ADVERTISEMENT

ಲೈಂಗಿಕ ದೌರ್ಜನ್ಯ; ಆರೋಪಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 29 ಜುಲೈ 2017, 19:48 IST
Last Updated 29 ಜುಲೈ 2017, 19:48 IST

ಬೆಂಗಳೂರು: ಚಾಕು ತೋರಿಸಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸುನೀಲ್‌ (25) ಎಂಬಾತನನ್ನು  ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಜುಲೈ 27ರಂದು ಸಂಜೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿದ್ದ ಆರೋಪಿ, ಮೊಬೈಲ್‌ ಕೊಡಲು ಮುಂದಾಗಿದ್ದ. ಅದನ್ನು ಪಡೆಯಲು ಬಾಲಕಿಯು  ನಿರಾಕರಿಸಿದ್ದಳು. ಆಗ ಚಾಕು ತೋರಿಸಿದ್ದ  ಆರೋಪಿ,  ಶಾಲೆ ಸಮೀಪದ ಮನೆಯೊಂದಕ್ಕೆ ಆಕೆಯನ್ನು ಎಳೆದುಕೊಂಡು ಹೋಗಿದ್ದ. 

ಗಂಟೆಯವರೆಗೆ ಆಕೆಯನ್ನು ಅಕ್ರಮ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ. ಜತೆಗೆ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ’ ಎಂದು ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ತಿಳಿಸಿದರು.

ADVERTISEMENT

‘ಪೊಲೀಸರಿಗೆ ದೂರು ನೀಡಿದರೆ, ವಿಡಿಯೊವನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದ. ಈ ವಿಷಯವನ್ನು ಬಾಲಕಿಯು  ತಾಯಿ ಮತ್ತು ಶಿಕ್ಷಕರಿಗೆ ತಿಳಿಸಿದ್ದಳು. ಅದರಂತೆ ಪೋಷಕರು ಹಾಗೂ ಸಾರ್ವಜನಿಕರು, ಶನಿವಾರ ಶಾಲೆ ಬಳಿ ಕಾದು ನಿಂತು ಆರೋಪಿಯನ್ನು ಹಿಡಿದು ಶಾಲೆಯ ಕೊಠಡಿಯಲ್ಲಿ ಕೂಡಿಹಾಕಿ ಹಿಗ್ಗಾ–ಮುಗ್ಗಾ ಥಳಿಸಿದ್ದಾರೆ’ ಎಂದರು.

ಆರೋಪಿ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಯುರಿಟಿ ಗಾರ್ಡ್‌ ಕೆಲಸ: ಆಂಧ್ರಪ್ರದೇಶ ಚಿತ್ತೂರಿನ ಆರೋಪಿ ಸುನೀಲ್‌, ಮಾಗಡಿ ರಸ್ತೆಯಲ್ಲಿ ವಾಸವಿದ್ದಾನೆ.  ಫೈನಾನ್ಸ್‌ ಕಂಪೆನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.