ADVERTISEMENT

ಯಡಿಯೂರಪ್ಪ ವಯಸ್ಸು 74 ಅಥವಾ 75..?

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 20:10 IST
Last Updated 27 ಫೆಬ್ರುವರಿ 2017, 20:10 IST

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ  ಸೋಮವಾರ ಜನ್ಮದಿನದ ಸಂಭ್ರಮವಾಗಿತ್ತು. ಅದರೆ ಅವರ ಅಭಿಮಾನಿಗಳು ಅವರಿಗೆ 74 ವರ್ಷ ತುಂಬಿತೊ ಅಥವಾ 75 ವರ್ಷ ತುಂಬಿತೊ ಎಂಬ ಜಿಜ್ಞಾಸೆಯಲ್ಲಿ ಮುಳುಗಿದ್ದರು!

ಹೀಗೊಂದು ಸ್ವಾರಸ್ಯಕರ ಚರ್ಚೆ ಪಕ್ಷದ ಕಾರ್ಯಕರ್ತರು, ರಾಜ್ಯ ಕಚೇರಿಯಲ್ಲಿ  ಭಾನುವಾರ ಮತ್ತು ಸೋಮವಾರ ಹರಿದಾಡುವ ಮೂಲಕ ಹಲವು ಆಲೋಚನೆಗಳಿಗೆ ಇಂಬು ನೀಡಿತು. ಆದರೆ, ಈ ಬಗ್ಗೆ ಗೊಂದಲಕ್ಕೆ ಸ್ವತಃ ತೆರೆ ಎಳೆದ ಯಡಿಯೂರಪ್ಪ ಅವರು, ‘ಯಾವುದೇ ಜಾಹೀರಾತು, ಪತ್ರಿಕಾ ಪ್ರಕಟಣೆಗಳಲ್ಲಿ 74 ವರ್ಷ ಎಂದೇ ನಮೂದಿಸಬೇಕು’ ಎಂದು ತಮ್ಮ ಆಪ್ತರಿಗೆ ಮೌಖಿಕ ಸೂಚನೆ ನೀಡಿದ್ದರು ಎಂದು ಗೊತ್ತಾಗಿದೆ.
ಅವರ ಜನ್ಮದಿನ 1943ರ ಫೆಬ್ರುವರಿ 27. ಈ ಲೆಕ್ಕದ ಅನುಸಾರ ಅವರಿಗೆ 73 ತುಂಬಿ 74 ಆರಂಭವಾಗುತ್ತದೆ.

ಆದರೆ, ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ ಯಡಿಯೂರಪ್ಪ–75 ಎಂದೇ ಉಲ್ಲೇಖವಾಗಿತ್ತು.  ಬಿಜೆಪಿಯ ಆಂತರಿಕ ನಿಯಮಗಳ ಪ್ರಕಾರ 75 ವರ್ಷ ತುಂಬಿದ ಧುರೀಣರು ಯಾವುದೇ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ.  ಹೀಗಾಗಿ 75 ವರ್ಷ ಎಂದು ಜಾಹೀರಾತುಗಳಲ್ಲಿ ಪ್ರಕಟವಾದರೆ ಅದು ಭವಿಷ್ಯದಲ್ಲಿ ತೊಂದರೆ ಉಂಟು ಮಾಡಬಹುದು ಎಂಬ ಗುಮಾನಿಯನ್ನು ಕೆಲ ಆಪ್ತರು ಯಡಿಯೂರಪ್ಪ ಎದುರು ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಯಡಿಯೂರಪ್ಪ ಅವರು ಜನ್ಮದಿನದ ಶುಭಾಶಯಗಳ ಜಾಹೀರಾತುಗಳಲ್ಲಿ 74 ವರ್ಷ ಎಂದೇ ನಮೂದಿಸುವಂತೆ ಮೌಖಿಕ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.

ADVERTISEMENT

‘74 ಎಂದು ಪ್ರಕಟವಾದರೆ, 2018ರ ಫೆಬ್ರುವರಿಯಲ್ಲಿ 75ಕ್ಕೆ ಕಾಲಿಟ್ಟಿದ್ದೇನೆ ಎಂದು ಪ್ರತಿಪಾದಿಸುವ ಮೂಲಕ ಮುಖ್ಯಮಂತ್ರಿ ಗಾದಿಗೇರುವ ಸಂದರ್ಭ ಬಂದರೆ ಆಗ ಆ ಹಾದಿ ಸುಗಮವಾಗಿರುತ್ತದೆ ಎಂಬ ತರ್ಕ ಇದರ ಹಿಂದೆ ಇದೆ’ ಎಂದು ಮೂಲಗಳು ತಿಳಿಸಿವೆ.

ಸಮರ್ಥ ವಾದ ಮಂಡಿಸಲು ಸಿದ್ಧತೆ
ಬಿ.ಎಸ್‌. ಯಡಿಯೂರಪ್ಪ ವಿರುದ್ಧ  ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರು ಮತ್ತು ಲೋಕಾಯುಕ್ತ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದರು. 

ಈ ಪ್ರಕರಣದಲ್ಲಿ  ಸಮರ್ಥ ವಾದ ಮಂಡಿಸಲು ಬೇಕಾದ ಸಿದ್ಧತೆ ಹಾಗೂ ದಾಖಲೆಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.ಗೋವಿಂದರಾಜ್‌ ಡೈರಿ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿರುವ ಬೆನ್ನಲ್ಲೇ, ಭಾನುವಾರ ನಡೆದ ಕಾಂಗ್ರೆಸ್‌ ಸಮನ್ವಯ  ಸಮಿತಿಯಲ್ಲಿ  ಯಡಿಯೂರಪ್ಪ ವಿರುದ್ಧದ  ಪ್ರಕರಣಗಳಿಗೆ ಮರು ಜೀವ ನೀಡಲು ತೀರ್ಮಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.