ADVERTISEMENT

ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಮೆಟ್ರೊ ನಿಲ್ದಾಣಕ್ಕೆ ಒತ್ತಾಯ

ಕಂಟೋನ್ಮೆಂಟ್‌ ಮೆಟ್ರೊ ನಿಲ್ದಾಣ: ಸ್ಥಳ ಬದಲಾವಣೆಗೆ ನಾಗರಿಕರ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:40 IST
Last Updated 24 ಜುಲೈ 2017, 19:40 IST

ಬೆಂಗಳೂರು:  ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಬಳಿ ನಿರ್ಮಾಣಗೊಳ್ಳಲಿರುವ ‘ನಮ್ಮ ಮೆಟ್ರೊ’ ನಿಲ್ದಾಣದ ಸ್ಥಳ ಬದಲಾವಣೆ ಮಾಡಿರುವುದಕ್ಕೆ  ವಿರೋಧ ವ್ಯಕ್ತವಾಗಿದೆ. ರೈಲು ನಿಲ್ದಾಣದ ಪಕ್ಕದಲ್ಲೇ ಮೆಟ್ರೊ ನಿಲ್ದಾಣ ನಿರ್ಮಿಸಬೇಕು ಎಂದು  ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌)  ಕಂಟೋನ್ಮೆಂಟ್‌ ರೈಲು ನಿಲ್ದಾಣದ ವಾಹನ ನಿಲುಗಡೆ ಸ್ಥಳದ ಬಳಿ (ನೆಲದಡಿಯಲ್ಲಿ) ಮೆಟ್ರೊ ನಿಲ್ದಾಣ ನಿರ್ಮಿಸಲು ಈ ಹಿಂದೆ ಉದ್ದೇಶಿಸಿತ್ತು. ಈ ಕುರಿತು ರೈಲ್ವೆ ಇಲಾಖೆಗೆ  ಪತ್ರ ಬರೆದು, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ 16,000 ಚದರ ಮೀಟರ್ ಜಾಗವನ್ನು ನಾಲ್ಕು ವರ್ಷಗಳ ಕಾಲ ತಾತ್ಕಾಲಿಕವಾಗಿ ಒದಗಿಸುವಂತೆ ಹಾಗೂ 2,500 ಚದರ ಮೀಟರ್‌ ಜಾಗವನ್ನು ಶಾಶ್ವತವಾಗಿ ನೀಡುವಂತೆಯೂ ಕೋರಿತ್ತು.

ನಾಗವಾರ– ಗೊಟ್ಟಿಗೆರೆ ಮಾರ್ಗದ ಪರಿಸರದ ಮೇಲಿನ ಪರಿಣಾಮಗಳ ಅಧ್ಯಯನ ವರದಿಯಲ್ಲೂ ರೈಲು ನಿಲ್ದಾಣದ ಪಕ್ಕದಲ್ಲೇ ಮೆಟ್ರೊ ನಿಲ್ದಾಣ ನಿರ್ಮಿಸುವುದಾಗಿ ಹೇಳಲಾಗಿತ್ತು.

ADVERTISEMENT

ಆ ಬಳಿಕ ಮೆಟ್ರೊ ನಿಲ್ದಾಣ ನಿರ್ಮಾಣವಾಗುವ ಜಾಗವನ್ನು ಏಕಾಏಕಿ ಬದಲಾಯಿಸಲಾಗಿದೆ.  ನಾಗವಾರ– ಡೇರಿ ವೃತ್ತ ನಡುವಿನ ಸುರಂಗ ಮಾರ್ಗದ ನಕ್ಷೆಯ ಪ್ರಕಾರ, ಇಲ್ಲಿನ ಮೆಟ್ರೊ ನಿಲ್ದಾಣ ನ್ಯೂಬ್ಯಾಂಬೂ ಬಜಾರ್‌ ರಸ್ತೆ ಹಾಗೂ ಧನಕೋಟಿ ರಸ್ತೆ ನಡುವೆ, ಅಬ್ದುಲ್ಲ ಬ್ಯಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ನಿರ್ಮಾಣವಾಗಲಿದೆ.

ಈ ಹಿಂದೆ ಗುರುತಿಸಿದ್ದ ಜಾಗದಲ್ಲೇ ಮೆಟ್ರೊ ನಿಲ್ದಾಣವನ್ನು ನಿರ್ಮಿಸಿದರೆ ಮೆಟ್ರೊ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ನೇರ ಸಂಪರ್ಕ ಸಾಧ್ಯವಾಗಲಿದೆ. ಇಲ್ಲದಿದ್ದರೆ ಮೆಟ್ರೊ ನಿಲ್ದಾಣದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣ ತಲುಪಲು 1 ಕಿ.ಮೀ ಕ್ರಮಿಸಬೇಕಾಗುತ್ತದೆ ಎಂಬುದು ರೈಲ್ವೆ ಹೋರಾಟಗಾರರ ಅಭಿಪ್ರಾಯ.

