ADVERTISEMENT

ಸಚಿವರ ವಿರುದ್ಧದ ಆರೋಪಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:02 IST
Last Updated 12 ಮಾರ್ಚ್ 2017, 20:02 IST

ಬೆಂಗಳೂರು: ಕೃಷಿ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಬಿಜೆಪಿಯ ನಗರ ಜಿಲ್ಲಾ ಘಟಕದ ವಕ್ತಾರ ಎನ್‌.ಆರ್‌. ರಮೇಶ್‌ ಅವರು ಮಾಡಿರುವ ಆರೋಪವನ್ನು ಖಂಡಿಸಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಕೋಡಗಲಹಟ್ಟಿ ಗ್ರಾಮದಲ್ಲಿ ಭಾನುವಾರ ಪ್ರತಿಭಟಿಸಿದರು. 

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಅಶೋಕನ್‌, ‘1999ರಲ್ಲಿ ಹುಣಸಮಾರನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೋಡಗಲ ಹಟ್ಟಿ ಗ್ರಾಮದ ಸರ್ವೆ ನಂ.103ರಲ್ಲಿ ಚಂದ್ರಣ್ಣ ಅವರು ದೇವನಹಳ್ಳಿ ಶಾಸಕರಾಗಿದ್ದ ಅವಧಿಯಲ್ಲಿ 23.35 ಎಕರೆ ಸರ್ಕಾರಿ ಬಂಡೆ ಜಾಗದಲ್ಲಿ ಎರಡು ಎಕರೆ ಜಾಗವನ್ನು ಬಡವರಿಗೆ ಆಶ್ರಯ ನಿವೇಶನಕ್ಕಾಗಿ ಮಂಜೂರು ಮಾಡಿದ್ದರು’

‘ಉಳಿದ 10 ಎಕರೆ ಜಾಗವನ್ನು ಬಿಬಿಎಂಪಿ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ಹಂಚಲು ಹಾಗೂ ಎರಡು ಎಕರೆ ಜಾಗವನ್ನು ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸವಿಲೇವಾರಿಗಾಗಿ ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ADVERTISEMENT

ಉಳಿದ ಜಾಗವು ಬಂಡೆಪ್ರದೇಶದಿಂದ ಕೂಡಿದ್ದು, ಅಲ್ಲಲ್ಲಿ ಇದ್ದಂತಹ ಅಲ್ಪಸ್ವಲ್ಪ ಜಾಗದಲ್ಲಿ ಸುಮಾರು 15 ವರ್ಷಗಳಿಂದ ಬೋವಿ ಜನಾಂಗ ಹಾಗೂ ಇತರೆ ವರ್ಗದ ಬಡವರು ಮನೆಗಳನ್ನು ಕಟ್ಟಿಕೊಂಡು ವಾಸವಿದ್ದು, 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

‘ಈ ವಿಚಾರದಲ್ಲಿ ತಾಲ್ಲೂಕು, ಜಿಲ್ಲಾಪಂಚಾಯ್ತಿ ಸದಸ್ಯರಾಗಲಿ ಅಥವಾ ಶಾಸಕರಾಗಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಎನ್‌.ಆರ್‌.ರಮೇಶ್‌ ಅವರು ಸ್ಥಳಕ್ಕೆ ಬಂದು ಪರಿಶೀಲಿಸದೆ ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಸಚಿವರ ಹಿಂಬಾಲಕರು ₹ 250 ಕೋಟಿ ಮೌಲ್ಯದ ಜಮೀನನ್ನು ಒತ್ತುವರಿ ಮಾಡಲು ಮುಂದಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದರು. ಫಲಾನುಭವಿಗಳು ತಮ್ಮ ನಿವೇಶನಗಳ ಅಸಲಿ ಹಕ್ಕುಪತ್ರಗಳನ್ನು ಮಾಧ್ಯಮದವರಿಗೆ ತೋರಿಸಿ, ಎನ್‌.ಆರ್‌.ರಮೇಶ್‌ ಅವರ ಆರೋಪ ಸುಳ್ಳು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.