ADVERTISEMENT

ರೌಡಿ ಹತ್ಯೆ: ಸ್ಪಾಟ್‌ ನಾಗನ ಗ್ಯಾಂಗ್ ಸೆರೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:50 IST
Last Updated 10 ಮಾರ್ಚ್ 2017, 19:50 IST
ರೌಡಿ ಹತ್ಯೆ: ಸ್ಪಾಟ್‌ ನಾಗನ ಗ್ಯಾಂಗ್ ಸೆರೆ
ರೌಡಿ ಹತ್ಯೆ: ಸ್ಪಾಟ್‌ ನಾಗನ ಗ್ಯಾಂಗ್ ಸೆರೆ   

ಬೆಂಗಳೂರು: ಕಮಲಾನಗರದ ಚಂದ್ರಪ್ಪ ರಸ್ತೆಯಲ್ಲಿ ರೌಡಿ ಸುನೀಲ್‌ನನ್ನು ಹತ್ಯೆಗೈದಿದ್ದ ರೌಡಿಶೀಟರ್ ನಾಗರಾಜ ಅಲಿಯಾಸ್ ಸ್ಪಾಟ್‌ ನಾಗ (26) ಹಾಗೂ ಆತನ ಎಂಟು ಮಂದಿ ಸಹಚರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಮಾರ್ಚ್ 6ರಂದು ಸ್ನೇಹಿತರ ಜತೆ ಬಾರ್‌ಗೆ ಹೋಗಿದ್ದ ಸುನೀಲ್, ನನ್ನನ್ನು ಕೊಲ್ಲಲು ಸಂಚು ರೂಪಿಸಿರುವ ಬಗ್ಗೆ ಮಾತುಕತೆ ನಡೆಸಿದ್ದ. ಆ ವಿಚಾರ ಆತನ ಸಹಚರ ವಿನಯ್‌ನಿಂದಲೇ ನನಗೆ ತಿಳಿಯಿತು. ಸುನೀಲ್ ರೂಪಿಸಿದ್ದ ಸಂಚನ್ನು ಬಳಸಿಕೊಂಡು, ನಾನೇ ಆತನನ್ನು ಕೊಲೆಗೈದೆ’ ಎಂದು ಸ್ಪಾಟ್ ನಾಗ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  

‘ನಾಗ, ಮಾಚೋಹಳ್ಳಿಯ ನಂದೀಶ (19), ನಾಗಸಂದ್ರದ ರಮೇಶ ಅಲಿಯಾಸ್ ಪಪ್ಪು (19), ಕುಮಾರ್ (24), ಲಗ್ಗೆರೆಯ ವಿನಯ್ (21), ಗುರುರಾಜ್ (24), ಖಾದರ್ (28), ಉಮೇರ್ ಖಾನ್ (23) ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿ ಮಚ್ಚು–ಲಾಂಗುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಮಾಲಿನಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸುನೀಲ್ ಹಾಗೂ ನಾಗ ಅಕ್ಕಪಕ್ಕದ ಮನೆಯವರು. ಭೂವ್ಯಾಜ್ಯದ ವಿಚಾರವಾಗಿ 2016ರ ಮಾರ್ಚ್‌ನಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಆಗ ಸುನೀಲ್ ತನ್ನ ಸಹಚರ ಯತಿರಾಜ್ ಜತೆ ಸೇರಿಕೊಂಡು ನಾಗನ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಾಗಿತ್ತು. ಆ ಗಲಾಟೆ ನಂತರ ಪರಸ್ಪರರ ಮಧ್ಯೆ ವೈಷಮ್ಯ ಬೆಳೆದಿತ್ತು’ ಎಂದು ತನಿಖಾಧಿಕಾರಿಗಳು ಹೇಳಿದರು.

ADVERTISEMENT

‘ಡಕಾಯಿತಿಗೆ ಸಂಚು ರೂಪಿಸಿದ್ದ ಆರೋಪದಡಿ ಇದೇ ಜನವರಿಯಲ್ಲಿ ಸುನೀಲ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಫೆ.22ರಂದು ಜಾಮೀನಿನ ಮೇಲೆ ಬಿಡುಗಡೆಯಾದ ಆತ, ನಾಗನನ್ನು ಕೊಲ್ಲಲು ಸಂಚು ರೂಪಿಸಿಕೊಂಡಿದ್ದ. ಇದಕ್ಕಾಗಿ ವಿನಯ್ ಸೇರಿದಂತೆ ಏಳೆಂಟು ಹುಡುಗರನ್ನೂ ಹೊಂದಿಸಿಕೊಂಡಿದ್ದ.’

