ADVERTISEMENT

ವಿನಾಶಕ್ಕೆ ತಳ್ಳುತ್ತಿರುವ ಅಭಿವೃದ್ಧಿ: ವಿಷಾದ

​ಪ್ರಜಾವಾಣಿ ವಾರ್ತೆ
Published 22 ಮೇ 2015, 20:17 IST
Last Updated 22 ಮೇ 2015, 20:17 IST

ಬೆಂಗಳೂರು: ‘ಮನುಷ್ಯಕೇಂದ್ರಿತ ಆಗಿರಬೇಕಿದ್ದ ಅಭಿವೃದ್ಧಿ ಚಟುವಟಿಕೆಗಳು ಮನುಕುಲವನ್ನೇ ವಿನಾಶದ ಹಾದಿಗೆ ತಳ್ಳುತ್ತಿದ್ದು, ಜಗತ್ತು ಶಿಲಾಯುಗದತ್ತ ಹೊರಟಂತೆ ಭಾಸವಾಗುತ್ತಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ವಿಷಾದ ವ್ಯಕ್ತಪಡಿಸಿದರು.

‘ಕರ್ನಾಟಕದಲ್ಲಿ ಅಭಿವೃದ್ಧಿ: ಸವಾಲುಗಳು ಮತ್ತು ಪರ್ಯಾಯಗಳು’ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯನನ್ನು ಕಡೆಗಣಿಸಿ ಅಭಿವೃದ್ಧಿ ಕಾರ್ಯ ನಡೆಸುವುದು ಸಾಧ್ಯವೇ ಇಲ್ಲ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದುವರೆಗೆ 12 ಪಂಚವಾರ್ಷಿಕ ಯೋಜನೆಗಳು ಬಂದಿವೆ. ಬಡವರ ಸ್ಥಿತಿಯಲ್ಲಿ ಏನು ಬದಲಾವಣೆ ಆಗಿದೆ’ ಎಂದು ಪ್ರಶ್ನಿಸಿದರು. ‘ಬಡತನ ನಿವಾರಣೆಯನ್ನೇ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡು ಪಂಚವಾರ್ಷಿಕ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಅನ್ನಭಾಗ್ಯ ಯೋಜನೆ ಮೂಲಕ ಜನರಿಗೆ ಎಷ್ಟುದಿನ ಉಚಿತವಾಗಿ ಆಹಾರ ಧಾನ್ಯ ಕೊಡಲು ಸಾಧ್ಯ’ ಎಂದು ಕೇಳಿದ ಅವರು, ‘ಜನರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಸರ್ಕಾರಗಳು ನೆರವಾಗಬೇಕೇ ವಿನಃ ಇಂತಹ ತಾತ್ಕಾಲಿಕ ಪರಿಹಾರದಿಂದ ಏನೂ ಪ್ರಯೋಜನ ಇಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ವಿದೇಶಿ ಉದ್ದಿಮೆದಾರರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿರುವ ಪರಿ ನೋಡಿದರೆ ದೇಶಕ್ಕೆ ಆರ್ಥಿಕ ಗುಲಾಮಗಿರಿ ಕಟ್ಟಿಟ್ಟ ಬುತ್ತಿ’ ಎಂದು ಅಭಿಪ್ರಾಯಪಟ್ಟರು.

ಅರ್ಥಶಾಸ್ತ್ರಜ್ಞ ಪ್ರೊ. ಟಿ.ಆರ್‌. ಚಂದ್ರಶೇಖರ್‌, ‘ಅಭಿವೃದ್ಧಿಗೂ ಸಾಮಾಜಿಕ ನ್ಯಾಯಕ್ಕೂ ಸಂಬಂಧವೇ ಇಲ್ಲವಾಗಿದೆ. ಮಾನವ ಪ್ರಗತಿ ಸೂಚ್ಯಂಕವೇ ದೇಶದ ಅಭಿವೃದ್ಧಿ ಮಾನದಂಡ ಆಗಬೇಕಿದೆ’ ಎಂದು ಪ್ರತಿಪಾದಿಸಿದರು.

ಮತ್ತೊಬ್ಬ ಅರ್ಥಶಾಸ್ತ್ರಜ್ಞ ಪ್ರೊ. ಅಬ್ದುಲ್‌ ಅಜೀಜ್‌, ‘ಮೈಸೂರು ಒಡೆಯರಿಗೆ ಸುಸ್ಥಿರ ಅಭಿವೃದ್ಧಿ ಕುರಿತಂತೆ ಸರಿಯಾದ ಕಲ್ಪನೆ ಇದ್ದುದರಿಂದಲೇ ರಾಜ್ಯ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಲು ಸಾಧ್ಯವಾಯಿತು’ ಎಂದರು.

‘ಸಾಮಾಜಿಕ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಅವಕಾಶವಾದಿತನ ಹೆಚ್ಚುತ್ತಿದೆ. ಸುಳ್ಳು, ಮೋಸ, ವಂಚನೆ ಹೆಚ್ಚಿರುವ ಈ ದಿನಗಳಲ್ಲಿ ಅಭಿವೃದ್ಧಿ ಆಗುತ್ತಿದೆ ಎನ್ನುವ ಭ್ರಮೆ ಮೂಡಿದರೂ ಕಾಲ ಹಿಮ್ಮುಖವಾಗಿ ಹೊರಟಿದೆ’ ಎಂದು ವಿಷಾದದಿಂದ ನುಡಿದರು.

ಬೆಂಬಲ ಬೆಲೆಯೂ ಸಿಗುತ್ತಿಲ್ಲ
‘ಶೇಂಗಾ ಸೇರಿದಂತೆ ಹಲವು ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಘೋಷಿಸಿದ್ದರೂ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲೇ ರೈತರಿಂದ ಅದಕ್ಕಿಂತ ಕಡಿಮೆ ಬೆಲೆಗೆ ಶೇಂಗಾ ಖರೀದಿ ಮಾಡಲಾಗುತ್ತಿದೆ’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಹೇಳಿದರು.

‘ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ದೊರೆಯುತ್ತಿಲ್ಲ ಎನ್ನುವುದಕ್ಕೆ ಈ ವಿದ್ಯಮಾನವೇ ಸಾಕ್ಷಿ’ ಎಂದ ಅವರು, ‘ಆಹಾರ ಬೆಳೆಗಳ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಇನ್ನು ಹತ್ತು ವರ್ಷಗಳಲ್ಲಿ ರಾಗಿ–ಜೋಳ ಎಲ್ಲಿ ಮಾಯವಾಗುವುದೋ ಎನ್ನುವ ಭೀತಿ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಅನ್ನಭಾಗ್ಯ ಯೋಜನೆಗಾಗಿ ಈ ಸಲ ಸರ್ಕಾರ 15 ಲಕ್ಷ ಕ್ವಿಂಟಾಲ್‌ ರಾಗಿ ಖರೀದಿ ಮಾಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT