ADVERTISEMENT

ವಿಶೇಷ ಅಧಿವೇಶನ ಬಹಿಷ್ಕರಿಸದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 20:14 IST
Last Updated 17 ಏಪ್ರಿಲ್ 2015, 20:14 IST

ಬೆಂಗಳೂರು: ‘ಬಿಬಿಎಂಪಿ ವಿಭಜನೆಗಾಗಿ ಇದೇ 20ರಂದು ನಡೆಯುವ ವಿಶೇಷ ಅಧಿವೇಶನವನ್ನು ಬಹಿಷ್ಕರಿಸ­ಬಾರದು. ವಿಭಜನೆ ತಡೆಯಲು ನಮ್ಮ ಜತೆ ಕೈ­ಜೋಡಿಸಬೇಕು ಎಂದು ಜೆಡಿಎಸ್‌ ಶಾಸ­ಕಾಂಗ ಪಕ್ಷದ ನಾಯಕ ಎಚ್‌.ಡಿ.­ಕುಮಾರ­ಸ್ವಾಮಿ ಅವರಲ್ಲಿ ಮನವಿ ಮಾಡಿ­ದ್ದೇವೆ’ ಎಂದು ಬಿಜೆಪಿ ರಾಜ್ಯ ಘಟ­ಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಮುಂದೂಡಲು ಕಾಂಗ್ರೆಸ್‌ ಹುನ್ನಾರ ನಡೆಸಿದೆ. ಸರ್ಕಾರದ ಈ ಪ್ರಯತ್ನಕ್ಕೆ ನಮ್ಮ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಲಿದೆ. ಜೆಡಿಎಸ್‌ ನಮ್ಮ ಜತೆ ಸೇರಿದರೆ, ಬಿಬಿಎಂಪಿ ವಿಭಜನೆಗೆ ಅನು­ಕೂಲ ಕಲ್ಪಿಸುವ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಸೋಲಾಗಲಿದೆ.  ನಮ್ಮ ಮನವಿಗೆ ಜೆಡಿಎಸ್‌ ಸಕಾರಾ­ತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ’ ಎಂದರು.

‘ಚುನಾವಣಾ ಆಯೋಗ ಶೀಘ್ರ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು.   ಹೈಕೋರ್ಟ್‌ ಆದೇಶಕ್ಕೆ ಬೆಲೆ ನೀಡಿ ವೇಳಾ­ಪಟ್ಟಿ ಪ್ರಕಟಿಸದಿದ್ದರೆ ಆಯೋಗದ ನಿಷ್ಕ್ರಿಯತೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸ­ಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು. 
‘ವಿಭಜನೆ ಕುರಿತು ಅಧ್ಯಯನ ನಡೆ­ಸಲು ನೇಮಿಸಲಾದ ಬಿ.ಎಸ್‌.ಪಾಟೀಲ್‌ ಸಮಿತಿ ಸಲ್ಲಿಸಿರುವ  ಪ್ರಾಥಮಿಕ ವರದಿ­ಯನ್ನು ಸರ್ಕಾರ ಬಹಿರಂಗ ಪಡಿಸಬೇಕು.

ಪ್ರಾಥಮಿಕ ವರದಿಯಲ್ಲಿ ಸಮಿತಿಯು ಬಿಬಿಎಂಪಿ ವಿಭಜನೆಗೆ ಶಿಫಾರಸು ಮಾಡಿದೆಯೇ? ಸಮಿತಿಯು ಅಂತಿಮ ವರದಿ ಸಲ್ಲಿಸುವುದಕ್ಕೆ ಮುನ್ನವೇ ಬಿಬಿ­ಎಂಪಿ ವಿಭಜಿಸಲು ಸರ್ಕಾರ ತರಾತುರಿ ಏಕೆ?’ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಪ್ರಶ್ನಿಸಿದರು. 

‘ಸಮಿತಿಯ ವರದಿ ಬಂದ ಬಳಿಕ ಈ ಬಗ್ಗೆ ವಿಧಾನ ಮಂಡಲದಲ್ಲಿ ಚರ್ಚೆ ನಡೆಯಲಿ. ತಜ್ಞರ ಸಮಿತಿಯು  ವರದಿ ಬಗ್ಗೆ ಚರ್ಚಿಸಲಿ.  ಬಳಿಕ ಬೇಕಿದ್ದರೆ ಬಿಬಿಎಂಪಿ ವಿಭಜನೆ ಬಗ್ಗೆ ಸರ್ಕಾರ ನಿರ್ಧರಿಸಲಿ’ ಎಂದು ಸಲಹೆ ನೀಡಿದರು. ‘ಸಾರ್ವಜನಿಕರೂ ಬಿಬಿಎಂಪಿ ವಿಭ­ಜ­ನೆಗೆ ಒತ್ತಾಯಿಸಿಲ್ಲ. ಮೂರು ಭಾಗ­ಗಳಾಗಿ ವಿಭಜನೆಗೊಂಡಿರುವ ದೆಹಲಿ ಮಹಾ­­ನಗರ ಪಾಲಿಕೆಯನ್ನೂ ಮತ್ತೆ ಒಂದು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದರು.

‘ಜಾತಿ ಸಮೀಕ್ಷೆಯ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಸಮರ್ಪಕ ಉತ್ತರ ನೀಡಲು ಆಗಿಲ್ಲ. ಇನ್ನು  ಹಳ್ಳಿಯ ಅವಿದ್ಯಾವಂತ ಜನರು ಯಾವ ರೀತಿ ಉತ್ತರ ನೀಡುತ್ತಾರೆ?’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು. ‘ಜಾತಿ ಸಮೀಕ್ಷೆಗೆ ಕಾಂಗ್ರೆಸ್‌ನ ಶಾಸಕರೂ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.