‘ತನ್ನ ಸಂಚಿನ ಬಗ್ಗೆ ವಿವರಿಸಲು ಸಹಚರರನ್ನು ಮಾರ್ಚ್‌ 6ರಂದು ಕಾಮಾಕ್ಷಿಪಾಳ್ಯದ ಬಾರ್‌ಗೆ ಕರೆದುಕೊಂಡು ಹೋಗಿದ್ದ. ಯಾವ ರೀತಿ ನಾಗನನ್ನು ಸುತ್ತುವರಿಯಬೇಕು, ಹೇಗೆ ಜನರೆದುರೇ ಆತನನ್ನು ಹೊಡೆಯಬೇಕು ಎಂಬ ಬಗ್ಗೆ ಕಾಗದದಲ್ಲಿ ಬರೆದು ತೋರಿಸಿದ್ದ.’
‘ಸುನೀಲ್‌ ಗ್ಯಾಂಗ್ ತೊರೆದು ನಾಗನ ಆಪ್ತನಾಗಲು ಹಲವು ದಿನಗಳಿಂದ ಹವಣಿಸುತ್ತಿದ್ದ ವಿನಯ್‌, ಇದೇ ಸೂಕ್ತ ಸಮಯವೆಂದು ಬಾರ್‌ನಲ್ಲಿ ನಡೆದ ಸಂಚನ್ನು ನಾಗನಿಗೆ ಹೇಳಿದ್ದ. ಇದರಿಂದ ಕೆರಳಿದ ಆತ, ಅದೇ ಸಂಚನ್ನು ಇಟ್ಟುಕೊಂಡು ಸುನೀಲ್‌ನನ್ನು ಹತ್ಯೆಗೈದ’ ಎಂದು ಮಾಹಿತಿ ನೀಡಿದರು.
ಹೀಗೆ ಕಾರ್ಯಗತ: ‘ಬುಧವಾರ (ಮಾರ್ಚ್ 8) ಬೆಳಿಗ್ಗೆ 8.30ರ ಸುಮಾರಿಗೆ ಒಂಬತ್ತು ಮಂದಿಯೂ ಸುನೀಲ್‌ನ ಮನೆ ಹತ್ತಿರ ಬಂದಿದ್ದರು. ಮಾತನಾಡಿಸುವ ಸೋಗಿನಲ್ಲಿ ಮೊದಲು ಮನೆಯೊಳಗೆ ಹೋದ ವಿನಯ್, ‘ಸುನೀಲ್ ಮನೆ ಹಿಂಭಾಗದ ನಿವೇಶನದ ಬಳಿ ಕುಳಿತಿದ್ದಾನೆ’ ಎಂದು ನಾಗನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ. ಕೂಡಲೇ ನಾಗ ಹಾಗೂ ನಾಲ್ವರು ಸಹಚರರು ಮಚ್ಚು–ಲಾಂಗುಗಳೊಂದಿಗೆ ಅಲ್ಲಿಗೆ ತೆರಳಿದ್ದರು. ಉಳಿದ ಮೂವರು ಕೃತ್ಯದ ನಂತರ ಪರಾರಿಯಾಗಲು ಕಾರುಗಳನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದರು.’

‘ಎದುರಾಳಿಗಳನ್ನು ಕಂಡ ಕೂಡಲೇ ಸುನೀಲ್ ಕಾಂಪೌಂಡ್ ಜಿಗಿದು ಓಡಿದ್ದ. ಆಗ ಈ ಐವರು ಮಾರಕಾಸ್ತ್ರ ಹಿಡಿದು ಆತನನ್ನು ಅಟ್ಟಿಸಿಕೊಂಡು ಹೋಗಿದ್ದರು. ಅವರಿಂದ ತಪ್ಪಿಸಿಕೊಂಡು ಚಂದ್ರಪ್ಪ ರಸ್ತೆಗೆ ಬಂದ ಸುನೀಲ್, ಜೀವ ಉಳಿಸಿಕೊಳ್ಳಲು ರಮೇಶ್ ಎಂಬುವರ ಮನೆಯೊಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದ.’
‘ಬಾಗಿಲು ಮರಿದು ಒಳನುಗ್ಗಿದ ಆರೋಪಿಗಳು, ಆತನನ್ನು ಹೊರಗೆಳೆದು ತಂದು ಮಚ್ಚು–ಲಾಂಗುಗಳಿಂದ ಕೊಚ್ಚಿ ಹಾಕಿದ್ದರು. ಅಲ್ಲದೆ, ಮಗನ ರಕ್ಷಣೆಗೆ ಧಾವಿಸಿದ ಸುನೀಲ್‌ನ ತಾಯಿ ಉಷಾ ಅವರ ಕೈಗಳಿಗೂ ಮಚ್ಚಿನಿಂದ ಹೊಡೆದು ಸಹಚರರ ಕಾರುಗಳಲ್ಲಿ ಪರಾರಿಯಾಗಿದ್ದರು.’
‘ನಡುರಸ್ತೆಯಲ್ಲೇ ನಡೆದ ಈ ಹತ್ಯೆಯು, ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ರೌಡಿಗಳ ದಾಂದಲೆಯನ್ನು ಯುವಕನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಅದನ್ನು ಪರಿಶೀಲಿಸಿ ಹಾಗೂ ಸುನೀಲ್‌ ತಾಯಿ ನೀಡಿದ ಹೇಳಿಕೆ ಆಧರಿಸಿ ಆರೋಪಿಗಳ ಗುರುತು ಪತ್ತೆ ಹಚ್ಚಲಾಯಿತು. ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಲಾಗಿತ್ತು.’

‘ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಹಂತಕರು ಮಾಗಡಿ ತಾಲ್ಲೂಕಿನ ಮಾಚೋಹಳ್ಳಿಯ ತೋಟದ ಮನೆಯೊಂದರಲ್ಲಿ ಉಳಿದುಕೊಂಡಿರುವುದು ಗೊತ್ತಾಯಿತು. ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಯಿತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಗೂಂಡಾ ಕಾಯ್ದೆ
‘ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಸ್ಪಾಟ್‌ ನಾಗನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಬಸವೇಶ್ವರನಗರ ಠಾಣೆಯಲ್ಲಿ ರೌಡಿಪಟ್ಟಿಯನ್ನೂ ತೆರೆಯಲಾಗಿದೆ. ಈತನ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ನಿರ್ಧರಿಸಲಾಗಿದೆ’ ಎಂದು ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.