ADVERTISEMENT

ಸಚಿವ ಜಾರಕಿಹೊಳಿ ರಾಜೀನಾಮೆ

ಮುಖ್ಯಮಂತ್ರಿ ವಿರುದ್ಧ ಮುನಿಸು: ಫ್ಯಾಕ್ಸ್‌ ಮೂಲಕ ಪತ್ರ ರವಾನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 20:11 IST
Last Updated 27 ಜನವರಿ 2015, 20:11 IST

ಗೋಕಾಕ/ಬೆಂಗಳೂರು: ಖಾತೆ ಹಂಚಿಕೆಯೂ ಸೇರಿದಂತೆ ಹಲವು ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿ­ಸಿ­­ಕೊಂಡಿರುವ ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಫ್ಯಾಕ್ಸ್‌ ಮೂಲಕ ಮುಖ್ಯಮಂತ್ರಿ ಮತ್ತು ಕೆಪಿಸಿಸಿಗೆ ಅವರು ರಾಜೀ­ನಾಮೆ ಪತ್ರ ರವಾನಿಸಿದ್ದಾರೆ. ಆದರೆ, ಮುಖ್ಯ­ಮಂತ್ರಿಯೂ ಸೇರಿದಂತೆ ಯಾರೂ ಈ ಬಗ್ಗೆ ಈವರೆಗೆ ಅವರಿಗೆ ಪ್ರತಿಕ್ರಿಯೆ ನೀಡಿಲ್ಲ.

ಗೋಕಾಕದ ಗೃಹ ಕಚೇರಿ ‘ಹಿಲ್‌ ಗಾರ್ಡನ್‌’ನಲ್ಲಿ  ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿದ ಸತೀಶ್‌, ‘ಸಮಾಜ­ಮುಖಿ ಕೆಲಸ­ಗಳಲ್ಲಿ ತೊಡಗಿಸಿಕೊಳ್ಳು­ವುದು ಮತ್ತು ಪಕ್ಷ ಸಂಘಟನೆ ಉದ್ದೇಶ­­ದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈ ನಿರ್ಧಾ­ರಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ’ ಎಂದು ತಿಳಿಸಿದರು.

‘ರಾಜೀನಾಮೆ ಪತ್ರವನ್ನು ಮುಂಜಾ­ನೆಯೇ ಮುಖ್ಯಮಂತ್ರಿ­ಯವರ ಕಚೇರಿಗೆ ರವಾನಿಸಿದ್ದೇನೆ. ಅವರು ತಿರುಪತಿಗೆ ತೆರಳಿದ್ದರಿಂದಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನ್ನ ಈ ನಿರ್ಧಾರ­ದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸಂಪುಟ­ದಲ್ಲಿ 20 ತಿಂಗಳು ಸಚಿವನಾಗಿ ಕಾರ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ಸಂಪು­ಟ­­ದಲ್ಲಿ ಅಬಕಾರಿ ಸಚಿವ ಸ್ಥಾನ ನೀಡಿ­­­ದಾ­ಗಲೇ ಜನಪರ ಕಾರ್ಯ­ನಿರ್ವಹಿಸಲು ಅವಕಾಶ­ವಿ­ರುವ ಬೇರೆ ಖಾತೆ ನೀಡುವಂತೆ ಮುಖ್ಯಮಂತ್ರಿ ಅವರನ್ನು ನಾನು ಕೋರಿದ್ದೆ.

ಮುನಿಸಿಗೆ ಹಲವು ಕಾರಣಗಳು

ಸಿದ್ದರಾಮಯ್ಯ ಅವರು ಜನತಾ ದಳ­ದಲ್ಲಿ ಇದ್ದ ಕಾಲ­ದಿಂದಲೂ ಆಪ್ತರಾಗಿದ್ದ ಸತೀಶ್‌ ಈಗ ಮುನಿಸಿಕೊಳ್ಳಲು ಹಲವು ಕಾರಣಗಳಿವೆ ಎಂಬುದು ಬಹಿರಂಗ­ವಾಗುತ್ತಿದೆ.

‘ತಾವು ದೀರ್ಘಕಾಲ ಬೆಂಬಲಿಸಿದ ನಾಯಕ ಮುಖ್ಯಮಂತ್ರಿ ಆದರೂ ಸರ್ಕಾರದಲ್ಲಿ ತಮ್ಮ ಮಾತಿಗೆ ಬೆಲೆ ದೊರೆ­ಯುತ್ತಿಲ್ಲ ಎಂಬ ಬೇಸರ ಸತೀಶ್‌ ಜಾರಕಿಹೊಳಿ ಅವರಿಗೆ ಇತ್ತು. ಮುಖ್ಯ­ಮಂತ್ರಿಯವರ ಸುತ್ತ ಇರುವವರ ಬಗ್ಗೆ ಹಲವು ಸಂದರ್ಭ­ಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಅಬಕಾರಿ ಸಚಿವರ ನಿಕಟವರ್ತಿಗಳು ಹೇಳುತ್ತಾರೆ.

