ADVERTISEMENT

ವೈದ್ಯಕೀಯ ಸೀಟು: ದಾಖಲಾತಿ ಪರಿಶೀಲನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:54 IST
Last Updated 19 ಜುಲೈ 2017, 19:54 IST

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಆಕಾಂಕ್ಷಿಗಳ ದಾಖಲಾತಿ ಪರಿಶೀಲನೆ ಬುಧವಾರ ರಾತ್ರಿ ಪೂರ್ಣಗೊಂಡಿತು. ಆದರೆ, ಇತರೆ ಹಿಂದುಳಿದ ವರ್ಗದ (ಒಬಿಸಿ) ಕೋಟಾದಡಿ ವೈದ್ಯಕೀಯ ಸೀಟು ನೀಡುವಂತೆ ಒತ್ತಾಯಿಸಿ ಹೊರರಾಜ್ಯಗಳ 40ರಿಂದ 50 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗದ್ದಲ ಉಂಟು ಮಾಡಿದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು.

‘ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸಾಮಾನ್ಯ ಕೋಟಾದಡಿ (‘ನೀಟ್‌’ನಲ್ಲಿ 720 ಅಂಕಗಳಿಗೆ ಕನಿಷ್ಠ 131 ಅಂಕ ಪಡೆದಿರಬೇಕು) ಮಾತ್ರ ಸೀಟು ಸಿಗುತ್ತದೆ. ಅದಕ್ಕಿಂತ ಕಡಿಮೆ ಅಂಕ ಇರುವ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಸಾಧ್ಯವಿಲ್ಲವೆಂದು ಅವರನ್ನು ವಾಪಸ್‌ ಕಳುಹಿಸಲಾಯಿತು’ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಸ್. ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜುಲೈ 11ರಿಂದ ದಾಖಲಾತಿ ಪರಿಶೀಲನೆ ಆರಂಭವಾಗಿತ್ತು. ರಾಜ್ಯದಲ್ಲಿ ಸೀಟು ಪಡೆಯುವುದಕ್ಕಾಗಿ ನೋಂದಾಯಿಸಿಕೊಂಡ ಎಲ್ಲ ಅಭ್ಯರ್ಥಿಗಳಿಗೂ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಆಯ್ಕೆ (ಆಪ್ಷನ್‌ ಎಂಟ್ರಿ) ಪ್ರಾರಂಭವಾಗಿದೆ. ಇದೇ 25ರಂದು ಮೊದಲ ಹಂತದ ಸೀಟು ಹಂಚಿಕೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.