ADVERTISEMENT

‘ಶೀಘ್ರ ವಿಧಾನಸೌಧ ವಜ್ರ ಮಹೋತ್ಸವ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:47 IST
Last Updated 21 ಜನವರಿ 2017, 19:47 IST
‘ಶೀಘ್ರ ವಿಧಾನಸೌಧ ವಜ್ರ ಮಹೋತ್ಸವ’
‘ಶೀಘ್ರ ವಿಧಾನಸೌಧ ವಜ್ರ ಮಹೋತ್ಸವ’   

ಬೆಂಗಳೂರು: ವಿಧಾನ ಪರಿಷತ್ತು ಮತ್ತು ವಿಧಾನ ಸಭೆಯ ಸಹಯೋಗದಲ್ಲಿ ಶೀಘ್ರದಲ್ಲಿ ವಿಧಾನಸೌಧದ ವಜ್ರ ಮಹೋತ್ಸವ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಿರಿಯ ಪತ್ರಕರ್ತ ಸಿ.ಎಂ. ರಾಮಚಂದ್ರ ಅವರ ‘ಎ ರೇರ್ ಅಂಡ್ ಮ್ಯಾಗ್ನಿಫಿಷಿಯಂಟ್ ಮಾನ್ಯುಮೆಂಟ್ ಟು ಡೆಮಾಕ್ರಸಿ ಅಂಡ್ ಪಾಪ್ಯೂಲರ್ ಸುಪ್ರಮೆಸಿ’ ಕೃತಿಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷ ಮತ್ತು ಸಭಾಪತಿ ಜೊತೆ ಚರ್ಚಿಸಿ ವಜ್ರ ಮಹೋತ್ಸವ ಆಚರಣೆಗೆ ದಿನ ನಿಗದಿಪಡಿಸಲಾಗುವುದು ಎಂದರು.

ಜನರ ಅರಮನೆ ಎಂದೇ ಬಣ್ಣಿಸಲಾಗುವ ವಿಧಾನಸೌಧದ ನಿರ್ಮಾಣ ಹಾಗೂ ಈವರೆಗಿನ ವಿದ್ಯಮಾನಗಳನ್ನು ಈ ಕೃತಿಯಲ್ಲಿ ರಾಮಚಂದ್ರ ಅವರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಇದರ ಕನ್ನಡ ಅವತರಣಿಕೆ ಪ್ರಕಟಗೊಳ್ಳಬೇಕು ಎಂದು ಆಶಿಸಿದರು.

ADVERTISEMENT

ವಿಧಾನಸೌಧ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ತಗುಲಿದ ವೆಚ್ಚ ₹ 1.99 ಕೋಟಿ. ದುಃಖದ ಸಂಗತಿ ಎಂದರೆ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ತಮ್ಮ ಕನಸಿನ ಕಟ್ಟಡದ ಉದ್ಘಾಟನೆಯವರೆಗೆ ಅಧಿಕಾರದಲ್ಲಿ ಉಳಿಯಲಿಲ್ಲ. ಅವರ ಏಳಿಗೆ ಸಹಿಸದ ಪಕ್ಷದೊಳಗಿನ ವ್ಯಕ್ತಿಗಳು ಸೃಷ್ಟಿಸಿದ ಆರೋಪಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.

‘ವಿಧಾನಸೌಧದ ನಿರ್ಮಾಣದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪವನ್ನು ಕೆಂಗಲ್ ಹನುಮಂತಯ್ಯ ಎದುರಿಸಬೇಕಾಗಿ ಬಂದದ್ದು ವಿಪರ್ಯಾಸ. ತಮ್ಮ ಮೇಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲು ತಾವೇ ರಚಿಸಿದ ಏಕವ್ಯಕ್ತಿ ಆಯೋಗದ ಎದುರು ಅವರು ಹಾಜರಾಗಬೇಕಾದ ಪರಿಸ್ಥಿತಿಯೂ ಬಂದಿತ್ತು. ಆಯೋಗದ ಮುಂದೆ ವಿಚಾರಣೆಗೆ ಹಾಜರಾದ ಕೆಂಗಲ್ ಹನುಮಂತಯ್ಯ, ‘ನನ್ನನ್ನು ಪ್ರಶ್ನಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಮರು ಪ್ರಶ್ನಿಸಿದ್ದು ಹಾಗೂ ಶಾಸನ ಸಭೆಯಲ್ಲಿ ಒಕ್ಕೊರಲಿನಿಂದ ಅನುಮೋದಿಸಿದ ವೆಚ್ಚಕ್ಕಿಂತಲೂ ಕಟ್ಟಡದ ಕಾಮಗಾರಿಗಳಿಗೆ ಒಂದು ರೂಪಾಯಿ ಕೂಡಾ ಹೆಚ್ಚು ವೆಚ್ಚ ಮಾಡಿಲ್ಲ ಎಂಬುವುದನ್ನು ಸ್ಪಷ್ಟಪಡಿಸಬೇಕಾಗಿ ಬಂದದ್ದು ಈಗ ಇತಿಹಾಸ’ ಎಂದರು.

ರಿಯಾಯಿತಿ ಕೇಳಬೇಡಿ!
ವಿಧಾನ ಸೌಧದ ವಿಶೇಷತೆಗಳನ್ನು ತಿಳಿಸುವ ಈ ಕೃತಿಯ ಮುಖಬೆಲೆ ₹ 395. ಇದನ್ನು ಸರ್ಕಾರ ಖರೀದಿಸಬೇಕು ಎಂದು ಮನವಿ ಮಾಡಿರುವ ರಾಮಚಂದ್ರ, ಯಾವುದೇ ರಿಯಾಯಿತಿ ಕೇಳಬೇಡಿ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಅಂಶವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಾಗ ಸಭಿಕರ ಸಮೂಹ ನಗೆಗಡಲಲ್ಲಿ ತೇಲಿತು. 

ರಾಮಚಂದ್ರ ಅವರು ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರು ಅದ್ಭುತ ವ್ಯಕ್ತಿ ಹಾಗೂ ಅವರ ಅತ್ಯದ್ಬುತ ಪರಿಕಲ್ಪನೆ ವಿಧಾನ ಸೌಧ ಎಂದು ಬಣ್ಣಿಸಿದರು. 
ಪಾಶ್ಚಿಮಾತ್ಯ ವಾಸ್ತುಶಿಲ್ಪದ ಸೊಗಸು ಹಾಗೂ ಭಾರತೀಯ ವಾಸ್ತುಶಿಲ್ಪದ ಸೊಬಗನ್ನು ವಿಧಾನಸೌಧ ಪ್ರದರ್ಶಿಸುತ್ತದೆ. ಪೂರ್ವ ಪ್ರವೇಶದ್ವಾರದಲ್ಲಿ ‘ಸರ್ಕಾರಿ ಕೆಲಸ ದೇವರ ಕೆಲಸ’ ಹಾಗೂ ಉತ್ತರ ಪ್ರವೇಶದ್ವಾರದಲ್ಲಿ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಕೆತ್ತಿಸಿರುವುದು ಕೆಂಗಲ್ ಹನುಮಂತಯ್ಯ ಅವರಲ್ಲಿದ್ದ ಭಾರತೀಯತೆಯ ಪರಾಕಾಷ್ಠೆಗೆ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.