ADVERTISEMENT

ರೌಡಿ ನಾಗರಾಜ್‌ ಆಸ್ತಿ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 13 ಮೇ 2017, 19:45 IST
Last Updated 13 ಮೇ 2017, 19:45 IST
ರೌಡಿ ನಾಗರಾಜ್‌ ಆಸ್ತಿ ಮಾಹಿತಿ ಸಂಗ್ರಹ
ರೌಡಿ ನಾಗರಾಜ್‌ ಆಸ್ತಿ ಮಾಹಿತಿ ಸಂಗ್ರಹ   

ಬೆಂಗಳೂರು: ಉದ್ಯಮಿ ಅಪಹರಣ ಹಾಗೂ ಹಳೇ ನೋಟು ಬದಲಾವಣೆ ಪ್ರಕರಣದಡಿ ರೌಡಿ ನಾಗರಾಜ್‌ನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು,  ಆತನ ಆಸ್ತಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

‘ನನಗೆ ದಿನಕ್ಕೆ ₹15 ಲಕ್ಷದಷ್ಟು ಆದಾಯವಿದೆ’ ಎಂದು ಆರೋಪಿಯು ಸಿ.ಡಿ.ಯಲ್ಲಿ  ಹೇಳಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡವು  ಆತನ ಆದಾಯದ ಮೂಲವನ್ನು ತಿಳಿದುಕೊಳ್ಳುತ್ತಿದೆ.

‘ಬೆಂಗಳೂರು, ತುಮಕೂರು ಹಾಗೂ ತಮಿಳುನಾಡಿನಲ್ಲಿ ನಾಗರಾಜ್‌ಗೆ ಆಸ್ತಿ ಇರುವ ಮಾಹಿತಿ ಇದೆ. ಇದರಲ್ಲಿ ಕೆಲ ಆಸ್ತಿಯನ್ನು ಮೂಲ ಮಾಲೀಕರನ್ನು ಬೆದರಿಸಿ ಪಡೆದುಕೊಂಡಿದ್ದು ಎಂಬುದು ಗೊತ್ತಾಗಿದೆ. ಹೀಗಾಗಿಯೇ ಆಸ್ತಿ ಮಾಹಿತಿ ನೀಡುವಂತೆ ನೋಂದಣಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪತ್ನಿ, ಮಕ್ಕಳು ಹಾಗೂ ಸಂಬಂಧಿಕರ ಹೆಸರಿನಲ್ಲೂ ಬೇನಾಮಿ ಆಸ್ತಿ ಮಾಡಿದ್ದಾನೆ. ಬಗ್ಗೆ ಆತನ ಸಹಚರರೇ ಮಾಹಿತಿ ನೀಡಿದ್ದು, ಅದರ ಪರಿಶೀಲನೆ ನಡೆಯುತ್ತಿದೆ. ತನಿಖೆಯಲ್ಲಿ ಸಿಗುವ ಆಸ್ತಿಯ ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ, ಅದರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ವಿವರಿಸಿದರು.

ಕಸ್ಟಡಿಗೆ ಪಡೆಯಲು ತಯಾರಿ: ನಾಗರಾಜ್‌ ಹಾಗೂ ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿ ವಿರುದ್ಧ ಶ್ರೀರಾಮಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಮೂವರನ್ನೂ ಕಸ್ಟಡಿಗೆ ಪಡೆಯಲು  ಪೊಲೀಸರು ತಯಾರಿ ನಡೆಸಿದ್ದಾರೆ.

‘ಗ್ಯಾರೇಜ್‌ ಮಾಲೀಕ ಅರುಣ ಬಳಿ ₹5 ಕೋಟಿ ಹಾಗೂ ಪ್ಲೈವುಡ್‌ ಅಂಗಡಿ ಮಾಲೀಕ ಅಹಮ್ಮದ್‌ ಎಂಬುವರ ಬಳಿ ₹75 ಲಕ್ಷವನ್ನು ಆರೋಪಿಗಳು ದೋಚಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸದ್ಯ ಹೆಣ್ಣೂರು ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಮೇ 23ರಂದು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಿದ್ದು, ಅವಾಗಲೇ ಕಸ್ಟಡಿ ಸಂಬಂಧ ವಕೀಲರ ಮೂಲಕ ನ್ಯಾಯಾಧೀಶರನ್ನು ಕೋರುತ್ತೇವೆ’ ಎಂದು ವಿವರಿಸಿದರು.

**
ಕಾರಿನಲ್ಲಿತ್ತು 54 ನಿಂಬೆಹಣ್ಣು

ತಮಿಳುನಾಡಿನಲ್ಲಿ ಪೊಲೀಸರು ಬೆನ್ನಟ್ಟಿದ್ದ ವೇಳೆ ನಾಗರಾಜ್‌ ಹಾಗೂ ಆತನ ಮಕ್ಕಳು ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಕೊನೆಯಲ್ಲಿ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

‘ಬಂಧನದ ಬಳಿಕ ಕಾರಿನಲ್ಲಿ ಪರಿಶೀಲನೆ ನಡೆಸಿದ್ದೆವು. ಈ ವೇಳೆ ಹಲವು ದೇವಸ್ಥಾನಗಳ ಪ್ರಸಾದ, 54 ನಿಂಬೆಹಣ್ಣು ಸಿಕ್ಕವು. ಅದೇ ಕಾರಿನಲ್ಲೇ ಅವರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರು ಎಂಬುದು ಗೊತ್ತಾಯಿತು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಜತೆಗೆ ಅವರಿಗೆ ಸಹಕರಿಸಿದ್ದವರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.