ADVERTISEMENT

ರಕ್ತದ ಮಡುವಲ್ಲಿ ಒದ್ದಾಡಿದ ಟೆಕ್ಕಿ

ಆಸ್ಪತ್ರೆಗೆ ಸೇರಿಸದೇ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ಜನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 20:07 IST
Last Updated 13 ಫೆಬ್ರುವರಿ 2016, 20:07 IST

ಬೆಂಗಳೂರು: ಬೈಕ್ ಅಪಘಾತವಾಗಿ ಸವಾರ ಮುಕ್ಕಾಲು ಗಂಟೆಯಿಂದ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಜನ ಆಸ್ಪತ್ರೆಗೆ ಕರೆದೊಯ್ಯದೆ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳುತ್ತ ಕಲಹರಣ ಮಾಡಿದ ಘಟನೆ ಚಿಕ್ಕಜಾಲ ಸಮೀಪದ ಮೀನುಕುಂಟೆ ರೈಲ್ವೆ ಮೇಲ್ಸೇತುವೆಯಲ್ಲಿ ಶನಿವಾರ ನಡೆದಿದೆ.

ಅಪಘಾತದಲ್ಲಿ ಕರ್ನೂಲು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಎಸ್‌.ಕಿರೀಟಿ (30) ಗಂಭೀರವಾಗಿ ಗಾಯಗೊಂಡಿದ್ದು, ಬ್ಯಾಟರಾಯನಪುರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಕಿರೀಟಿ ಅವರು ಬೈಕ್‌ನಲ್ಲಿ ದೇವನಹಳ್ಳಿ ಕಡೆಗೆ ಹೋಗುತ್ತಿದ್ದರು. ವೇಗವಾಗಿ ಬಂದ ಅವರು, ಮೀನುಕುಂಟೆ ರೈಲ್ವೆ ಮೇಲ್ಸೇತುವೆ ಹತ್ತಿರ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಅಡ್ಡಾದಿಡ್ಡಿಯಾಗಿ ಸಾಗಿದ ಬೈಕ್, ಪಾದಚಾರಿ ಮಾರ್ಗದ ತಡೆಗೋಡೆಗೆ ಡಿಕ್ಕಿಯಾಗಿದೆ. ಕೆಳಗೆ ಬಿದ್ದಾಗ ಕೈ–ಕಾಲು, ತಲೆ ಹಾಗೂ ಬೆನ್ನಿಗೆ ತೀವ್ರ ಪೆಟ್ಟು ಬಿದ್ದಿದೆ.

‘ರಕ್ತ ಸೋರಿಕೆಯಾಗಿ ರಸ್ತೆ ತುಂಬೆಲ್ಲಾ ಹರಿದಿದೆ. ಇತರೆ ವಾಹನಗಳ ಸವಾರರು, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವ ಸೌಜನ್ಯವನ್ನೂ ತೋರದೆ, ತಮ್ಮ ಪಾಡಿಗೆ ತಾವು ಹೋಗಿದ್ದಾರೆ. 15 ನಿಮಿಷಗಳ ನಂತರ ಸ್ಥಳೀಯರೊಬ್ಬರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಆಂಬುಲೆನ್ಸ್‌ ಬರಲಿಲ್ಲ: ‘ಸ್ಥಳೀಯರು ಕರೆ ಮಾಡಿ ಅರ್ಧ ಗಂಟೆಯಾದರೂ ಆಂಬುಲೆನ್ಸ್‌ ಸ್ಥಳಕ್ಕೆ ಬರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಚಿಕ್ಕಜಾಲ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಪಿ.ಮುರಳೀಧರ್, ತಮ್ಮ ಜೀಪಿನಲ್ಲೇ ಗಾಯಾಳುವನ್ನು ‘ಪ್ರೊ–ಲೈಫ್’ ಆಸ್ಪತ್ರೆಗೆ ಕರೆದೊಯ್ದರು. ಆಂಬುಲೆನ್ಸ್‌ಗೆ ಅಷ್ಟು ಹೊತ್ತು ಕಾಯುವ ಬದಲು ಜನ ತಮ್ಮ ಕಾರಿನಲ್ಲೋ, ಆಟೊದಲ್ಲೋ  ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನಿತ್ಯ ಇಬ್ಬರು ಸಿಬ್ಬಂದಿಯನ್ನು ಮೀನುಕುಂಟೆ ಮೇಲ್ಸೇತುವೆ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿತ್ತು. ಆದರೆ, ಶುಕ್ರವಾರ ಹೆಚ್ಚಿನ ಸಿಬ್ಬಂದಿಯನ್ನು ಚುನಾವಣಾ ಬಂದೋಬಸ್ತ್‌ಗೆ ಕಳುಹಿಸಿದ್ದರಿಂದ ಅಲ್ಲಿ ಸಿಬ್ಬಂದಿ ಇರಲಿಲ್ಲ’ ಎಂದು ಮಾಹಿತಿ ನೀಡಿದರು.

ಫೋಟೊ ತೆಗಿಯುತ್ತಿದ್ದರು: ‘ದಾರಿಹೋಕರೊಬ್ಬರು ಗಾಯಾಳುಗೆ ನೀರು ಕುಡಿಸಿರುವುದನ್ನು ಬಿಟ್ಟರೆ, ಬೇರೆ ಯಾರೂ ನೆರವಿಗೆ ಬಂದಿಲ್ಲ. ಇನ್ನು ಕೆಲವರು ಅಪಘಾತದ ಸ್ಥಳವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದರು. ಈ ಬಗ್ಗೆ ವಿಚಾರಿಸಿದ್ದಕ್ಕೆ, ಮಾಧ್ಯಮಗಳಿಗೆ ಕೊಡಬೇಕು ಎಂಬ ಉತ್ತರ ಕೊಟ್ಟರು’  ಎಂದು ಸಿಬ್ಬಂದಿ ಹೇಳಿದರು.

ಕುಟುಂಬಕ್ಕೆ ಮಾಹಿತಿ: ಬಿಟಿಎಂ ಲೇಔಟ್‌ನ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ನೆಲೆಸಿದ್ದ ಕಿರೀಟಿ, ಜೆ.ಪಿ.ನಗರದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಆ ಕಂಪೆನಿಯ ನೌಕರರ ಮೂಲಕ ಕುಟುಂಬ ಸದಸ್ಯರಿಗೆ ವಿಷಯ ಮುಟ್ಟಿಸಿದ್ದೇವೆ. ಗಾಯಾಳುವನ್ನು ತಡವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರಿಂದ ಹೆಚ್ಚು ರಕ್ತ ಹೋಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

ಮೊದಲು ಆಸ್ಪತ್ರೆಗೆ ಸೇರಿಸಿ
‘ಅಪಘಾತ ಸಂಭವಿಸಿದಾಗ ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ಮೊದಲು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ಮನವಿ ಮಾಡಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ತಾವು ಸಾಕ್ಷಿಗಳಾಗಿ ಠಾಣೆ–ಕೋರ್ಟ್‌ ಮೆಟ್ಟಿಲೇರಬೇಕಾಗುತ್ತದೆ ಎಂಬ ಭಯದಿಂದ ಜನ ನೆರವಿಗೆ ಬರುವುದಿಲ್ಲ. ಆದರೆ, ಇಂಥ ಪ್ರಕರಣಗಳಲ್ಲಿ  ಪೊಲೀಸರು ಸಾಕ್ಷಿ ಹೇಳುವಂತೆ ಅವರನ್ನು ಒತ್ತಾಯಿಸುವುದಿಲ್ಲ. ಜೀವ ರಕ್ಷಣೆಗೆ ಮೊದಲ ಆದ್ಯತೆ’ ಎಂದರು.

ಪೊಲೀಸರಿಗೆ ಹೆಸರು ಹೇಳಬೇಕಿಲ್ಲ
‘ಅಪಘಾತದ ಸಂತ್ರಸ್ತರನ್ನು ಯಾರು ಬೇಕಾದರೂ ಆಸ್ಪತ್ರೆಗೆ ಕರೆದೊಯ್ಯಬಹುದು. ಅವರು ವೈದ್ಯರಿಗಾಗಲೀ, ಆ ನಂತರ ಬರುವ ಪೊಲೀಸರಿಗಾಗಲೀ ತಮ್ಮ ವಿವರಗಳನ್ನು ನೀಡಬೇಕಾದ ಅಗತ್ಯವಿಲ್ಲ. ತನಿಖೆಗೆ ಸಹಕರಿಸುವ ಇಚ್ಛೆ ಇದ್ದರೆ ಮಾತ್ರ ಹೆಸರು–ವಿವರ ನೀಡಬಹುದು. ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿಯುವಂತೆ ಪೊಲೀಸರೂ ಅವರನ್ನು ಬಲವಂತ ಮಾಡುವುದಿಲ್ಲ’ ಎಂದು ಸುಪ್ರಿಂ ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.