ADVERTISEMENT

ರ್ಯಾಂಪ್‌ ನಿರ್ಮಿಸಿದರೂ ತಗ್ಗದ ಸಮಸ್ಯೆ

ಮಹದೇವಪುರ ಕ್ಷೇತ್ರದ ಬೆಳ್ಳಂದೂರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:53 IST
Last Updated 21 ಜನವರಿ 2017, 19:53 IST
ಬೆಳ್ಳಂದೂರು ಕೆರೆ ಕೋಡಿಯಲ್ಲಿ ನಿರ್ಮಿಸಿರುವ ರ್ಯಾಂಪ್‌
ಬೆಳ್ಳಂದೂರು ಕೆರೆ ಕೋಡಿಯಲ್ಲಿ ನಿರ್ಮಿಸಿರುವ ರ್ಯಾಂಪ್‌   

ಬೆಂಗಳೂರು: ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಕೆರೆ ಕೋಡಿಯಲ್ಲಿ ಕಳೆದೊಂದು ವರ್ಷದಿಂದ ₹3ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದ ರ್ಯಾಂಪ್ ಕಾಮಗಾರಿ ಪೂರ್ಣಗೊಂಡಿದ್ದು, ಕೆರೆಯ ನೀರು ರಭಸವಾಗಿ ಹರಿದುಹೋಗುತ್ತಿದೆ.

ಆದರೆ, ನೊರೆ ಪ್ರಮಾಣ ಸ್ವಲ್ಪವೂ ಕಡಿಮೆಯಾಗಿಲ್ಲ. ಕೋಡಿಯಲ್ಲಿ ಆರೇಳು ಅಡಿಗಳಷ್ಟು ಎತ್ತರಕ್ಕೆ ನೊರೆ ಮಾತ್ರ ಇದ್ದೇ ಇರುತ್ತದೆ. ಕೆರೆಕೋಡಿಯಲ್ಲಿ ನೂರಾರು ಅಡಿಗಳಷ್ಟು ಆಳವನ್ನು ತೆಗೆದು ರ್ಯಾಂಪ್ ನಿರ್ಮಿಸಲಾಗಿದೆ. ಕೆರೆಯಿಂದ ಹರಿದು ಬರುವ ಕಲುಷಿತ ನೀರು ರ್ಯಾಂಪ್‌ನಿಂದ ಕೆಳಗೆ ಧುಮುಕಿದಾಗ ಭಾರೀ ಪ್ರಮಾಣದಲ್ಲಿ ನೊರೆ ಉತ್ಪತ್ತಿಯಾಗುತದೆ.

ಈ ರೀತಿ ಉತ್ಪತ್ತಿಯಾಗುವ ನೊರೆ ಕೋಡಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯವರೆಗೆ ಮಡುಗಟ್ಟಿ ನಿಂತಿರುತ್ತದೆ. ಆಗಾಗ ಗಾಳಿ ಬಂದಾಗ ನೊರೆಯು ಕೆರೆಕೋಡಿಗೆ ಹೊಂದಿಕೊಂಡಿರುವ ಕಟ್ಟಡಗಳವರೆಗೆ ತೂರಿ ಹೋಗುತ್ತದೆ. ಕೋಡಿಯ ಕಟ್ಟೆಯ ಮೇಲೆ ಸಂಚರಿಸುವವರ ಮೇಲೆ ಬೀಳುತ್ತಿದೆ.

‘ಅವೈಜ್ಞಾನಿಕವಾಗಿ ರ್ಯಾಂಪ್‌ ನಿರ್ಮಿಸುವ ಮೂಲಕ ಹಣ ಪೋಲು ಮಾಡಲಾಗಿದೆ. ಇದರ ಬದಲು ಕೆರೆಕೋಡಿಯ ಕೆಳಗೆ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಿದರೆ ಸಾಕಿತ್ತು. ಕೆರೆಯ ನೀರು ಸಹ ಸರಾಗವಾಗಿ ಹರಿದು ಹೋಗುತ್ತಿತ್ತು. ಆಗ ನೊರೆ ಉತ್ಪತ್ತಿಯಾಗುವುದು ಕಡಿಮೆಯಾಗುತ್ತಿತ್ತು’ ಎಂದು ಸ್ಥಳೀಯರು ಹೇಳಿದರು.

‘ರ್ಯಾಂಪ್‌ ನಿರ್ಮಿಸುವ ಮೊದಲು ಅಧಿಕಾರಿಗಳು ಸ್ಥಳೀಯರ ಸಲಹೆ ಪಡೆದಿಲ್ಲ. ಇದು ತಪ್ಪು’ ಎಂದು ಸ್ಥಳೀಯ ನಿವಾಸಿ ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.