ADVERTISEMENT

ಮೊಬೈಲ್‌ನಲ್ಲೇ ಪ್ರಾಚೀನ ಕೃತಿ ಓದಿ!

ಮಂಜುನಾಥ್ ಹೆಬ್ಬಾರ್‌
Published 26 ಫೆಬ್ರುವರಿ 2015, 19:36 IST
Last Updated 26 ಫೆಬ್ರುವರಿ 2015, 19:36 IST

ಬೆಂಗಳೂರು: ಕನ್ನಡದ ಪ್ರಾಚೀನ ಕೃತಿ ‘ಕವಿರಾಜ­ಮಾರ್ಗ’­ವನ್ನು ಈಗ ಮೊಬೈಲ್‌ನಲ್ಲೇ ಓದಬಹುದು!
ಸಾಹಿತ್ಯಾಸಕ್ತರು ಇನ್ನು ಮುಂದೆ ಕನ್ನಡ ಅಪರೂಪದ ಕೃತಿಗಳನ್ನು ಮೊಬೈಲ್‌ನಲ್ಲೇ ಓದಿ ಆನಂದಿಸಬಹುದು.

ಈ ಕೃತಿಗಳನ್ನು ಓದಲು ಓದುಗರು ‘ನ್ಯೂಸ್‌ ಹಂಟ್‌’ ಸಂಸ್ಥೆಯ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು. ಈಗಾಗಲೇ 26 ಕೃತಿಗಳು ಮೊಬೈಲ್‌ನಲ್ಲಿ ಲಭ್ಯ ಇವೆ. ಈ ಸಂಬಂಧ ಒಂದು ತಿಂಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನ್ಯೂಸ್‌ ಹಂಟ್‌ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಇದೇ ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಆ್ಯಪ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ 140 ಕೃತಿಗಳೂ ಒಂದೂವರೆ ತಿಂಗಳಲ್ಲಿ ಮೊಬೈಲ್‌ನಲ್ಲಿ ಲಭ್ಯವಾಗಲಿವೆ.

ನ್ಯೂಸ್‌ ಹಂಟ್‌ ಸಂಸ್ಥೆ ಉಚಿತವಾಗಿ ಈ ಕಾರ್ಯ ಮಾಡಿಕೊಡುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

‘ಕವಿರಾಜಮಾರ್ಗ, ಉತ್ತರ ಕರ್ನಾಟಕದ ಜನಪದ ಸಾಹಿತ್ಯ ಸಂಪುಟ,  ಕ್ರಾಂತಿ ಕಲ್ಯಾಣ, ಕನಕದಾಸರ ಕುರಿತ ಕೃತಿಗಳು ಸೇರಿದಂತೆ ಒಟ್ಟು 26 ಕೃತಿಗಳು ಮೊಬೈಲ್‌ನಲ್ಲಿ ಈಗ ಲಭ್ಯ ಇವೆ. ಎಲ್ಲವೂ ದೊಡ್ಡ ದೊಡ್ಡ ಕೃತಿಗಳು. ಕೆಲವೇ ದಿನಗಳಲ್ಲಿ ಕನ್ನಡ ಸಾಹಿತ್ಯದ ಲಕ್ಷಾಂತರ ಪುಟಗಳು ಮೊಬೈಲ್‌ನಲ್ಲಿ ಸಿಗಲಿವೆ’ ಎಂದರು.

ಕಾಗದರಹಿತ ಕಚೇರಿ: ಏಪ್ರಿಲ್‌ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಗದರಹಿತ ಕಚೇರಿ ಆಗಲಿದೆ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ರಾಜ್ಯದ ಮೊದಲ ಕಾಗದ­ರಹಿತ ಕಚೇರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣವೂ ಬೀಳಲಿದೆ ಎಂದು ಅವರು ತಿಳಿಸಿದರು.

ಕನ್ನಡ ವಿಕಿಪೀಡಿಯಾದ ಜವಾಬ್ದಾರಿ ಜುಲೈ ತಿಂಗಳಿಂದ ಇಲಾಖೆಗೆ ಬರಲಿದೆ. ಈಗ ಮಾಹಿತಿ ತಂತ್ರಜ್ಞಾನ ಇಲಾಖೆ ಬಳಿ ಇದೆ. ಇಲಾಖೆ ಪ್ರಕಟಿಸಿದ 140 ಕೃತಿ­ಗಳನ್ನು ಕನ್ನಡ ವಿಕಿಪೀಡಿಯಾಕ್ಕೆ ಹಾಕಲಾಗುವುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT