ADVERTISEMENT

ವೇಶ್ಯಾವಾಟಿಕೆ ಕೂಪದಿಂದ ಗರ್ಭಿಣಿಯಾದ ಯುವತಿ

ನೇಪಾಳ ಮೂಲದ ರೂಪದರ್ಶಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:47 IST
Last Updated 4 ಸೆಪ್ಟೆಂಬರ್ 2015, 19:47 IST

ಬೆಂಗಳೂರು: ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯ ಹೋಟೆಲ್‌ ಮೇಲೆ ಗುರುವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ ನೇಪಾಳ ಮೂಲದ ರೂಪದರ್ಶಿಯನ್ನು ರಕ್ಷಿಸಿದ್ದಾರೆ.

‘ಏಜೆಂಟ್‌ ಅನ್ವರ್‌ ಖಾನ್ ಅಲಿಯಾಸ್ ಸಾಗರ್ (27) ಹಾಗೂ ಗಿರಾಕಿ ಸುಧಾನ್ವ (28) ಎಂಬುವರನ್ನು ಬಂಧಿಸಲಾಗಿದೆ. ಆ.22ರಂದು ಅನ್ವರ್‌ನ ಮೂಲಕ ರೂಪದರ್ಶಿಯನ್ನು ಹೋಟೆಲ್‌ಗೆ ಕರೆಸಿಕೊಂಡಿದ್ದ ಸುಧಾನ್ವ, ತನ್ನ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಅವರಿಗೆ ಚಿತ್ರ ಹಿಂಸೆ ಕೊಟ್ಟಿದ್ದ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ಮಾಡೆಲ್‌ ಜಗತ್ತಿನಲ್ಲಿ ಹೆಸರು ಮಾಡಬೇಕೆಂಬ ಕನಸು ಕಂಡಿದ್ದ 23 ವರ್ಷದ ಆ ಯುವತಿ, ಎಂಟು ತಿಂಗಳ ಹಿಂದೆ ಮುಂಬೈಗೆ ಬಂದಿದ್ದರು. ಅಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ, ಹಿಂದಿ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದ. ನಂತರ ಆಶ್ರಯ ನೀಡುವುದಾಗಿ ವಸತಿ ಗೃಹಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕಕ್ರಿಯೆ ನಡೆಸಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದ.

‘ಹೀಗೆ ನಾಲ್ಕೈದು ಬಾರಿ ಆ ಯುವತಿಯನ್ನು ಬಳಸಿಕೊಂಡ ಆರೋಪಿ, ನಂತರ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲು ನಿರ್ಧರಿಸಿದ. ಅದಕ್ಕೆ ಒಪ್ಪದಿದ್ದಾಗ, ಲೈಂಗಿಕ ಕ್ರಿಯೆಯ ವಿಡಿಯೋವನ್ನು ಅಂತರ್ಜಾಲದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದ. ಇದರಿಂದ ದಿಕ್ಕು ತೋಚದಂತಾಗಿ ಅವರು ದಂಧೆಗೆ ಇಳಿದರು. ನಂತರ ಆತ, ಆನ್‌ಲೈನ್‌ ಮುಖಾಂತರ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ಮೂಲಕ ಹಣ ಗಳಿಸಲಾರಂಭಿಸಿದ.

‘ಆ ಆರೋಪಿ ನಗರದಲ್ಲಿಯೂ ಹಲವು ಏಜೆಂಟ್‌ಗಳನ್ನು ಹೊಂದಿದ್ದಾನೆ. ಇಲ್ಲಿ ಶ್ರೀಮಂತ ಗಿರಾಕಿಗಳನ್ನು ಹುಡುಕುವ ಆ ಏಜೆಂಟ್‌ಗಳು, ಮುಂಬೈನಿಂದ ಯುವತಿಯರನ್ನು ಅವರಿಗೆ ಪೂರೈಸುತ್ತಾರೆ. ಗಂಟೆಗೆ ₹  50 ಸಾವಿರ ಹಾಗೂ ಇಡೀ ರಾತ್ರಿಗೆ ₹  1 ಲಕ್ಷದಂತೆ ವ್ಯವಹಾರ ನಡೆಸುತ್ತಾರೆ.
‘ಅದೇ ರೀತಿ ಸುಧಾನ್ವನಿಂದ ₹  50 ಸಾವಿರ ಸಂಗ್ರಹಿಸಿದ ಏಜೆಂಟ್ ಅನ್ವರ್ ಖಾನ್‌, ಮುಂಬೈನಲ್ಲಿರುವ ಜಾಲದ ಸೂತ್ರಧಾರನ ಬ್ಯಾಂಕ್‌ ಖಾತೆಗೆ ಹಣ ಹಾಕಿದ್ದ. ಆತ, ಆ.22ರಂದು ಈ ರೂಪದರ್ಶಿಯನ್ನು ನಗರಕ್ಕೆ ಕಳುಹಿಸಿಕೊಟ್ಟಿದ್ದ.

‘ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣಕ್ಕೆ ಆ ರೂಪದರ್ಶಿಗೆ ಮನಬಂದಂತೆ ಥಳಿಸಿದ್ದ ಸುಧಾನ್ವ, ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟಿದ್ದ.  ಆ ಕೋಣೆಯಿಂದ ತಪ್ಪಿಸಿಕೊಂಡು ಬಂದ ಯುವತಿ, ರಕ್ಷಣೆಗೆ ಹೋಟೆಲ್‌ ಸಿಬ್ಬಂದಿಯ ನೆರವು ಕೋರಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಕೂಡಲೇ ದಾಳಿ ನಡೆಸಲಾಯಿತು. ಆದರೆ, ಸುಧಾನ್ವ ಪರಾರಿಯಾಗಿದ್ದ. ಕೋಣೆಯ ಮೇಜಿನ ಮೇಲೆ ಆತನ ಮತದಾರರ ಗುರುತಿನ ಚೀಟಿ ಇತ್ತು. ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ, ನಂತರ ಏಜೆಂಟ್‌ ಅನ್ವರ್‌ನನ್ನು  ಪತ್ತೆಮಾಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
*
2 ತಿಂಗಳ ಗರ್ಭಿಣಿ
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಎರಡು ತಿಂಗಳ ಗರ್ಭಿಣಿ ಆಗಿರುವುದು ಗೊತ್ತಾಗಿದೆ. ವಿಪರ್ಯಾಸವೆಂದರೆ ಆ ಸಂಗತಿ ಯುವತಿಗೇ ತಿಳಿದಿಲ್ಲ.
– ಸಿಸಿಬಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.