ADVERTISEMENT

ಸಂಚಾರ ದಟ್ಟಣೆಗೆ ಸಮೂಹ ಸಾರಿಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:33 IST
Last Updated 29 ಮೇ 2015, 19:33 IST

ಬೆಂಗಳೂರು: ‘ಜನಸಂಖ್ಯೆಗೆ ಅನುಗುಣ­ವಾಗಿ ಬಸ್‌ ಸೇವೆ ಒದಗಿಸಲು ಸಾಧ್ಯವಾಗದಿರುವುದೇ ನಗರದಲ್ಲಿ ಸಂಚಾರ ದಟ್ಟಣೆಗೆ ಕಾರಣ’ ಎಂದು  ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುರಳೀಧರ ರಾವ್‌ ಹೇಳಿದರು.

‘ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌’ ವತಿಯಿಂದ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ನಗರದಲ್ಲಿ ತೀವ್ರ ಸಂಚಾರ ದಟ್ಟಣೆ’ ವಿಷಯ
ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ನಗರದಲ್ಲಿ ಒಂದು ಕೋಟಿಗೂ ಹೆಚ್ಚು  ಜನಸಂಖ್ಯೆಗೆ ಕೇವಲ ಆರು ಸಾವಿರ ಬಿಎಂಟಿಸಿ ಬಸ್‌ಗಳಿವೆ. ಇರುವ ಬಸ್‌ಗಳು ಸಹ ಸಮರ್ಪಕವಾಗಿ ಸೇವೆ ಒದಗಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಸ್ವಂತ ವಾಹನ ಬಳಸುತ್ತಿದ್ದಾರೆ. ಇದರಿಂದಾಗಿ ನಗರದ ವಾಹನಗಳ ಸಂಖ್ಯೆ 50 ಲಕ್ಷ ಮೀರಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಿನಿ ಬಸ್‌ ಸೇವೆ ಬೇಕು: ವಾಹನ ದಟ್ಟಣೆ ತಪ್ಪಿಸಲು ಮೆಟ್ರೊ ಸೇವೆಯನ್ನು ಒದಗಿಸಲಾಗುತ್ತಿದೆ. ಆದರೆ, ಮೆಟ್ರೊ ಮಾರ್ಗದಿಂದ ಮುಂದಿನ ಸ್ಥಳಕ್ಕೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ಮೆಟ್ರೊ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳ ಪ್ರಯಾಣಿಕರ ಅನುಕೂಲಕ್ಕಾಗಿ ಮಿನಿ ಬಸ್‌ ಸೇವೆ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಸಾರಿಗೆ ವ್ಯವಸ್ಥೆಯನ್ನು ಖಾಸಗೀ­ಕರಣಗೊಳಿಸಬೇಕು. ಆಗ ಸ್ಪರ್ಧೆ ಹೆಚ್ಚು­ತ್ತದೆ. ಇದರಿಂದಾಗಿ ಸಾರಿಗೆ ಕ್ಷೇತ್ರದಲ್ಲಿ ದಕ್ಷತೆ ಹೆಚ್ಚುತ್ತದೆ. ಅಲ್ಲದೇ, ಸಮೂಹ ಸಾರಿಗೆ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಮುರಳೀಧರ ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.