ADVERTISEMENT

ಸಂಸದರ ಹರಾಜು: ಖರ್ಗೆಗೆ ₹5, ಯಡಿಯೂರಪ್ಪಗೆ ₹1!

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:34 IST
Last Updated 29 ಜುಲೈ 2016, 19:34 IST

ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಖಂಡಿಸಿ ಕನ್ನಡ ಸಂಘಗಳ ಒಕ್ಕೂಟದ ಕಾರ್ಯಕರ್ತರು, ರಾಜ್ಯದ ಸಂಸದರನ್ನು ಬಹಿರಂಗ ಹರಾಜು ಹಾಕುವ ಮೂಲಕ ಶುಕ್ರವಾರ ವಿನೂತನ ಪ್ರತಿಭಟನೆ ನಡೆಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ  ಅಧ್ಯಕ್ಷ ವಾಟಾಳ್‍ ನಾಗರಾಜ್‍ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸಂಸದರ ಫೋಟೊ ಹಿಡಿದು ಹರಾಜು ಕೂಗಲಾಯಿತು.

‘ಕಲಬುರ್ಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ₹5, ಬೆಂಗಳೂರು ದಕ್ಷಿಣ ಸಂಸದ ಅನಂತಕುಮಾರ್‌ ₹1.5, ಉತ್ತರದ ಸಂಸದ ಡಿ.ವಿ. ಸದಾನಂದಗೌಡ ₹1.5 ಹಾಗೂ  ಶಿವಮೊಗ್ಗದ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರು 1₹ಗೆ ಹರಾಜಾದರು’ ಎಂದು  ವಾಟಾಳ್‌ ನಾಗರಾಜ್‌ ತಿಳಿಸಿದರು.

‘ಧಾರವಾಡದ ಪ್ರಹ್ಲಾದ್ ಜೋಶಿ ಹಾಗೂ  ಬಾಗಲಕೋಟೆಯ ಪಿ.ಸಿ. ಗದ್ದಿಗೌಡರ ಅವರು ತಲಾ 60 ಪೈಸೆಗೆ ಹರಾಜಾದರು. ಹಾವೇರಿ ಸಂಸದ
ಶಿವಕುಮಾರ್ ಉದಾಸಿ ಅವರಿಗೆ ಸಾರ್ವಜನಿಕರು 50 ಪೈಸೆ ಕೂಗಿದರು’ ಎಂದು ತಿಳಿಸಿದರು.

‘ಸಂಸದರಾದ ಸುರೇಶ್‌ ಅಂಗಡಿ, ಶೋಭಾ ಕರಂದ್ಲಾಜೆ, ಪ್ರಕಾಶ್‌ ಹುಕ್ಕೇರಿ, ಅನಂತ್‌ಕುಮಾರ್‌ ಹೆಗಡೆ, ಬಿ. ಶ್ರೀರಾಮುಲು, ಬಿ.ಎನ್‌. ಚಂದ್ರಪ್ಪ, ಬಿ.ವಿ. ನಾಯಕ್‌, ಭಗವಂತ್‌ ಖೂಬಾ, ಸಿ.ಎಸ್‌. ಪುಟ್ಟರಾಜು, ಡಿ.ಕೆ. ಸುರೇಶ್‌, ದ್ರುವ್‌ ನಾರಾಯಣ್‌, ಸಿದ್ದೇಶ್ವರ,

ಕೆ.ಎಚ್‌. ಮುನಿಯಪ್ಪ, ಸಂಗಣ್ಣ ಕರಡಿ, ಎಂ. ವೀರಪ್ಪ ಮೊಯಿಲಿ, ನಳಿನ್‌ಕುಮಾರ್‌ ಕಟೀಲ್‌, ಪಿ.ಸಿ. ಮೋಹನ್, ಪ್ರತಾಪ್‌ ಸಿಂಹ, ರಮೇಶ್‌ ಜಿಗಜಿಣಗಿ, ಎಸ್‌.ಪಿ. ಮುದ್ದಹನುಮೇಗೌಡ ಅವರನ್ನು ಕೊಂಡುಕೊಳ್ಳಲು ಸಾರ್ವಜನಿಕರು ಮುಂದೆ ಬರಲಿಲ್ಲ’ ಎಂದು ವಾಟಾಳ್‌ ತಿಳಿಸಿದರು.

‘ಹರಾಜು ಪ್ರಕ್ರಿಯೆಯಿಂದ ಒಟ್ಟು ₹11.80 ಸಂಗ್ರಹವಾಯಿತು.  ಖರೀದಿದಾರರಿಗೆ ಸಂಸದರ ಫೋಟೊಗಳನ್ನು ಹಸ್ತಾಂತರಿಸಲಾಯಿತು.  ಬಳಿಕ ಅದೇ ಫೋಟೊಗಳನ್ನು ದಹಿಸಿ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಲಾಯಿತು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.