ADVERTISEMENT

ರೇಷ್ಮೆ ಕೃಷಿ ಅಭಿವೃದ್ಧಿ ಹೊಳಹುಗಳ ಚರ್ಚೆ

23ನೇ ಅಂತರರಾಷ್ಟ್ರೀಯ ರೇಷ್ಮೆ ಕೃಷಿ ಮತ್ತು ಉದ್ದಿಮೆ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST
ಅಂತರರಾಷ್ಟ್ರೀಯ ರೇಷ್ಮೆ ಮಂಡಳಿಯು ಸೋಮವಾರ ಆಯೋಜಿಸಿದ್ದ ‘23ನೇ ಅಂತರರಾಷ್ಟ್ರೀಯ ರೇಷ್ಮೆ ಕೃಷಿ ಮತ್ತು ಉದ್ದಿಮೆ ಸಮ್ಮೇಳನ’ದಲ್ಲಿ ರಾಷ್ಟ್ರೀಯ ರೇಷ್ಮೆಹುಳು ಉತ್ಪಾದನಾ  ಸಂಸ್ಥೆಯ ನಿರ್ದೇಶಕ ಡಾ.ಬಿ.ಎಸ್.ಅಂಗಡಿ, ಥಾಯ್ಲೆಂಡ್‌ನ ಚಲ್‌ ಥೈ ಸಿಲ್ಕ್‌ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಸುವಾನ್ನೆ ಕನ್ವೊಂಗ್‌, ಜಪಾನ್‌ನ ರಾಷ್ಟ್ರೀಯ ಜೈವಿಕ ವಿಜ್ಞಾನ ಸಂಸ್ಥೆಯ ಡಾ.ಹಿರೋಕಿ ಮಾಚಿ ಅವರಿಗೆ ಲೂಯಿ ಪಾಶ್ಚರ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಬೆಂಗಳೂರು:  ನಗರದಲ್ಲಿ ಅಂತರರಾಷ್ಟ್ರೀಯ ರೇಷ್ಮೆ ಮಂಡಳಿಯು ಸೋಮವಾರ ಆಯೋಜಿ ಸಿದ್ದ ‘23ನೇ ಅಂತರರಾಷ್ಟ್ರೀಯ ರೇಷ್ಮೆ ಕೃಷಿ ಮತ್ತು ಉದ್ದಿಮೆ ಸಮ್ಮೇಳನ’ದಲ್ಲಿ ರೇಷ್ಮೆ ಕೃಷಿ ಮತ್ತು ಕೈಗಾರಿಕೆಯ ಅಭಿವೃದ್ಧಿಗಾಗಿ ಹೊಸ ಹೊಳಹುಗಳ ಕುರಿತು ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ, ಬ್ರೆಜಿಲ್‌, ಕೊರಿಯಾ, ಈಜಿಪ್ಟ್‌, ಫ್ರಾನ್ಸ್‌, ಗ್ರೀಸ್‌, ಇಂಡೋ­ನೇಷ್ಯಾ, ಭಾರತ, ಇರಾನ್‌, ಜಪಾನ್‌, ಸಿರಿಯಾ, ಥಾಯ್ಲೆಂಡ್‌ ಸೇರಿದಂತೆ 15 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು.

ಈ ಸಂದರ್ಭದಲ್ಲಿ ‘ಲೂಯಿಪಾಶ್ಚರ್‌ ಪ್ರಶಸ್ತಿ’ ಪಡೆದ ರಾಷ್ಟ್ರೀಯ ರೇಷ್ಮೆ ಹುಳು ಉತ್ಪಾದನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಎಸ್.ಅಂಗಡಿ, ‘ದೇಶದ ರೇಷ್ಮೆ ಕೃಷಿಯ ಗುಣಮಟ್ಟವನ್ನು ಸುಧಾ ರಿ­ಸಬೇಕಿದೆ. ಅತಿ ಹೆಚ್ಚು ರೇಷ್ಮೆ ಉತ್ಪಾದನೆಗಾಗಿ ಗುಣಮಟ್ಟದ ರೇಷ್ಮೆ ಹುಳುವಿನ ಅಭಿವೃದ್ಧಿಯ ಅಗತ್ಯವಿದೆ’ ಎಂದರು.

‘ರೈತರಿಗೆ ಉತ್ತಮವಾದ ರೇಷ್ಮೆಯ ಬಿತ್ತನೆ ಬೀಜ, ರೈತರು ಬೆಳೆದ ರೇಷ್ಮೆಗೆ ಉತ್ತಮ ಬೆಲೆ ಹಾಗೂ ರೋಗಮುಕ್ತ, ಗುಣ­ಮಟ್ಟದ ರೇಷ್ಮೆ ತಳಿಗಳನ್ನು ರೈತರಿಗೆ ನೀಡುವುದರಿಂದ ಹೆಚ್ಚು ಉತ್ಪಾದನೆ ಮಾಡಬಹುದು’ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲ ವಜುಭಾಯಿ ವಾಲಾ ‘ರೇಷ್ಮೆ ಕೃಷಿ ಹಾಗೂ ರೇಷ್ಮೆ ಕೈಗಾರಿಕೆ ಅಭಿವೃದ್ಧಿಗೆ ಸರ್ಕಾರವು  ಯೋಜನೆ ರೂಪಿಸಿ, ಪ್ರೋತ್ಸಾಹಿಸಬೇಕು. ರೇಷ್ಮೆ ಕೃಷಿಯು ಹಳ್ಳಿಗಾಡಿನ ಹಾಗೂ ಆದಿವಾಸಿ ಜನರಿಗೆ ವರದಾನವಾಗಲಿದೆ. ರೇಷ್ಮೆ ಕೃಷಿಯಿಂದ ಹೆಚ್ಚಿನ ಉದ್ಯೋಗ ದೊರೆಯಲಿದೆ. ಹೀಗಾಗಿ, ರೇಷ್ಮೆ ಕೃಷಿ ಅಭಿವೃದ್ಧಿಗೆ ಸರ್ಕಾರ ಸಮಗ್ರವಾಗಿ ಯೋಜನೆ ಗಳನ್ನು ರೂಪಿಸಬೇಕಾಗಿದೆ’ ಎಂದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಜವಳಿ ಸಚಿವಾಲಯದ ಕಾರ್ಯದರ್ಶಿ ಡಾ.ಎಸ್‌.ಕೆ. ಪಾಂಡಾ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.