ADVERTISEMENT

ವಿ.ವಿಗಳ ಅವ್ಯವಹಾರ ತನಿಖೆಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:46 IST
Last Updated 21 ಜನವರಿ 2017, 19:46 IST
ವಿ.ವಿಗಳ ಅವ್ಯವಹಾರ ತನಿಖೆಗೆ ಸಮಿತಿ ರಚನೆ
ವಿ.ವಿಗಳ ಅವ್ಯವಹಾರ ತನಿಖೆಗೆ ಸಮಿತಿ ರಚನೆ   

ಬೆಂಗಳೂರು: ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ವಿವಿಗಳ ಜಮೀನು ಅತಿಕ್ರಮಣ ಹಾಗೂ ಕಾಮಗಾರಿಗಳಲ್ಲಿ ನಡೆದಿರುವ ಆಡಳಿತಾತ್ಮಕ ಲೋಪಗಳ ಕುರಿತು ವಿಚಾರಣೆ ನಡೆಸಲು ಇಲಾಖೆ ಶನಿವಾರ ಅಧಿಸೂಚನೆ ಹೊರಡಿಸಿದೆ.

ಈ ಉದ್ದೇಶಕ್ಕಾಗಿ ಪ್ರತಿ ವಿವಿಗೊಂದರಂತೆ 17 ಸಮಿತಿಗಳನ್ನು ರಚಿಸಲಾಗಿದ್ದು,  ಈ ಸಮಿತಿಯಲ್ಲಿ ಲೋಕೋಪಯೋಗಿ ಇಲಾಖೆಯ ಒಬ್ಬ  ಎಂಜಿನಿಯರ್‌, ಪಾಲಿಕೆ ಅಥವಾ ಜಿಲ್ಲಾ ಪಂಚಾಯ್ತಿಯ ಲೆಕ್ಕಾಧಿಕಾರಿ, ಶಿಕ್ಷಣ ಇಲಾಖೆ ಅಥವಾ ತಾಂತ್ರಿಕ ಇಲಾಖೆಯ ಒಬ್ಬರು ಅಧಿಕಾರಿ ಇರುತ್ತಾರೆ. ಕೆಲವು ಸಮಿತಿಗಳಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇರುತ್ತಾರೆ.

15 ದಿನಗಳ ಒಳಗಾಗಿ ಈ ಸಮಿತಿಗಳು ವರದಿ ಸಲ್ಲಿಸಬೇಕು. ಆದರೆ, ವಿಚಾರಣೆ ಪೂರ್ಣಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಸಮಿತಿಯ ಸದಸ್ಯರು  ವಿವಿಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸುವರು. ಆ ಸಮಯದಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಯ ನಿಯಮಾವಳಿಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವರು.

ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಹಣ ಪಾವತಿ ಮಾಡಲಾಗಿದೆಯೇ, ಸಕಾಲಕ್ಕೆ ಕೆಲಸ ಮುಗಿಯದೆ ವಿಳಂಬವಾಗಿದ್ದರಿಂದ ಬೊಕ್ಕಸಕ್ಕೆ ನಷ್ಟವಾಗಿದೆಯೇ, ವಿವಿ ಆಡಳಿತದ ಅನುಮತಿ ಪಡೆಯದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ ಎಂದು  ತಿಳಿಸಿವೆ.
5 ವರ್ಷಗಳಿಂದೀಚೆಗೆ ನಡೆದ ಅಕ್ರಮಗಳ ಕುರಿತು ಸಮಿತಿ ಪರಿಶೀಲಿಸಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.