ADVERTISEMENT

ರಾಜ್ಯ ಸರ್ಕಾರಕ್ಕೆ ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 20:34 IST
Last Updated 18 ಏಪ್ರಿಲ್ 2015, 20:34 IST
ರಾಜ್ಯ ಸರ್ಕಾರಕ್ಕೆ ತಿಂಗಳ ಗಡುವು
ರಾಜ್ಯ ಸರ್ಕಾರಕ್ಕೆ ತಿಂಗಳ ಗಡುವು   

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಗಡುವು ವಿಧಿಸಿದರು.

ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ  ನೂರಾರು ಕಾರ್ಯಕರ್ತರು ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಮೆರವಣಿಗೆ ನಡೆಸಿದರು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ ಬಹುತೇಕ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪುರಭವನದ ಬಳಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಅವರ ಶವಯಾತ್ರೆ ನಡೆಸಿದರು.
ಮೆರವಣಿಗೆ ವೇಳೆ ಕಾರ್ಯಕರ್ತರು ತಮಿಳುನಾಡು ಮುಖಂಡರ ವಿರುದ್ಧ ಘೋಷಣೆ ಕೂಗಿದರು.  ಬಳಿಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಮಾತನಾಡಿ, ‘ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಈಗಿನ ಹೋರಾಟ ರಾಜ್ಯ ಸರ್ಕಾರದ ವಿರುದ್ಧ ಅಲ್ಲ. ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹೋರಾಟ ತಮಿಳುನಾಡು ಸರ್ಕಾರದ ವಿರುದ್ಧ’ ಎಂದರು.
ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನಟ ಪುನೀತ್‌ ರಾಜ್ ಕುಮಾರ್‌ ಮಾತನಾಡಿ, ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಈ ಯೋಜನೆ ಜಾರಿ ಅಗತ್ಯ ಇದೆ. ಇದಕ್ಕೆ ರಾಜ್ಯದ ಎಲ್ಲರೂ ಬೆಂಬಲಿಸಬೇಕು ಎಂದರು.
ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್‌ ಮಾತನಾಡಿ, ‘ಯೋಜನೆ ಅನುಷ್ಠಾನ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಬೆಂಬಲ ಸೂಚಿಸಿ ಬಂದ್‌ ನಡೆಸಲಾಗುತ್ತಿದೆ. ಬಂದ್‌ಗೆ ಸಾಹಿತ್ಯ ಕ್ಷೇತ್ರದ ಸಂಪೂರ್ಣ ಬೆಂಬಲ ಇದೆ’ ಎಂದರು.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಮೇಕೆದಾಟು ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಯೋಜನೆಯಿಂದ ಹಿಂದಕ್ಕೆ ಸರಿಯಬಾರದು ಎಂದು ವಿನಂತಿಸಿದರು.

ನಟ ಪ್ರೇಮ್‌, ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘದ  ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ  ಹೋರಾಟಗಾರರಾದ ‍ಪ್ರವೀಣ್‌ ಶೆಟ್ಟಿ, ಕೆ.ಆರ್‌.ಕುಮಾರ್‌ ಪಾಲ್ಗೊಂಡಿದ್ದರು.

ಆಸ್ಪತ್ರೆಗೆ ತಟ್ಟದ ಬಂದ್‌ ಬಿಸಿ
ಬೆಂಗಳೂರು:
ಬಂದ್‌ನಿಂದ ನಗರದಲ್ಲಿ ಶನಿವಾರ ಬಹುತೇಕ ಎಲ್ಲ ರೀತಿಯ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಆಸ್ಪತ್ರೆಗಳು ಎಂದಿನಂತೆ ಸಹಜ ರೀತಿಯಲ್ಲಿ ಕಾರ್ಯನಿರ್ವಹಿಸಿದವು.

ನಗರದ ಬೌರಿಂಗ್‌ ಆಸ್ಪತ್ರೆ, ಕೆ.ಸಿ. ಜನರಲ್‌ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿ ನಿತ್ಯದ ವಾತಾವರಣ ಕಂಡು ಬಂತು. ವೈದ್ಯರು, ನರ್ಸ್‌ಗಳು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖ ಕಂಡು ಬಂದಿತ್ತು.
ಆಟೊ ರಿಕ್ಷಾ ಯೂನಿಯನ್‌ನವರು ಬಂದ್‌ಗೆ ಬೆಂಬಲ ಸೂಚಿಸಿದ್ದರೂ ಕೆಲ ಆಟೊ ಚಾಲಕರು ರೋಗಿಗಳನ್ನು ಕೊಂಡೊಯ್ಯುವ ಮೂಲಕ ಮಾನವೀಯತೆ ತೋರಿದರು.