‘ಮೆಟ್ರೊ ನಿಲ್ದಾಣಕ್ಕೆ ಈಗ ಗುರುತಿಸಿರುವ ಜಾಗವನ್ನು ತಲುಪುವುದಕ್ಕೆ 30 ಅಡಿ ಅಗಲದ ರಸ್ತೆ ಇದೆ. ಅದರಲ್ಲಿ ಟ್ಯಾಕ್ಸಿ ನಿಲುಗಡೆಗೂ ಸಮಸ್ಯೆ ಆಗಲಿದೆ. ರೈಲ್ವೆ ನಿಲ್ದಾಣಕ್ಕೆ ತಲುಪಲು ಮೆಟ್ರೊ ಬಳಸುವವರು ಇದರಿಂದ ಸಮಸ್ಯೆ ಆಗಲಿದೆ’ ಎಂದು ದೂರುತ್ತಾರೆ ಪ್ರಜಾರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

‘ಕಂಟೋನ್ಮೆಂಟ್‌ ಮೆಟ್ರೊ ನಿಲ್ದಾಣಕ್ಕೆ ಅಬ್ದುಲ್ಲ ಬ್ಯಾರಿ ಪ್ರಾಥಮಿಕ ಶಾಲೆಯ ಪಕ್ಕದ ಮೈದಾನ ಹಾಗೂ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಅಲ್ಲಿನ ಬಸ್‌ನಿಲ್ದಾಣದ ಪಕ್ಕದ ಬಿಬಿಎಂಪಿ ಮೈದಾನವನ್ನು ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ. ಈ ಕಾಮಗಾರಿಗಳು ನಡೆಯುವ ಅವಧಿಯಲ್ಲಿ ಈ ಎರಡೂ ಮೈದಾನಗಳು ಸಾರ್ವಜನಿಕ ಬಳಕೆಗೆ ಲಭ್ಯ ಇರುವುದಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಏನಿಲ್ಲವೆಂದರೂ ಮೂರು ವರ್ಷ ಬೇಕು’ ಎಂದು ಅವರು ತಿಳಿಸಿದರು.

‘ರೈಲ್ವೆ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಿದರೆ ಬೆಂಗಳೂರಿನ ಆಸುಪಾಸಿನ ಊರುಗಳ ಪ್ರಯಾಣಿಕರಿಗೂ ಅನುಕೂಲವಾಗಲಿವೆ. ನಗರದಲ್ಲಿ   ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು  ಮೆಟ್ರೊ ಮೂಲಕ ಕಂಟೋನ್ಮೆಂಟ್‌ ನಿಲ್ದಾಣ ತಲುಪಿ ಅಲ್ಲಿಂದ ನಗರದ ಹೊರಗಿನ ಊರುಗಳಿಗೆ ಪ್ರಯಾಣಿಸಬಹುದು’ ಎಂದರು. 

‘ನಮ್ಮ ಮೆಟ್ರೊ ಒಂದು ಶಾಶ್ವತ ಯೋಜನೆ. ಆರಂಭಿಕ ಹಂತದಲ್ಲೇ ರೈಲ್ವೆ ನಿಲ್ದಾಣದ ಜೊತೆ ಮೆಟ್ರೊ ಜೋಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಪ್ರಯಾಣಿಕರು ಶಾಶ್ವತವಾಗಿ ಉತ್ತಮ ಸೌಕರ್ಯ ಪಡೆಯುವುದರಿಂದ ವಂಚಿತರಾಗುತ್ತಾರೆ. ಹಾಗಾಗಿ ನಿಗಮವು ನಿರ್ಧಾರವನ್ನು ಬದಲಾಯಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಮೆಟ್ರೊ ಕಾಮಗಾರಿಗಳಿಗೆ ಜಾಗ ನೀಡಲು ರೈಲ್ವೆ ಇಲಾಖೆ ತಕರಾರು ಮಾಡಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಮೆಟ್ರೊ ನಿಲ್ದಾಣ ನಿರ್ಮಿಸುವ ವಿಚಾರದಲ್ಲಿ ರೈಲ್ವೆ ಇಲಾಖೆ, ಬಿಎಂಆರ್‌ಸಿಎಲ್‌ ಹಾಗೂ ರಾಜ್ಯ ಸರ್ಕಾರ ಪರಸ್ಪರ ಸಮನ್ವಯದಿಂದ ಮುಂದಡಿ ಇಡಬೇಕು. ಇಲಾಖೆಗಳ ನಡುವಿನ ತಿಕ್ಕಾಟದಿಂದ ಸಾರ್ವಜನಿಕರಿಗೆ  ಸಮಸ್ಯೆ ಆಗಬಾರದು’ ಎಂದು ಅವರು ಅಭಿಪ್ರಾಯಪಟ್ಟರು. 

