ADVERTISEMENT

ಸಂಚಾರ ದಟ್ಟಣೆ ತಗ್ಗಿಸಲು ಸುರಂಗ ಮಾರ್ಗ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 20:22 IST
Last Updated 25 ಏಪ್ರಿಲ್ 2017, 20:22 IST

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚು ಇರುವ ಕಡೆ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಬೆಂಗಳೂರು  ಅಭಿವೃದ್ಧಿ ಸಚಿವ  ಕೆ.ಜೆ. ಜಾರ್ಜ್‌ ಅವರು ಬಲ್ಗೇರಿಯಾದ ‘ಐಎಸ್‌ಎ ವೆಸ್ಟ್‌ ಕನ್ಸೋರ್ಟಿಯಂ’ ಸಂಸ್ಥೆಯ ನಿಯೋಗದ ಜೊತೆ ಸಮಾಲೋಚನೆ ನಡೆಸಿದರು.

ಈ ಸಂಸ್ಥೆಯು ಅಂತರರಾಷ್ಟ್ರೀಯ ನಿರ್ಮಾಣ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ಸಂಸ್ಥೆಗಳ  ಸಹಭಾಗಿತ್ವ ಹೊಂದಿದೆ.  ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚು ಇರುವ ಹೆಬ್ಬಾಳ ಜಂಕ್ಷನ್‌, ಗೊರಗುಂಟೆಪಾಳ್ಯ ಜಂಕ್ಷನ್‌ಗಳಿಗೆ ಸಂಸ್ಥೆಯ ಆರು ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ಮೆಟ್ರೊ ರೈಲಿನಲ್ಲೂ  ಸಂಚರಿಸಿದರು. 

ಮೂಲಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ನಿಯೋಗವು ಸಚಿವರ ಜೊತೆ ಮಧ್ಯಾಹ್ನ ಚರ್ಚೆ ನಡೆಸಿತು. ‘ಈ ಸಂಸ್ಥೆಯು  ಸುರಂಗ ನಿರ್ಮಾಣ ದಲ್ಲಿ  ಪರಿಣತಿ ಹೊಂದಿದೆ.  ಹೆಬ್ಬಾಳದ ಮೂಲಕ ನಗರವನ್ನು ಪ್ರವೇಶಿಸಲು ಅನುಕೂಲವಾಗುವಂತೆ ಸುಮಾರು 6 ಕಿ.ಮೀ ಉದ್ದದ ಸುರಂಗ ನಿರ್ಮಾಣ ಮಾಡುವ ಕುರಿತು ಸಚಿವರು ನಿಯೋಗದ ಜೊತೆ ಚರ್ಚಿಸಿದರು.  

ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ಸುರಂಗ ನಿರ್ಮಿಸುವ  ಕುರಿತು ಕಾರ್ಯಸಾಧ್ಯತಾ ವರದಿಯೊಂದನ್ನು ತಯಾರಿಸುವಂತೆ ಹಾಗೂ ಇದಕ್ಕೆ ಬಂಡವಾಳ ಹೊಂದಿಸಲು ಸೂಕ್ತ ವಿಧಾನವನ್ನು ಕಂಡುಕೊಳ್ಳುವಂತೆ    ಸಚಿವರು ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೊರಗುಂಟೆಪಾಳ್ಯದಲ್ಲಿ  ಸಂಚಾರ ದಟ್ಟಣೆ ಕಡಿಮೆ ಮಾಡುವ ಬಗ್ಗೆಯೂ ಸಮಾಲೋಚನೆ ನಡೆಯಿತು. ಇಲ್ಲೂ ಸುರಂಗ ಮಾರ್ಗ ನಿರ್ಮಿಸಬಹುದು. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದರೆ ನಗರದ ಇತರ ಕಡೆಯೂ ಇದೇ ಮಾದರಿಯನ್ನು ಅನುಸರಿಸುವ ಕುರಿತು ಚರ್ಚಿಸಲಾಯಿತು’ ಎಂದರು.

‘ಕೆ.ಆರ್.ಪುರದಿಂದ ಗೊರಗುಂಟೆಪಾಳ್ಯ, ವರ್ತೂರು ಕೋಡಿಯಿಂದ ಜ್ಞಾನಭಾರತಿ ಹಾಗೂ ಸಿಲ್ಕ್‌ ಬೋರ್ಡ್‌ನಿಂದ ಹೆಬ್ಬಾಳದವರೆಗೆ  ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ   87 ಕಿ.ಮೀ ಉದ್ದದ  ಎತ್ತರಿಸಿದ ರಸ್ತೆ ಕಾರಿಡಾರ್‌ ಯೋಜನೆಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.