ADVERTISEMENT

ವೈದ್ಯಕೀಯ ಕೋರ್ಸ್‌ಗಳಿಗೆ ಏಕರೂಪದ ಕೌನ್ಸೆಲಿಂಗ್‌ ನಡೆಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:57 IST
Last Updated 16 ಮಾರ್ಚ್ 2017, 19:57 IST

ಬೆಂಗಳೂರು: ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಏಕರೂಪದ ಕೌನ್ಸೆಲಿಂಗ್‌ ನಡೆಸಲು ಡೀಮ್ಡ್‌ ವಿಶ್ವವಿದ್ಯಾಲಯಗಳು, ಖಾಸಗಿ ಮತ್ತು ಅಲ್ಪಸಂಖ್ಯಾತ ಕಾಲೇಜುಗಳು ಒಪ್ಪಿಗೆ ಸೂಚಿಸಿವೆ.

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಖಾಸಗಿ, ಡೀಮ್ಡ್‌, ಅಲ್ಪಸಂಖ್ಯಾತ ಕಾಲೇಜುಗಳ ಪ್ರತಿನಿಧಿಗಳೊಂದಿಗೆ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದರು.

ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಏಕರೂಪದ ಕೌನ್ಸೆಲಿಂಗ್‌ ನಡೆಸಿದರು ಸಹ ಸರ್ಕಾರಿ ಕೋಟಾದ ಸೀಟುಗಳಿಗೆ ಮಾತ್ರ ಸರ್ಕಾರ ಶುಲ್ಕ ನಿಗದಿ ಮಾಡಬೇಕು. ಉಳಿದ ಸೀಟುಗಳಿಗೆ ಶುಲ್ಕ ನಿಗದಿ ಮಾಡುವ ಸ್ವಾತಂತ್ರ್ಯವನ್ನು ನಮಗೇ ಬಿಡಬೇಕು ಎಂದು ಡೀಮ್ಡ್‌ ಮತ್ತು ಅಲ್ಪಸಂಖ್ಯಾತ ಕಾಲೇಜುಗಳ ಪ್ರತಿನಿಧಿಗಳು ಸಭೆಯಲ್ಲಿ ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ.

ಏಕರೂಪದ ಕೌನ್ಸೆಲಿಂಗ್‌ ಮತ್ತು ಬಹುವಿಧದ ಶುಲ್ಕ ನಿಗದಿ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಸಚಿವ ಶರಣ ಪ್ರಕಾಶ ಪಾಟೀಲ ಸಭೆಗೆ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಂತರ ಮೆರಿಟ್‌ ಆಧಾರದ ಮೇಲೆ ಏಕರೂಪದ ಕೌನ್ಸೆಲಿಂಗ್‌ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಸುವ್ಯವಸ್ಥಿತವಾಗಿ ಕೌನ್ಸೆಲಿಂಗ್‌ ನಡೆಸುತ್ತಾ ಬಂದಿದೆ. ಆ ಮೂಲಕವೇ ಏಕರೂಪದ ಕೌನ್ಸೆಲಿಂಗ್‌ ನಡೆಯಬೇಕು ಎಂದು ಸಚಿವರು ಸಭೆಯಲ್ಲಿ ಹೇಳಿದ್ದಾರೆ.

ಶೇ 10ರಷ್ಟು ಶುಲ್ಕ ಹೆಚ್ಚಳ?
ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕವನ್ನು ಕಳೆದ ವರ್ಷಕ್ಕಿಂತ ಕನಿಷ್ಠ ಶೇ 10ರಷ್ಟು ಹೆಚ್ಚಳ ಮಾಡುವಂತೆ ಕಾಲೇಜುಗಳು ಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿವೆ. ಶುಲ್ಕ ಹೆಚ್ಚಳ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.