ADVERTISEMENT

ವ್ಯವಹಾರದಲ್ಲಿ ಕನ್ನಡ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್‌.ಹನುಮಂತಯ್ಯ ಅವರು ಸೋಮವಾರ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಕಾರ್ಪೊರೇಷನ್‌ ಬ್ಯಾಂಕ್‌ ಶಾಖೆ ಮತ್ತು  ವಿಜಯಾ ಬ್ಯಾಂಕ್‌ ಪ್ರಧಾನ ಕಚೇರಿಗೆ ಭೇಟಿ ನೀಡಿ ವ್ಯವಹಾರದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಕಾರ್ಪೊರೇಷನ್‌ ಬ್ಯಾಂಕ್ ಶಾಖೆಯಲ್ಲಿ ನಾಮಫಲಕ, ಚಲನ್‌, ಪಾಸ್‌ಬುಕ್‌ಗಳಲ್ಲಿ  ಕನ್ನಡ ಕಾಣದ್ದರಿಂದ ಹನುಮಂತಯ್ಯ ಅವರು ಬ್ಯಾಂಕಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯಾ ಬ್ಯಾಂಕ್‌ನಲ್ಲಿ ಕನ್ನಡ ಬಳಕೆ ಸಮಾಧಾನಕರವಾಗಿದೆ. ಆದರೆ, ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ವೆಬ್‌ಸೈಟ್‌ ಸೇರಿದಂತೆ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಇಲ್ಲ. ಒಂದು ತಿಂಗಳೊಳಗಾಗಿ ನಾಮಫಲಕ ಸೇರಿದಂತೆ ಎಲ್ಲೆಡೆ ಕನ್ನಡ ಬಳಸುವುದಾಗಿ ಆ ಬ್ಯಾಂಕಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ಈ ಬ್ಯಾಂಕ್‌ಗಳಲ್ಲಿ ಕನ್ನಡೇತರ ಸಿಬ್ಬಂದಿಯೇ ಅಧಿಕವಾಗಿದ್ದಾರೆ. ಹೀಗಾಗಿ, ಕನ್ನಡಿಗರಿಗೆ ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ತರಬೇತಿಗಳನ್ನು ಏರ್ಪಡಿಸಬೇಕು. ಈ ಕುರಿತು ಕೇಂದ್ರ ಆರ್ಥಿಕ ಇಲಾಖೆಗೆ ಪತ್ರ ಬರೆಯಿರಿ’ ಎಂದು ಹೇಳಿದ್ದೇನೆ ಎಂದು ವಿವರಿಸಿದರು.

‘ನೇಮಕಾತಿ ಸಂದರ್ಭದಲ್ಲಿ ಸಂದರ್ಶನದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದ್ದೇನೆ’ ಎಂದು ಹನುಮಂತಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.