ADVERTISEMENT

ಮೇಳ’ದಲ್ಲಿ ಆ್ಯಪ್‌ಗಳ ಅಬ್ಬರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:50 IST
Last Updated 20 ನವೆಂಬರ್ 2014, 19:50 IST

ಬೆಂಗಳೂರು: ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು? ಬೆಳೆಗೆ ರೋಗ ಬಂದಾಗ ಏನು ಮಾಡಬೇಕು? ಇಳುವರಿ ಹೆಚ್ಚಳಕ್ಕೆ ಯಾವ ಪೋಷ­ಕಾಂಶ ಬಳಸಬೇಕು? ಕೃಷಿ ತಜ್ಞರಿಂದ ಮಾಹಿತಿ ಪಡೆಯುವುದು ಹೇಗೆ?

ಈ ಎಲ್ಲಾ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಕೃಷಿ ಸಂಪರ್ಕ ಕೇಂದ್ರಗ­ಳಿ­ಗಾಗಲಿ ಅಥವಾ ಕೃಷಿ ತಜ್ಞರನ್ನು ಭೇಟಿಯಾಗುವ ಅವಶ್ಯ ಈಗ ಇಲ್ಲ. ಏಕೆಂದರೆ ಆ್ಯಂಡ್ರಾಯ್ಡ್‌ ಮೊಬೈಲ್‌ ಹೊಂದಿರುವ ರೈತರು ತಮ್ಮ ಹೊಲ, ಗದ್ದೆ, ತೋಟಗಳಲ್ಲಿಯೇ ಕೆಲ ನಿಮಿಷಗಳಲ್ಲಿ ಅಗತ್ಯ ಮಾಹಿತಿ ಪಡೆಯುವ ವ್ಯವಸ್ಥೆ ಇದೆ.

ಇದಕ್ಕೆ ಕಾರಣವಾಗಿರುವುದು ಮೊಬೈಲ್‌ ಆ್ಯಪ್‌ಗಳು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ‘ಕೃಷಿಮೇಳ’ದಲ್ಲಿ ಆ್ಯಪ್‌ಗಳದ್ದೇ ಅಬ್ಬರ. ಇಲ್ಲಿರುವ ಮಳಿಗೆಗಳಲ್ಲಿ ವಿವಿಧ ರೀತಿಯ ಆ್ಯಪ್‌ಗಳನ್ನು ಪ್ರದರ್ಶನಕ್ಕಿಡ­ಲಾ­ಗಿದ್ದು, ಇವುಗಳನ್ನು ರೈತರು ಕುತೂ­ಹಲದಿಂದ ವೀಕ್ಷಿಸುತ್ತಿ­ದ್ದದ್ದು ಕಂಡು­ಬಂತು. ಕೃಷಿಮೇಳ­ದಲ್ಲಿರುವ ಅಗ್ರಿಆ್ಯಪ್‌ (agriapp), ಸುಗರ್‌ಕೇನ್‌ ಕನ್ನಡ ಆ್ಯಪ್‌ (sugarcanekannada) ಹಾಗೂ  ಇ–ಸ್ಯಾಪ್‌ (ಎಲೆಕ್ಟ್ರಾನಿಕ್ಸ್ ಸಲ್ಯೂಷನ್ಸ್‌ ಎಗೇನ್ಸ್ಟ್‌್ ಅಗ್ರಿಕಲ್ಚರಲ್‌ ಪೆಸ್ಟ್‌) ಎಂಬ ತಂತ್ರಾಂಶ ವಿಭಿನ್ನವಾಗಿವೆ.

ಸುಗರ್‌ಕೇನ್‌ ಕನ್ನಡ...
ಜಯಲಕ್ಷ್ಮಿ ಆಗ್ರೊಟೆಕ್‌ ಅಭಿವೃದ್ಧಿಪ­ಡಿಸಿ­ರುವ ‘sugarcaneKannada’ ಆ್ಯಪ್‌ನಲ್ಲಿ ತಳಿಗಳು, ಸಸಿನಾಟಿ, ತಂತ್ರ­ಜ್ಞಾನ, ಕೀಟ ಮತ್ತು ರೋಗಗಳ ಕುರಿತು ಮಾಹಿತಿ ಇದೆ. ವಿಡಿಯೊ ಕೂಡ ಅಳವಡಿಸಲಾಗಿದೆ. ಆ್ಯಂಡ್ರಾಯ್ಡ್ ಅಥವಾ ಸ್ಮಾರ್ಟ್‌­ಫೋನ್‌ನ ಪ್ಲೇಸ್ಟೋರ್‌ಗೆ ಹೋಗಿ ‘sugarcane­Kannada’ ಆ್ಯಪ್‌ ಡೌನ್‌­ಲೋಡ್‌ ಮಾಡಿಕೊಳ್ಳಬಹುದು.

