ADVERTISEMENT

ಲಂಚಕ್ಕಾಗಿ ಬೇಡಿಕೆ: ಎಸಿಎಫ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:37 IST
Last Updated 7 ಜುಲೈ 2015, 19:37 IST

ಬೆಂಗಳೂರು: ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರ ಬಿಲ್‌ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಸಹಾಯಕ ಆಯುಕ್ತ (ಹಣಕಾಸು– ಎಸಿಎಫ್‌) ಪ್ರಸನ್ನಕುಮಾರ್‌ ಅವರನ್ನು ಮಂಗಳವಾರ ಅಮಾನತು ಮಾಡಲಾಗಿದೆ.

‘ಗುತ್ತಿಗೆದಾರರ ಜತೆ ನಡೆಸಿದ ಸಭೆಯಲ್ಲಿ ಪ್ರಸನ್ನಕುಮಾರ್‌ ವಿರುದ್ಧ ವ್ಯಾಪಕವಾಗಿ ದೂರುಗಳು ಕೇಳಿಬಂದವು. ಈ ಸಂಬಂಧ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರನ್ನು ವಿಚಾರಿಸಿದಾಗ ಅವರ ವಿರುದ್ಧ ಹಿಂದೆಯೂ ದೂರುಗಳು ಬಂದಿರುವುದನ್ನು ಖಚಿತಪಡಿಸಿದರು. ಹೀಗಾಗಿ ಪ್ರಸನ್ನಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.

ಚಾಲಕರಿಗೆ ಭತ್ಯೆ: ಟೆರ್ರಾ ಫರ್ಮಾದಲ್ಲಿ ಕಸ ಸುರಿದು ಬರಲು ಹಲವು ಗಂಟೆಗಳ ಕಾಲ ರಸ್ತೆಯಲ್ಲೇ ಕಾಯಬೇಕಿದ್ದು, ಹೀಗಾಗಿ ಲಾರಿಗಳ ಚಾಲಕರಿಗೆ ಆಹಾರ ಭತ್ಯೆ ನೀಡಬೇಕು ಎಂಬ ಬೇಡಿಕೆ ಗುತ್ತಿಗೆದಾರರಿಂದ ಬಂದಿದೆ. ಮಾನವೀಯ ನೆಲೆಯಲ್ಲಿ ಚಾಲಕರಿಗೆ ಪ್ರತಿದಿನ ಆಹಾರ ಭತ್ಯೆಯಾಗಿ ₨ 200 ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

‘ಆಹಾರ ಭತ್ಯೆ ನೀಡುವ ನಿರ್ಧಾರದಿಂದ ಪಾಲಿಕೆಗೆ ನಿತ್ಯ ₨ 40 ಸಾವಿರ ಹಾಗೂ ವಾರ್ಷಿಕ ₨ 12.25 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ’ ಎಂದು ಮಾಹಿತಿ ನೀಡಿದರು.

‘ಮೊದಲು ಮಂಡೂರು ಘಟಕಕ್ಕೂ ಕಸ ಸಾಗಾಟ ಮಾಡಲಾಗುತ್ತಿತ್ತು. ಆ ಘಟಕಕ್ಕೆ ಹೋಗಿ ಬರಲು 70 ಕಿ.ಮೀ. ಕ್ರಮಿಸಬೇಕಿತ್ತು. ಈಗ ಟೆರ್ರಾ ಫರ್ಮಾಕ್ಕೆ ಹೋಗಬೇಕಿದೆ. ಒಮ್ಮೆ ಕಸ ಸಾಗಿಸಿ ಬರಲು 100 ಕಿ.ಮೀ ಕ್ರಮಿಸಬೇಕಾಗುತ್ತದೆ.

ಹೀಗಾಗಿ ಇಂಧನ ದರವನ್ನು ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆಯನ್ನೂ ಗುತ್ತಿಗೆದಾರರು ಇಟ್ಟಿದ್ದಾರೆ. ಈ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ’ ಎಂದು ವಿಜಯಭಾಸ್ಕರ್‌ ವಿವರಿಸಿದರು.

ಪೌರಕಾರ್ಮಿಕರ ಖಾತೆಗೆ ಆರ್‌ಟಿಜಿಸ್‌ ಮೂಲಕ ನೇರವಾಗಿ ಸಂಬಳ ವರ್ಗ ಮಾಡಲು ಸೂಚಿಸಲಾಗಿದೆ. ಪೌರಕಾರ್ಮಿಕರ ಸಂಬಳ ನೀಡಲು ತಡವಾಗದಂತೆ ನೋಡಿಕೊಳ್ಳಲು ಮೂರು ತಿಂಗಳ ಗುತ್ತಿಗೆ ಮೊತ್ತವನ್ನು ಮುಂಗಡವಾಗಿ ವಲಯ ಕಚೇರಿಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

ಅಭಿವೃದ್ಧಿಗೆ ಚಾಲನೆ
ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಯನ್ನು ಹಿಂಪಡೆದಿದ್ದರಿಂದ ಬಿಬಿಎಂಪಿಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ದಾರಿ ಸುಗಮವಾಗಿದೆ. ಎರಡು ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಹಲವು ಕಾಮಗಾರಿಗಳಿಗೆ ಟೆಂಡರ್‌ ಕರೆಯಲು ನಿರ್ಧರಿಸಿದ್ದಾಗ ಚುನಾವಣೆ ಘೋಷಣೆಯಾಗಇ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಆದರೆ, ಸುಪ್ರೀಂ ಕೋರ್ಟ್‌ ಎಂಟು ವಾರಗಳ ಕಾಲಾವಕಾಶ ನೀಡಿದ್ದರಿಂದ ಆಯೋಗ ವೇಳಾಪಟ್ಟಿ ಜತೆಗೆ ನೀತಿ ಸಂಹಿತೆ ಜಾರಿ ಆದೇಶವನ್ನೂ ಹಿಂಪಡೆದಿತ್ತು.

ಹೊರ ವರ್ತುಲ ರಸ್ತೆ (ನಾಯಂಡಹಳ್ಳಿಯಿಂದ ಸಿಲ್ಕ್‌ ಬೋರ್ಡ್‌ವರೆಗೆ) ಮತ್ತು ಹಳೆ ಮದ್ರಾಸ್‌ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಕಾರಿಡಾರ್‌ಗಳ ನಿರ್ಮಾಣಕ್ಕೆ ₨ 337 ಕೋಟಿ ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT