ADVERTISEMENT

ವಿಬ್ಗಯೊರ್ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು

ಬೇರೆ ಶಾಲೆಗಳ ಹುಡುಕಾಟದಲ್ಲಿ ಪೋಷಕರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 20:10 IST
Last Updated 1 ಆಗಸ್ಟ್ 2014, 20:10 IST

ಬೆಂಗಳೂರು: ಒಂದನೇ ತರಗತಿ ವಿದ್ಯಾರ್ಥಿನಿ ಅತ್ಯಾ­ಚಾರ ಪ್ರಕರಣದ ತರುವಾಯ ವಿಬ್ಗಯೊರ್ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸದಿರಲು ನಿರ್ಧರಿಸಿರುವ ಹಲವು ಪೋಷಕರು, ಇದೀಗ ಸಮೀಪದ ಬೇರೆ ಶಾಲೆಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

‘ವಿಬ್ಗಯೊರ್ ಶಾಲೆಯ ವಿವಿಧ ತರಗತಿಗೆ ಸೇರಿದ ಸುಮಾರು 50 ವಿದ್ಯಾರ್ಥಿಗಳು ಈಗಾಗಲೇ ಕ್ರೈಸಾ­ಲಿಸ್ ಹೈ ಎಂಬ ಮತ್ತೊಂದು ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ’ ಎಂದು ಪೋಷಕರೊಬ್ಬರು ತಿಳಿಸಿದರು. ‘ಗ್ರಿನ್‌ವುಡ್ ಹೈ ಎಂಬ ಶಾಲೆ ಕೂಡ ವಿಬ್ಗ­ಯೊರ್‌ನ 50ಕ್ಕೂ ಹೆಚ್ಚಿನ ಮಕ್ಕಳಿಗೆ ಪ್ರವೇಶ ನೀಡಿದೆ’ ಎಂದು  ಮತ್ತೊಬ್ಬ ಪಾಲಕರು ಹೇಳಿದರು.
ನ್ಯೂ ಹಾರಿಜನ್ ಗುರುಕುಲ ಮತ್ತು ಕ್ರೈಸಾಲಿಸ್ ಹೈ ತರದ ಹಲವು ಶಾಲೆಗಳು ಪ್ರವೇಶ ನೀಡುವುದು ಮಾತ್ರವಲ್ಲದೇ, ಹೊಸ ಪ್ರವೇಶಗಳಿಗೆ ಶುಲ್ಕ ಮನ್ನಾ ಮಾಡಿವೆ. ಗೋಪಾಲನ್ ಇಂಟರ್‌ನ್ಯಾಷನಲ್ ಸ್ಕೂಲ್ ಹೊಸ ಪ್ರವೇಶಗಳಿಗೆ ಶುಲ್ಕ ವಿನಾಯಿತಿ ಘೋಷಿಸಿದೆ.

ಏತನ್ಮಧ್ಯೆ, ಕೆಲ ಶಾಲೆಗಳು ಹೊಸ ಪ್ರವೇಶ ಪಡೆಯುವ ಮಕ್ಕಳಿಗೆ ಮೂರು ತಿಂಗಳ ಸಾರಿಗೆ ಶುಲ್ಕ ಪಡೆಯುವುದಿಲ್ಲ ಎಂಬ ಆಮಿಷ ಕೂಡ ಒಡ್ಡುತ್ತಿವೆ. ಓಕ್ರಿಡ್ಜ್ ಇಂಟರ್‌ನ್ಯಾಷನಲ್ ಸ್ಕೂಲ್ ಕೂಡ ವಿಬ್ಗಯೊರ್‌ನಿಂದ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಆಸಕ್ತಿ ತೋರಿದೆ.

ಬಹುತೇಕ ಇಂಟರ್‌ನ್ಯಾಷನಲ್ ಶಾಲೆಗಳು ವರ್ಷ­ ಪೂರ್ತಿ ಪ್ರವೇಶ ನೀಡುತ್ತವೆ ಎಂದು ಹೇಳುವ ಪೋಷ­ಕ­ರೊಬ್ಬರು,‘ಇಂತಹ ಶಾಲೆಗಳಲ್ಲಿ ಪ್ರವೇಶ ಪಡೆಯು­ವುದು ಸಮಸ್ಯೆಯೇ ಅಲ್ಲ. ಆದರೆ, ಪ್ರವೇಶ ಶುಲ್ಕ ಪಾವ­ತಿಸುವುದು ಮಾತ್ರ ಹೇಳತೀರದ ಗೋಳು’ ಎನ್ನುತ್ತಾರೆ.

‘ವಿಬ್ಗಯೊರ್‌ ಶಾಲೆಯು ಪ್ರವೇಶ ಶುಲ್ಕ ಹಿಂದಿ­ರುಗಿಸುವ ಕುರಿತು ಸಂದೇಹ ಹೊಂದಿರುವ ಹಲ­ವಾರು ಪೋಷಕರು ಅನಿವಾರ್ಯವಾಗಿ ಪುನಃ ಆ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ’ ಎಂದರು.ವಿಬ್ಗಯೊರ್‌ ಶಾಲೆಯಲ್ಲಿ ಇನ್ನೂ ಹಲವಾರು ತಪ್ಪಿತಸ್ಥರು ಇರುವುದ್ದನ್ನು ಪ್ರತಿಭಟಿಸಿ ಆ ಶಾಲೆಗೆ ನನ್ನ ಮಗಳನ್ನು ಕಳುಹಿಸದೆ ಬೇರೆ ಶಾಲೆಯಲ್ಲಿ ಪ್ರವೇಶ ಪಡೆದೆ ಎಂದ ಪೋಷಕರೊಬ್ಬರು, ‘ನೈತಿಕತೆ ಇಲ್ಲದ ಉದ್ಯಮಿಗಳು ನಡೆಸುವ ಶಾಲೆಗೆ ನನ್ನ ಮಗಳನ್ನು ಕಳುಹಿಸಲಾರೆ’ ಎಂದು ತಿಳಿಸಿದರು.

ಈ ವಿದ್ಯಮಾನದ ನಡುವೆಯೇ ತರಗತಿಗಳನ್ನು ಪುನರಾರಂಭಿಸಿರುವ ವಿಬ್ಗಯೊರ್‌ ಶಾಲೆಯು ಎಲ್ಲ ತರಗತಿಗಳಿಗೆ ವಿದ್ಯಾರ್ಥಿಗಳು ಪುನಃ ಹಾಜರಾಗಿದ್ದು, ಶುಕ್ರವಾರ ಶೇ.83ರಷ್ಟು ಹಾಜರಾತಿ ಇತ್ತು ಎಂದು ಹೇಳಿದೆ.

ನ್ಯಾಯಕ್ಕಾಗಿ ಇಂದು ಮೊಂಬತ್ತಿ ಜಾಗರಣೆ
ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ವಿಬ್ಗಯೊರ್‌ ಶಾಲೆ ಮಕ್ಕಳ ಪೋಷಕರೊಂದಿಗೆ ಇತರೆ ಶಾಲೆಗಳ ಮಕ್ಕಳ ಪೋಷಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಕೈಜೋಡಿಸಿ, ನಗರದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿ 8 ಗಂಟೆಗೆ ನ್ಯಾಯಕ್ಕಾಗಿ ಮೊಂಬತ್ತಿ ಜಾಗರಣೆ ಜಾಥಾ ನಡೆಸಲು ನಿರ್ಧರಿಸಿದ್ದಾರೆ.

ಅತ್ಯಾಚಾರ ವಿರೋಧಿ ಬೆಂಗಳೂರು ಹೋರಾಟಗಾರರು ಮತ್ತು ವೈಟ್‌ಫೀಲ್ಡ್ ರೈಸಿಂಗ್ ಸಂಘಟನೆಗಳ ಸದಸ್ಯರು  ಮಾರತ್‌ಹಳ್ಳಿಯಲ್ಲಿರುವ ವಿಬ್ಗಯೊರ್‌ ಶಾಲೆ ಆವರಣದಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಂಡಿ­ದ್ದಾರೆ. ನಗರದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗಳ ಸ್ಥಳಗಳ ಮಾಹಿತಿಯು ಫೇಸ್‌ಬುಕ್‌ನಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT