ADVERTISEMENT

ವಾರ್ಡ್‌ ಸಮಿತಿ: ನಗರಾಭಿವೃದ್ಧಿ ಇಲಾಖೆಯಿಂದ ಸಭೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ವಾರ್ಡ್‌ ಸಮಿತಿ ನಿಯಮ­ಗಳ ರಚನೆ ಮಾಡಲು ನಗರಾಭಿವೃದ್ಧಿ ಇಲಾಖೆ ಮಂಗಳವಾರ ನಮ್ಮ ಬೆಂಗ­ಳೂರು ಪ್ರತಿಷ್ಠಾನ, ನಿವಾಸಿಗಳ ಸಂಘಗಳ ಒಕ್ಕೂಟ, ಸಿವಿಕ್‌ ಸಂಸ್ಥೆ ಸೇರಿದಂತೆ ವಿವಿಧ ನಾಗರಿಕ ಸೇವಾ ಸಂಸ್ಥೆಗಳ ಪ್ರತಿನಿಧಿಗ­ಳೊಂದಿಗೆ ಸಭೆ ನಡೆಸಿತು.

ವಾರ್ಡ್‌ ಸಮಿತಿಗೆ ಸಂಬಂಧಿಸಿದಂತೆ ಕರ್ನಾಟಕ ಮುನ್ಸಿಪಲ್‌ಕಾರ್ಪೋ­­ ರೇ­ಷನ್‌ ಕಾಯ್ದೆ (ಕೆಎಂಸಿ)ಯಲ್ಲಿ ನಿಯ­ಮ ರೂಪಿ­ಸುವಾಗ ನಾಗರಿಕ ಸೇವಾ ಸಂಸ್ಥೆ­ಗಳ ಅಭಿಪ್ರಾಯವನ್ನು ಕಡ್ಡಾ­ಯ­ವಾಗಿ ಪಡೆ­ಯಬೇಕು ಎಂದು ಹೈ­ಕೋರ್ಟ್‌ ನಗ­ರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿತ್ತು. ನಗರಾಭಿವೃದ್ಧಿ ಇಲಾಖೆ ಕಾರ್ಯ­ದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ನೇತೃತ್ವ­ದಲ್ಲಿ ನಡೆದ ಸಭೆಯಲ್ಲಿ ಬೃಹತ್‌ ಬೆಂಗ­ಳೂರು ಮಹಾನಗರ ಪಾಲಿಕೆ ಅಧಿಕಾರಿ­ಗಳು ಸಹ ಪಾಲ್ಗೊಂಡಿದ್ದರು.

ವಾರ್ಡ್‌ ಸಮಿತಿ ಕಾರ್ಯದರ್ಶಿಗೆ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ನೀಡಬೇಕು. ಸಮಿತಿ ಸಭೆ ಸೇರುವ ಕುರಿತಂತೆ ಮುಂಚಿತವಾಗಿ ಸಾರ್ವ­­ಜನಿಕರಿಗೆ ಮಾಹಿತಿ ಒದಗಿಸ­ಬೇಕು. ಬರ, ಪ್ರವಾಹ, ಸಾಂಕ್ರಾಮಿಕ ರೋಗ ಹರಡುವಿಕೆ ಸಂದರ್ಭದಲ್ಲಿ ತುರ್ತು ಸಭೆ ಸೇರಬೇಕು ಎಂಬ ಸಲಹೆ­ಗಳನ್ನು ನಮ್ಮ ಬೆಂಗಳೂರು ಪ್ರತಿ­ಷ್ಠಾನದ ಮುಖ್ಯ ಕಾರ್ಯ ನಿರ್ವಹಣಾ­ಧಿಕಾರಿ ಶ್ರೀಧರ್‌ ಪಬ್ಬಿಶೆಟ್ಟಿ ನೀಡಿದರು.

‘ಸಭೆಯ ಕಲಾಪ ವೀಕ್ಷಿಸಲು ಸಾರ್ವ­ಜನಿಕರಿಗೂ ಮುಕ್ತ ಅವಕಾಶ ಒದಗಿಸ­ಬೇಕು ಮತ್ತು ಸಭೆಯ ನಡಾವಳಿಯನ್ನು ದಾಖಲಿಸಿ, ನಾಗರಿಕರಿಗೆ ಲಭ್ಯವಾಗು­ವಂತೆ ನೋಡಿಕೊಳ್ಳಬೇಕು. ಸಭೆಯ ಎಲ್ಲ ಕಲಾಪವನ್ನು ವಿಡಿಯೊ ಚಿತ್ರೀಕರಣ ಸಹ ಮಾಡಬೇಕು’ ಎಂದೂ ಸೂಚಿಸಿದರು.

ಬೆಂಗಳೂರು ನಿವಾಸಿಗಳ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಎನ್‌.ಎಸ್‌. ಮುಕುಂದ, ‘ಕೆಎಂಸಿ ಕಾಯ್ದೆಯಲ್ಲಿ ಕೆಲವು ನಿಯಮಾವಳಿ ಸೇರ್ಪಡೆ ಮಾಡಿದ ಮಾತ್ರಕ್ಕೆ ಸಾರ್ವಜನಿಕರಿಗೆ ಹಕ್ಕು ದೊರೆತು ಬಿಡುವುದಿಲ್ಲ. ಅದಕ್ಕೆ ಪೂರಕವಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌, ‘ವಾರ್ಡ್‌ ಸಮಿತಿಗೆ ಸದಸ್ಯರನ್ನು ನೇಮಕ ಮಾಡುವ ಬದಲು ಚುನಾವಣೆ ಮೂಲಕ ಆಯ್ಕೆ ಮಾಡಬೇಕು. ಪಾಲಿಕೆ ಸದಸ್ಯರಿಗೆ ಇರುವ ವೆಟೊ ಅಧಿಕಾರ ತೆಗೆದುಹಾಕಬೇಕು’ ಎಂದು ಒತ್ತಾಯಿಸಿ­ದರು.

ಸೆ. 19ರಂದು ಮತ್ತೆ ಸಭೆ ಸೇರಲು ನಿರ್ಧರಿಸಲಾಯಿತು. ಸಭೆ­ಯಲ್ಲಿ ಚರ್ಚೆ­ಯಾದ ವಿಷಯಗಳನ್ನು ಹೈಕೋರ್ಟ್‌ ಗಮನಕ್ಕೆ ತರಲಾಗುವುದು ಎಂದು ಅನಿಲ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.