ADVERTISEMENT

ಲೋಕಾಯುಕ್ತ ಎಡಿಜಿಪಿ ಮೀನಾ ಅಧಿಕಾರ ಸ್ವೀಕಾರ

ನಾಟಕೀಯ ಬೆಳವಣಿಗೆಯಲ್ಲಿ ಸತ್ಯನಾರಾಯಣ ರಾವ್‌ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:46 IST
Last Updated 20 ಅಕ್ಟೋಬರ್ 2014, 19:46 IST

ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾ­ನಿರ್ದೇಶಕರ (ಎಡಿಜಿಪಿ) ವರ್ಗಾವಣೆ ವಿಷಯ­ದಲ್ಲಿ ದಿಢೀರ್‌ ನಿಲುವು ಬದಲಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ್‌ ರಾವ್‌ ಅವರು, ಐಪಿಎಸ್‌ ಅಧಿಕಾರಿ ಸತ್ಯನಾರಾಯಣ ರಾವ್‌ ಅವರನ್ನು ಸೋಮವಾರ ಎಡಿಜಿಪಿ ಹುದ್ದೆಯಿಂದ ಬಿಡುಗಡೆ ಮಾಡಿದ್ದಾರೆ.

ಲೋಕಾಯುಕ್ತರ ಆದೇಶದಂತೆ ರಾವ್‌ ಸಂಜೆಯೇ  ಹುದ್ದೆಯಿಂದ ನಿರ್ಗಮಿಸಿದ್ದಾರೆ. ಮತ್ತೊಬ್ಬ ಐಪಿಎಸ್‌ ಅಧಿಕಾರಿ ಪ್ರೇಮ್‌ ಶಂಕರ್‌ ಮೀನಾ ಅವರು ಲೋಕಾಯುಕ್ತದ ನೂತನ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸತ್ಯನಾರಾಯಣ ರಾವ್‌ ಅವರನ್ನು ಸೇವೆಯಿಂದ ಬಿಡು­ಗಡೆ ಮಾಡುವ ವಿಷಯ ಸೋಮವಾರ ಮಧ್ಯಾಹ್ನ­ದವರೆಗೂ ಗೋಪ್ಯವಾಗಿಯೇ ಇತ್ತು. ಅವರೂ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಮಧ್ಯಾಹ್ನ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಲೋಕಾಯುಕ್ತರು, ಎಡಿಜಿಪಿ ಹುದ್ದೆಯಿಂದ ಬಿಡು­ಗಡೆ ಮಾಡಿರುವ ಆದೇಶದ ಪ್ರತಿ ನೀಡಿದರು.

ಆಕ್ಷೇಪಿಸಿದ್ದರು: ಲೋಕಾಯುಕ್ತ ಎಡಿಜಿಪಿ ಸೇರಿ 10 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೆಪ್ಟೆಂಬರ್‌ 13ರಂದು ಆದೇಶ ಹೊರಡಿಸಿತ್ತು. ತಮ್ಮ ಜೊತೆ ಸಮಾಲೋಚನೆ ನಡೆಸಿದೆ ಎಡಿಜಿಪಿಯನ್ನು ವರ್ಗಾ­ವಣೆ ಮಾಡಿದ ಕ್ರಮ ಪ್ರಶ್ನಿಸಿ ಭಾಸ್ಕರ್‌ ರಾವ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯ­ದರ್ಶಿ ಕೌಶಿಕ್‌ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು.

ಲೋಕಾಯುಕ್ತರ ಪತ್ರಕ್ಕೆ ಉತ್ತರ ನೀಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವರ್ಗಾ­ವಣೆ ಸಮರ್ಥಿಸಿಕೊಂಡಿತ್ತು. ‘ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಮುನ್ನ ಲೋಕಾಯುಕ್ತರ ಜೊತೆ ಸಮಾಲೋಚನೆ ನಡೆಸ­ಬೇಕೆಂಬ ನಿಯಮವಿಲ್ಲ’ ಎಂದು ಉತ್ತರಿಸಿತ್ತು.

ಸರ್ಕಾರ ಮತ್ತು ಲೋಕಾಯುಕ್ತರ ನಡುವೆ ಪತ್ರಸ­ಮರ ನಡೆಯುತ್ತಿರುವಾಗಲೇ ಸ್ವಾತಂತ್ರ್ಯ ಹೋರಾಟ­ಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಇದೇ ವಿಚಾ­ರ­ವಾಗಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಆರಂಭಿ­ಸಿದ ಹೈಕೋರ್ಟ್‌, ಸರ್ಕಾರ ಮತ್ತು ಲೋಕಾಯು­ಕ್ತಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಎಡಿಜಿಪಿ ವರ್ಗಾ­ವಣೆ ಆದೇಶವನ್ನು ಅಮಾನತಿನಲ್ಲಿ ಇರಿಸಿರುವುದಾಗಿ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

2010ರಿಂದ: 2010ರ ನವೆಂಬರ್‌ನಲ್ಲಿ ಬಿಜೆಪಿ ಸರ್ಕಾರ ಲೋಕಾಯುಕ್ತದ ಆಗಿನ ಎಡಿಜಿಪಿ ಜೀವನ್‌­ಕುಮಾರ್‌ ಗಾಂವ್ಕರ್‌ ಅವರನ್ನು ವರ್ಗಾವಣೆ ಮಾಡಿ ಸತ್ಯನಾರಾಯಣ ರಾವ್‌ ಅವರನ್ನು ನೇಮಿಸಿತ್ತು. ಈಗ ಅವರ ಸ್ಥಾನಕ್ಕೆ ಬಂದಿರುವ ಮೀನಾ 1984ರ ತಂಡದ ಐಪಿಎಸ್‌ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.