ADVERTISEMENT

ವೇಶ್ಯಾವಾಟಿಕೆಗೆ ಬಳಸಿಕೊಂಡು ಸುಲಿಗೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 19:55 IST
Last Updated 9 ಅಕ್ಟೋಬರ್ 2015, 19:55 IST

ಬೆಂಗಳೂರು:  ಇಬ್ಬರು ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡು ನಂತರ, ಅವರಿಂದ ಹಣ ಕಿತ್ತುಕೊಂಡು ಪರಾರಿಯಾಗಿದ್ದ ರಾಜಣ್ಣ (40) ಎಂಬಾತನನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಜಾಲ ನಿವಾಸಿಯಾದ ರಾಜಣ್ಣ ತನ್ನ ಸ್ನೇಹಿತ ಸುಬ್ರಮಣಿ ಎಂಬಾತನೊಂದಿಗೆ, ಅಕ್ಟೋಬರ್ 8ರ ರಾತ್ರಿ ಮತ್ತಿಕೆರೆ ಬಳಿ ಯುವತಿಯರನ್ನು ತನ್ನ ಕಾರಿಗೆ ಹತ್ತಿಸಿಕೊಂಡಿದ್ದ.

ಮಾರ್ಗಮಧ್ಯೆ ಇಬ್ಬರಿಗೂ ತಲಾ ₹ 4 ಸಾವಿರ ನೀಡಿದ್ದ ಆತ, ಇಬ್ಬರನ್ನು ಬಾಶೆಟ್ಟಿಹಳ್ಳಿಯಲ್ಲಿರುವ ವಸತಿ ಗೃಹವೊಂದರಲ್ಲಿ ತಂಗಿದ್ದ ಶಶಿ ಮತ್ತು ಅರುಣ ಅವರ ಕೊಠಡಿಗೆ ಬಿಟ್ಟಿದ್ದರು. ಇಬ್ಬರ ಬಳಿ ದೈಹಿಕ ಸಂಪರ್ಕ ಹೊಂದಿದ್ದ ಯುವತಿಯರು, ಮಾರನೆಯ ದಿನ ಬೆಳಗ್ಗಿನ ಜಾವ ವಿದ್ಯಾರಣ್ಯಪುರಕ್ಕೆ ಡ್ರಾಪ್ ನೀಡುವಂತೆ ಆರೋಪಿಗಳನ್ನು ಕೋರಿದ್ದಾರೆ. ಆಗ ತಮ್ಮೊಂದಿಗೂ ಲೈಂಗಿಕ ಸಂಪರ್ಕ ಹೊಂದುವಂತೆ ಆರೋಪಿಗಳು ಬಲವಂತ ಮಾಡಿದ್ದಾರೆ. ಇದಕ್ಕೆ ಯುವತಿಯರು ನಿರಾಕರಿಸಿದ್ದಾರೆ,

ಇದರಿಂದ ಕೋಪಗೊಂಡ ಆರೋಪಿಗಳು, ಯುವತಿಯರನ್ನು ಕಾರಿನಲ್ಲಿ ಕರೆದೊಯ್ದು, ಇಬ್ಬರ ಬಳಿ ಇದ್ದ ₹ 8 ಸಾವಿರ ಕಿತ್ತುಕೊಂಡು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್‌ ಬಳಿ ಬಿಟ್ಟು ಪರಾರಿಯಾಗಿದ್ದರು.

ನಂತರ ಯುವತಿಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು.ಸ್ಥಳಕ್ಕೆ ಹೋದ ಸಿಬ್ಬಂದಿ, ಇಬ್ಬರನ್ನು ಠಾಣೆಗೆ ಕರೆದುಕೊಂಡು ಬಂದಾಗ, ಆರೋಪಿಗಳ ಮೇಲೆ ಸುಲಿಗೆ ಆರೋಪದ ಮೇಲೆ ದೂರು ಕೊಟ್ಟರು. ಆರೋಪಿಯ ಮೊಬೈಲ್‌ ಸಂಖ್ಯೆ ಆಧರಿಸಿ ಬಂಧಿಸಲಾಯಿತು.

ಅಲ್ಲದೆ, ರಾಜಣ್ಣನಿಗೆ ಯುವತಿಯರನ್ನು ಕಳುಹಿಸಿ ಕೊಟ್ಟ ಆರೋಪಿ ಕುಮಾರ್ ಹಾಗೂ ಇನ್ನುಳಿದವರ    ಪತ್ತೆ ಕಾರ್ಯ ಮುಂದುವರಿದಿದೆ  ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.