ADVERTISEMENT

ಲಿಫ್ಟ್‌ ಗುಂಡಿಗೆ ಬಿದ್ದ ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಬೆಂಗಳೂರು: ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಗೆ ಬಂದಿದ್ದ ವೃದ್ಧರೊಬ್ಬರು, ಲಿಫ್ಟ್ ಗುಂಡಿಯೊಳಗೆ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ವಿಜಯನಗರ ನಿವಾಸಿ ಸಚ್ಚಿದಾನಂದ ಮೂರ್ತಿ (80) ಮೃತಪಟ್ಟವರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪತ್ನಿ ಲವ್ಲಿ ದೇವಿ ಅವರಿಗೆ ಡಯಾಲಿಸಸ್ ಮಾಡಿಸಿ ಮನೆಗೆ ಕರೆದುಕೊಂಡು ಹೋಗಿದ್ದ  ಮೂರ್ತಿ ಅವರು, ವೈದ್ಯರನ್ನು ಕಾಣಲು ಸಂಜೆ 4.15ರ ಸುಮಾರಿಗೆ ಮತ್ತೆ ಆಸ್ಪತ್ರೆಗೆ ಬಂದಿದ್ದರು.

ನೆಲ ಮಹಡಿಯಲ್ಲಿದ್ದ ಮೂರ್ತಿ ಅವರು ಮೂರನೇ ಮಹಡಿಗೆ ಹೋಗುವುದಕ್ಕಾಗಿ, ಲಿಫ್ಟ್‌ನ ಗುಂಡಿಯನ್ನು ಒಂದೆರಡು ಬಾರಿ ಒತ್ತಿ ಕೆಲ ಹೊತ್ತು ಕಾದಿದ್ದಾರೆ. ಲಿಫ್ಟ್‌ ಬರದಿದ್ದರಿಂದ, ಮೆಟ್ಟಿಲುಗಳಲ್ಲಿ ಹಾಗೆ ನಡೆದುಕೊಂಡು ಹೋಗಿದ್ದಾರೆ.

ನಂತರ ಎರಡನೇ ಮಹಡಿಯಲ್ಲೊಮ್ಮೆ ಲಿಫ್ಟ್‌ನ ಗುಂಡಿ ಒತ್ತಿದ್ದಾರೆ. ಆಗ ಲಿಫ್ಟ್‌ನ ಮಾರ್ಗದ ಬಾಗಿಲು ತೆರೆದುಕೊಂಡಿದೆ. ಆದರೆ, ಲಿಫ್ಟ್‌ ಮೂರನೇ ಮಹಡಿಯಲ್ಲಿತ್ತು. ಇದನ್ನರಿಯದ ಮೂರ್ತಿ ಅವರು ತೆರೆದುಕೊಂಡ ಬಾಗಿಲನ್ನೇ ಲಿಫ್ಟ್ ಎಂದು ಭಾವಿಸಿ, ಒಳಕ್ಕೆ ಕಾಲಿಟ್ಟು ಗುಂಡಿಯೊಳಗೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಮೂರ್ತಿ ಅವರನ್ನು ಆಸ್ಪತ್ರೆಯ ಸಿಬ್ಬಂದಿ ತುರ್ತು ಘಟಕಕ್ಕೆ ಸೇರಿಸಿದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 10.30ರ ಸುಮಾರಿಗೆ ಕೊನೆಯುಸಿರೆಳೆದರು.

ಸಾಮಾನ್ಯವಾಗಿ ಜನರನ್ನು ಕರೆದೊಯ್ಯುವ ಲಿಫ್ಟ್‌ ಬರುವುದಕ್ಕೆ ಮುಂಚೆ, ಬಾಗಿಲು ತೆರೆದುಕೊಳ್ಳುವುದಿಲ್ಲ. ಅಲ್ಲದೆ, ಲಿಫ್ಟ್‌ನ ಬಾಗಿಲನ್ನು ಬಲವಂತವಾಗಿ ತೆರೆಯಲು ಸಾಧ್ಯವಿಲ್ಲ. ಹಾಗಾಗಿ ಲಿಫ್ಟ್‌ನಲ್ಲಿ ದೋಷವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜ್ಞಾನಭಾರತಿ ಪೊಲೀಸರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಮೃತ ಮೂರ್ತಿ ಅವರ ಪುತ್ರ ಸುಹಾಸ್ ಅವರು ದೂರು ಕೊಟ್ಟಿದ್ದು,  ನಿರ್ಲಕ್ಷ್ಯ ಆರೋಪದಡಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.