‘ಬಂದ್‌ಗೆ ನಮ್ಮ ಸಂಘದ ಬೆಂಬಲ ಇದೆ. ಆಸ್ಪತ್ರೆಗೆ ಬಂದು ಹೋಗುತ್ತಿರುವ ರೋಗಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಕರೆದೊಯ್ಯುತ್ತಿಲ್ಲ’ ಎಂದು ಆಟೊ ಚಾಲಕ ರಹೀಮ್‌ ಹೇಳಿದರು.

ADVERTISEMENT

ಮುಚ್ಚಿದ ಹೋಟೆಲ್‌, ಹಸಿದವರಿಗೆ ನಿರಾಸೆ
ಬೆಂಗಳೂರು: ಬಂದ್‌ ಬಗ್ಗೆ ಮಾಹಿತಿ ಇದ್ದರೂ ಕೆಲವರು ಹೋಟೆಲ್‌ ಮುಚ್ಚಿರುವುದನ್ನು ನೋಡಿ ನಿರಾಸೆಯಿಂದ ವಾಪಸ್‌ ಆಗುವ ದೃಶ್ಯ ಶನಿವಾರ ಸಾಮಾನ್ಯವಾಗಿತ್ತು.

ಆದರೆ ಬಹುತೇಕ ಬಡಾವಣೆಗಳ ಹೋಟೆಲ್‌ಗಳು ಮುಂಜಾನೆ ಅರ್ಧ ಬಾಗಿಲು ತೆರೆದು ವ್ಯಾಪಾರ ನಡೆಸಿದವು.  ಆರ್‌.ಟಿ.ನಗರದ ಮುಖ್ಯ ರಸ್ತೆಯಲ್ಲಿರುವ ಹೋಟೆಲ್‌ಗಳ ಹೊರಗೆ ತಿಂಡಿ ಪೊಟ್ಟಣ ಹಿಡಿದ ಜನರು ಅಲ್ಲಿಯೇ  ಗಡಿಬಿಡಿಯಲ್ಲಿ ಉಪಾಹಾರ ಮುಗಿಸಿದರು. ಬೆಂಗಳೂರು ದಕ್ಷಿಣ ಭಾಗದಲ್ಲೂ ಇದೇ ಸ್ಥಿತಿಯಿತ್ತು.

ಮುಂಜಾನೆ ಸ್ವಲ್ಪ ಹೊತ್ತು ವಹಿವಾಟು ನಡೆಯಿತಾದರೂ ಹತ್ತು ಗಂಟೆಯ ನಂತರ ಅದೂ ಸ್ಥಗಿತಗೊಂಡಿತು. ‘ಕಾಯಂ ಗ್ರಾಹಕರಿಗಾಗಿ ಬೆಳಿಗ್ಗೆ ತಿಂಡಿ ಮಾತ್ರ ಸಿದ್ಧಪಡಿಸಿದ್ದೇವು. ಅಹಿತಕರ ಘಟನೆ ನಡೆಯಬಹುದು ಎಂಬ ಕಾರಣದಿಂದ ಬಾಗಿಲು ಮುಚ್ಚಿ  ವ್ಯಾಪಾರ ಮಾಡಿದೆವು’  ಎಂದು  ಹೋಟೆಲ್‌ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು   ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.   ಕೆಲವು ಕಟ್ಟಡಗಳ ಮಾಲೀಕರು ಮತ್ತು ವಾಹನ ಮಾಲೀಕರು ರಾಜ್ಯ ಧ್ವಜವನ್ನು  ಕಟ್ಟಿ, ಮುಷ್ಕರ ನಿರತರಿಂದ ಅಭಯ ಪಡೆದರು. ಹೀಗಾಗಿ ಅರಿಶಿಣ ಮತ್ತು ಕೆಂಪು ಬಣ್ಣದ ಧ್ವಜಗಳು ಗಾಜುಗಳಿಂದ ಅಲಂಕೃತವಾದ ಕಟ್ಟಡಗಳಲ್ಲಿ  ರಾಜಾಜಿಸುತ್ತಿದ್ದವು.ಪೆಟ್ರೋಲ್ ಬಂಕ್, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪೆಟ್ರೋಲ್‌ ಬಂಕ್‌ ಹಾಗೂ ಹೋಟೆಲ್‌ ಸಿಬ್ಬಂದಿ ಕ್ರಿಕೆಟ್‌ ಆಟದಲ್ಲಿ ತೊಡಗಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಚರಿಸುವ ವಾಹನಗಳಿಗೆ ಪ್ರತಿಭಟನಾಕಾರರು ತಡೆಯೊಡ್ಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.