ಮೆಟ್ರೊ ಯೋಜನೆಗೆ ಇನ್ಫೊಸಿಸ್‌, ಎಂಬೆಸಿ ನೆರವು: ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಗೆ ಹಣಕಾಸು ನೆರವು ನೀಡಲು ಇನ್ಫೊಸಿಸ್‌ ಮತ್ತು ಎಂಬೆಸಿ ಕಂಪೆನಿಗಳು ಮುಂದೆ ಬಂದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆ
ಯಲ್ಲಿ ನಗರಾಭಿವೃದ್ಧಿ  ಇಲಾಖೆ ಅಧಿಕಾರಿಗಳು ಈ ವಿಷಯ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

***

ಜಾಗ ನೀಡಲು ಸಿದ್ಧ: ನೈರುತ್ಯ ರೈಲ್ವೆ

‘ಕಂಟೋನ್ಮೆಂಟ್‌ ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಿರುವುದು ನಿಜ. ಆದರೆ, ಈಗಲೂ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವುದಾದರೆ ಜಾಗ ನೀಡಲು ಸಿದ್ಧ’ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

‘ಬಿಎಂಆರ್‌ಸಿಎಲ್‌ ಈ ಬಗ್ಗೆ ಮೇ ತಿಂಗಳಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿ ಬಿಎಂಆರ್‌ಸಿಎಲ್‌ ಜೊತೆ ಸಮಾಲೋಚನೆ  ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ 

‘ಮೆಟ್ರೊ  ವಿಸ್ತೃತ ಯೋಜನಾ ವರದಿಯನ್ನು ಆಧರಿಸಿ ಕಾಮಗಾರಿಗೆ ರೈಲ್ವೆ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುವಂತೆ ರೈಲ್ವೆ ಮಂಡಳಿ ಸೂಚಿಸಿದೆ.  ಮೆಟ್ರೊ ಕಾಮಗಾರಿ ಆರಂಭಿಸಲು ಜಾಗ ಹಸ್ತಾಂತರ ಪ್ರಕ್ರಿಯೆ ಮುಗಿಯುವವರೆಗೆ ಕಾಯಬೇಕಿಲ್ಲ’ ಎಂದು ತಿಳಿಸಿದೆ.

‘ಏಳೆಂಟು ಅಂಶಗಳನ್ನು ಪರಿಗಣಿಸಿ ನಿಲ್ದಾಣಕ್ಕೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಜಾಗ ಒಂದನ್ನು ಪರಿಗಣಿಸಿ ನಿಲ್ದಾಣ ಎಲ್ಲಿ ನಿರ್ಮಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗದು. ಮಾರ್ಗದಿಂದ ಎಷ್ಟು ಮಂದಿಗೆ ಪ್ರಯೋಜನವಾಗುತ್ತದೆ, ಮಾರ್ಗದ  ತಿರುವು ಎಷ್ಟು ಇರಬಹುದು ಎಂಬುದನ್ನೂ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದರು.

***

ಹೆಬ್ಬಾಳದವರೆಗೂ ಮೆಟ್ರೊ ...
ಕೆ.ಆರ್.ಪುರಂನಿಂದ ಹೆಬ್ಬಾಳದವರೆಗೆ ಮೆಟ್ರೊ ರೈಲು ಮಾರ್ಗದ ಯೋಜನೆ ಕುರಿತು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಹೊರ ವರ್ತುಲ ರಸ್ತೆಯಲ್ಲಿ  ಸಂಚಾರ ದಟ್ಟಣೆ ನಿವಾರಿಸಲು ಮೆಟ್ರೊ ರೈಲು ಮಾರ್ಗ ನಿರ್ಮಿಸಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.  ಈ ಯೋಜನೆ ಸಾಧಕ–ಬಾಧಕ, ಯೋಜನಾ ವೆಚ್ಚದ ಪ್ರಾಥಮಿಕ ವರದಿ ಸಿದ್ಧಪಡಿಸುವಂತೆ  ಹೇಳಿಿದರು.

ನಾಗವಾರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ನಮ್ಮ ಮೆಟ್ರೊ ರೈಲು ಮಾರ್ಗ ನಿರ್ಮಾಣದ ಸಮಗ್ರ ಯೋಜನಾ ವರದಿ ಆಗಸ್ಟ್‌ ಹೊತ್ತಿಗೆ ತಯಾರಾಗಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.