ADVERTISEMENT

ಶೀಘ್ರ ಸಾಲ ಮರುಪಾವತಿ: ಬಿಡಿಎ

ನಿವೇಶನ ಹಂಚಿಕೆಯಿಂದ ಬರಲಿದೆ ಆದಾಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 20:09 IST
Last Updated 21 ಫೆಬ್ರುವರಿ 2017, 20:09 IST

ಬೆಂಗಳೂರು: ‘ವಿವಿಧ ಖಾಸಗಿ ಬ್ಯಾಂಕ್‌ ಗಳಿಂದ ಪಡೆದ ಅಲ್ಪಾವಧಿ ಸಾಲವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆಯಿಂದ ಬರುವ ಹಣದಿಂದ ಮರುಪಾವತಿ ಮಾಡುತ್ತೇವೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಕುಮಾರ್‌ ಖತ್ರಿ ತಿಳಿಸಿದ್ದಾರೆ.

‘ಕೆರೆ ಅಭಿವೃದ್ಧಿ, ಉದ್ಯಾನಗಳ ಅಭಿವೃದ್ಧಿಯಂತಹ ಕಾರ್ಯಗಳನ್ನೂ ಬಿಡಿಎ ಕೈಗೊಂಡಿದೆ. ಇವೆಲ್ಲ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡದ  ನಾಗರಿಕ ಸೌಲಭ್ಯ ಗಳು. ಇದುವರೆಗೆ ₹3 ಸಾವಿರ ಕೋಟಿ ಯನ್ನು ಬಿಡಿಎ ನಿಧಿಯಿಂದ ವೆಚ್ಚ ಮಾಡಿ ಪ್ರಾಧಿಕಾರೇತರ ಸಂಸ್ಥೆಗಳ (ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿ)  ಆಸ್ತಿ ನಿರ್ಮಿಸಲಾಗಿದೆ.  ಬಿಡಿಎ ಯೋಜನಾ ಗಾತ್ರದ ವ್ಯಾಪ್ತಿಯಿಂದ ಹೊರತಾದ ಯೋಜನೆಗಳ ಅನುಷ್ಠಾನಕ್ಕೆ ಸ್ವಂತ ನಿಧಿಯನ್ನು ಬಳಸುವುದರ ಜೊತೆಗೆ ಸಾಲವನ್ನೂ  ಮಾಡಬೇಕಾಗುತ್ತದೆ.  ಇವುಗಳಿಂದ ಯಾವುದೇ ಆದಾಯ ಬರುವುದಿಲ್ಲ. ಹಾಗಾಗಿ ಬಜೆಟ್‌ ಕೊರತೆ ಉಂಟಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಬಿಡಿಎ ಯೋಜನೆಗಳಿಂದ ಬರುವ ಆದಾಯ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಅಲ್ಪಾವಧಿ (ನಿರ್ದಿಷ್ಟ ಕಾಲಮಿತಿಯ) ಸಾಲವನ್ನೂ ಪಡೆಯಬೇಕಾಗುತ್ತದೆ. ಇದೊಂದು ಸಾಮಾನ್ಯ ಪದ್ಧತಿ. ಇದಕ್ಕೆ ಪ್ರಾಧಿಕಾರ ಆಡಳಿತ ಮಂಡಳಿಯ ಒಪ್ಪಿಗೆಯನ್ನೂ ಪಡೆದಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಿಂದ ಪಡೆದ ₹ 73.61 ಕೋಟಿ ಸಾಲಕ್ಕೆ (2015ರ ಸೆಪ್ಟೆಂಬರ್‌16ರಂದು ಪಡೆದದ್ದು) ವಿಶ್ವೇಶ್ವರಯ್ಯ ಬಡಾವಣೆಯ 150 ಮೂಲೆ ನಿವೇಶನಗಳನ್ನು, ಕಾರ್ಪೊರೇಷನ್‌ ಬ್ಯಾಂಕ್‌ನಿಂದ ಪಡೆದ  ₹ 46.99 ಕೋಟಿ ಸಾಲಕ್ಕೆ ವಿಶ್ವೇಶ್ವರಯ್ಯ ಬಡಾವಣೆಯ 100 ಮೂಲೆ ನಿವೇಶನಗಳನ್ನು, ಕೆನರಾ ಬ್ಯಾಂಕ್‌ನಿಂದ ಪಡೆದ ₹ 250 ಕೋಟಿ ಅಲ್ಪಾವಧಿ (ಆರು ತಿಂಗಳು) ಸಾಲಕ್ಕೆ ವಿಶ್ವೇಶ್ವರಯ್ಯ ಬಡಾವಣೆಯ 150 ಮೂಲೆ ನಿವೇಶನಗಳನ್ನು ಅಡಮಾನ ಇಡಲಾಗಿದೆ.  ಆರು ವಸತಿ ಯೋಜನೆಗಳಿಗೆ ಹುಡ್ಕೊದಿಂದ  ₹200 ಕೋಟಿ ಸಾಲ ಪಡೆದಿದ್ದು, 
₹174.54 ಕೋಟಿ ವಿನಿಯೋಗಿಸ ಲಾಗಿದೆ’ ಎಂದು ತಿಳಿಸಿದ್ದಾರೆ.

‘ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆಯಿಂದ ಬಿಡಿಎಗೆ ₹ 1,100 ಕೋಟಿ ಬರಬೇಕಿದೆ.  ಹುಡ್ಕೊ ಹೊರತುಪಡಿಸಿ ಇತರ ಬ್ಯಾಂಕ್‌ಗಳ ಅಲ್ಪಾವಧಿ ಸಾಲ ಮರುಪಾವತಿಗೆ ಈ ಹಣವನ್ನು ಬಳಸುತ್ತೇವೆ’ ಎಂದು  ಬಿಡಿಎ ಆಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.