ADVERTISEMENT

ಶ್ರದ್ಧಾ, ಭಕ್ತಿಯಿಂದ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:29 IST
Last Updated 7 ಜುಲೈ 2015, 19:29 IST

ಬೆಂಗಳೂರು: ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮ ಮಂಗಳವಾರ ನಗರದಲ್ಲಿ ಶ್ರದ್ಧಾ, ಭಕ್ತಿಯಿಂದ ನೆರವೇರಿತು.

ಮಲ್ಲೇಶ್ವರದ ಶೃಂಗೇರಿ ಶಂಕರ ಶಾಖಾ ಮಠದ ಮುಖ್ಯದ್ವಾರದಿಂದ ಚಂಡೆ ಮದ್ದಳೆ ಹಾಗೂ ಜಯಘೋಷದೊಂದಿಗೆ ಇಬ್ಬರೂ ಸ್ವಾಮೀಜಿಯವರನ್ನು ವೇದಿಕೆವರೆಗೆ ಕರೆ ತರಲಾಯಿತು. ಬಳಿಕ ಮಲ್ಲೇಶ್ವರ ಬ್ರಾಹ್ಮಣ ಸಂಘ ಸೇರಿದಂತೆ ಇತರ ಸಂಘಟನೆಗಳು, ನಗರದ ವಿವಿಧ ದೇವಸ್ಥಾನಗಳ ಅರ್ಚಕರು ಹಾಗೂ ಭಕ್ತರು ಹೂಮಾಲೆ, ಫಲತಾಂಬೂಲ ಕೊಟ್ಟು ಗೌರವ ಸಮರ್ಪಿಸಿದರು.

ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ, ‘ಭಗವದ್ಗೀತೆಯಲ್ಲಿ ಹೇಳಿರುವುದನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಹೇಳುವ ಪರಿಪಾಠ ಬೆಳೆಯುತ್ತಿರುವುದು ಸರಿಯಲ್ಲ. ಇದು ಬದಲಾಗಬೇಕಿದೆ’ ಎಂದರು.

‘ಭಗವದ್ಗೀತೆ ದೇವರ ಬಾಯಿಯಿಂದ ಬಂದದ್ದು. ಅದಕ್ಕೆ ಶಂಕರಾಚಾರ್ಯರು ಭಾಷ್ಯ ಬರೆದಿದ್ದಾರೆ. ಅದನ್ನು ನಿತ್ಯ ಪಾರಾಯಣ ಮಾಡಬೇಕು. ಜೊತೆಗೆ ವಿಷ್ಣು ಸಹಸ್ರನಾಮ ಸ್ತೋತ್ರವನ್ನೂ ಪಾರಾಯಣ ಮಾಡಬೇಕು’ ಎಂದರು. ‘ಕೃಷ್ಣ ಭಗವದ್ಗೀತೆಯನ್ನು ಕೇವಲ ಅರ್ಜುನನಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಬೋಧನೆ ಮಾಡಿದ್ದಾನೆ’ ಎಂದೂ ಹೇಳಿದರು.

‘ಭಗವದ್ಗೀತೆಯನ್ನು ಇಂತಹವರೇ ಓದಬೇಕು ಎಂಬ ಯಾವುದೇ ನಿಯಮವಿಲ್ಲ. ಸನಾತನ ಅನುಯಾಯಿಗಳ ಜೊತೆಗೇ ಯಾರೂ ಬೇಕಾದರೂ ಅದನ್ನು ಓದಬಹುದು’ ಎಂದರು. ಇದೆ ವೇಳೆ ಭಾರತೀ ತೀರ್ಥ ಸ್ವಾಮೀಜಿ ಅವರು ಎರಡನೇ ಮಹಡಿಯಲ್ಲಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.