ಅಗ್ರಿಆ್ಯಪ್‌...
ಕ್ರಿಯಾಜೆನ್ ಅಗ್ರಿಟೆಕ್ ಸಂಸ್ಥೆಯ ಸಂಸ್ಥಾಪಕ ಡಾ. ಬಸವರಾಜ ಗಿರೆಣ್ಣವರ ಅವರು ‘ಅಗ್ರಿಆ್ಯಪ್‌’ ಅಭಿವೃದ್ಧಿಪಡಿಸಿ­ದ್ದಾರೆ. ಇದರಲ್ಲಿ ಬಿತ್ತನೆಯಿಂದ ಹಿಡಿದು ಕಟಾವಿನವರೆಗೆ ಮಾಹಿತಿ ಲಭ್ಯವಿದೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲೂ ಮಾಹಿತಿ ನೀಡಲಾಗಿದೆ. ಚಾಟ್ ಕೂಡ ಮಾಡಬಹುದು. ಜೊತೆಗೆ ಪರಿಣತರ ಜೊತೆ ಮಾತನಾ­ಡ­ಬ­ಹುದು. ಈ ತಂತ್ರಾಂಶದಲ್ಲಿ ಕೃಷಿಯ ನಾನಾ ವಿಷಯಗಳ ಬಗ್ಗೆ ವಿಡಿಯೊ ಪ್ರಾತ್ಯಕ್ಷಿಕೆ ಇದೆ. ಆಸಕ್ತರು ಆ್ಯಂಡ್ರಾಯ್ಡ್ ಅಥವಾ ಸ್ಮಾರ್ಟ್‌­ಫೋನ್‌ನ ಪ್ಲೇಸ್ಟೋರ್‌ಗೆ ಹೋಗಿ ‘agriapp’ ಆ್ಯಪ್‌ ಡೌನ್‌­ಲೋಡ್‌ ಮಾಡಿ­ಕೊಳ್ಳಬಹುದು.

ಇ–ಸ್ಯಾಪ್‌...
ರಾಯಚೂರು ಕೃಷಿ ವಿಶ್ವವಿದ್ಯಾಲ­ಯದ ಸಂಶೋಧಕರು ಅಭಿವೃದ್ಧಿಪಡಿ­ಸಿರುವ ‘ಇ–ಸ್ಯಾಪ್‌’ ತಂತ್ರಾಂಶವು ಕೀಟ ಹಾಗೂ ರೋಗಗಳ ಹಾವಳಿಗಳಿಂದ ಬೆಳೆಗಳನ್ನು ರಕ್ಷಿಸುವ ಬಗ್ಗೆ ಮಾಹಿತಿ ನೀಡುತ್ತದೆ. ಇದು ಆ್ಯಪ್‌ ಅಲ್ಲ. ಬದಲಾಗಿ  ಜಿಪಿಆರ್‌ಎಸ್ /ತ್ರೀ ಜಿ/ವೈಫೈ/­ಜಿಪಿಎಸ್ ಸೌಲಭ್ಯಗಳ ಜತೆಗೆ ಕ್ಯಾಮೆರಾ­ವನ್ನೂ ಹೊಂದಿರುವಂಥ, ನೋಡಲು ಟ್ಯಾಬ್ಲೆಟ್ ಹೋಲುವ ಪುಟ್ಟ ವಿದ್ಯುನ್ಮಾನ ಸಾಧನ.

ಈ ಸಾಧನ ಹೊಂದಿರುವ ರೈತರು ಬೆಳೆಗಳಿಗೆ ತಗಲುವ ರೋಗ, ಕೀಟ­ಬಾಧೆಯ ಚಿತ್ರವನ್ನು ಸೆರೆ ಹಿಡಿದು, ಇಂಟರ್ನೆಟ್‌ ಸಂಪರ್ಕ ಬಳಸಿಕೊಂಡು ವಿ.ವಿಗೆ ಕಳುಹಿಸಬೇಕು. ಆಗ ವಿಶ್ವ­ವಿದ್ಯಾಲಯದವರು ಪರಿಹಾರ ಸೂಚಿ­ಸು­ತ್ತಾರೆ. ಈ ತಂತ್ರಾಂಶ ರೈತರ ಹಾಗೂ ಕೃಷಿ ತಜ್ಞರ ಮಧ್ಯದ ಸಂಪರ್ಕ ಕೊಂಡಿ­ಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ಇದನ್ನು ಇನ್ನೂ ಮಾರುಕಟ್ಟೆಗೆ ಬಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT