀಂ’ ನಕಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಲು ‘ಸುಪ್ರೀಂ’ ನಕಾರ
ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಲು ‘ಸುಪ್ರೀಂ’ ನಕಾರ   

ನವದೆಹಲಿ: ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಿರುವ ನಿಯಮವನ್ನು ಪ್ರಶ್ನಿಸಿ ತಮ್ಮ ಕಕ್ಷಿಗಾರರಾದ ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಹಾಂ ಅವರು ಸಲ್ಲಿಸಿರುವ ಅರ್ಜಿಯು ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಸೆಪ್ಟೆಂಬರ್ 28ರಂದು (ಬುಧವಾರ) ನಡೆಯಲಿರುವ ಮೇಯರ್ ಚುನಾವಣೆಗೆ ತಡೆಯಾಜ್ಞೆ ನೀಡಬೇಕು ಎಂದು ವಕೀಲ ಶ್ರೀರಾಂ ಪರಕ್ಕತ್ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಇದು ಮೊದಲ ಅಥವಾ ಕೊನೆಯ ಚುನಾವಣೆ ಅಲ್ಲ. ಆದ್ದರಿಂದ ಚುನಾವಣೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಅಬ್ರಹಾಂ ಅವರ ಅರ್ಜಿಯ ವಿಚಾರಣೆ ನಡೆಸಲಾಗುತ್ತದೆ ಎಂದು ನ್ಯಾಯಮೂರ್ತಿ ರಂಜನ್ ಗೊಗೊಯ್‌ ಮತ್ತು ಪ್ರಫುಲ್ಲಾ ಸಿ.ಪಂತ್ ಅವರ ನ್ಯಾಯಪೀಠವು ತಿಳಿಸಿತು.

ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ವಿಭಾಗವು ಇನ್ನೊಂದು ವಿಭಾಗದ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡುವುದರಿಂದ ಪ್ರಜಾಪ್ರಭುತ್ವದ ಸಾರ್ವಭೌಮನಾದ ಮತದಾರನನ್ನು ಕಡೆಗಣಿಸಿದಂತಾಗುತ್ತದೆ ಎಂಬುದು ಅರ್ಜಿದಾರರ ವಾದ.

ಸಂವಿಧಾನ ವಿಧಿ 243ಆರ್‌ಗೆ ತಿದ್ದುಪಡಿ ತಂದು ಸಂಸದರು ಮತ್ತು ಶಾಸಕರಿಗೆ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಿರುವುದು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸಿದಂತಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.