ಲೋಕೋಪಯೋಗಿ ಸೇರಿ ಕೆಲವು ಇಲಾಖೆಗಳಲ್ಲಿ ತಮ್ಮ ಶಿಫಾರಸಿಗೆ ಬೆಲೆ ಕೊಡು­ತ್ತಿಲ್ಲ ಎಂದು ಸಚಿವರ ಎದುರಿನಲ್ಲೇ ಕೆಲ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಹಿಂದ ಚಳವಳಿ ಸೇರಿದಂತೆ ಎಲ್ಲ ಸಂದರ್ಭ­ಗಳಲ್ಲಿ ಬೆನ್ನಿಗೆ ನಿಂತ ತಮ್ಮನ್ನು ಮುಖ್ಯ­ಮಂತ್ರಿಯವರು ಕಡೆಗಣಿಸುತ್ತಿದ್ದಾ­ರೆಂದು ಸಿಟ್ಟಾಗಿದ್ದರು  ಎನ್ನಲಾಗಿದೆ.

ADVERTISEMENT

ಆರು ತಿಂಗಳ ಹಿಂದೆಯೇ ರಾಜೀ­ನಾಮೆ ನೀಡಬೇಕು ಎಂದು ಯೋಚಿಸಿದ್ದೆ. ಈಗ ಸಮಯ ಕೂಡಿ ಬಂದಿದೆ. ಸಮಾಜ ಸೇವೆ ಮತ್ತು ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ಹರಿಸುತ್ತೇನೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮತ್ತು ಪಕ್ಷದ ಶ್ರೇಯಸ್ಸಿಗಾಗಿ ಕೆಲಸ ನಿರ್ವಹಿಸಬೇಕು ಎಂಬ ಬಯಕೆ ನನ್ನದು. ಇನ್ನು ಮುಂದೆಯೂ ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದು, ಮುಖ್ಯಮಂತ್ರಿಗಳ ಜೊತೆಗೆ ಶಾಸಕನಾಗಿ ಈ ಅವಧಿಯನ್ನು ಪೂರೈಸುತ್ತೇನೆ’ ಎಂದರು.

ಭಿನ್ನಮತವಲ್ಲ: ‘ಇದು ಭಿನ್ನಮತವಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನ್ನ ಈ ರಾಜೀನಾಮೆ ಸರ್ಕಾರದ ಕಾರ್ಯ­ವೈಖರಿ ವಿರುದ್ಧದ ಪ್ರತಿಭಟನೆ ಅಲ್ಲ. ಇದು ಪಕ್ಷದಲ್ಲಿನ ಯಾವುದೇ ಬೆಳವ­ಣಿಗೆಗ­ಳಿಗೂ ಪೂರಕವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ‘ಡಾ.ಜಿ. ಪರಮೇಶ್ವರ ಅವರ ಕೈ ಕೆಳಗೆ ಪಕ್ಷ­ವನ್ನು ಸಂಘ­ಟಿಸಲು ನಾನು ಉತ್ಸುಕನಾ­ಗಿದ್ದೇನೆ’ ಎಂದು ಉತ್ತರಿಸಿದರು.

ಮೊದಲಿನಿಂದಲೂ ಅಸಮಾಧಾನ: ದೀರ್ಘ ಕಾಲ­ದಿಂದಲೂ ಸಿದ್ದರಾ­ಮಯ್ಯ ಅವರಿಗೆ ಆಪ್ತರಾಗಿರುವ ಸತೀಶ್‌ ಜಾರಕಿಹೊಳಿ, 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ತಮಗೆ ಅಬಕಾರಿ ಖಾತೆ ಹಂಚಿಕೆ ಮಾಡಿ­ರುವುದಕ್ಕೆ ಅಸಮಾಧಾನ ವ್ಯಕ್ತಪಡಿ­ಸಿದ್ದರು.

ಸಿ.ಎಂ ಮನವೊಲಿಕೆ ಯತ್ನ
ಸಿ.ಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಸತೀಶ್‌ ಅವರನ್ನು ಮಂಗಳ­ವಾರ ರಾತ್ರಿ ಸಂಪರ್ಕಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನ­ವೊಲಿಸಲು ಪ್ರಯತ್ನಿ­ಸಿದ್ದಾರೆ. ಅವರ ಬೆಂಬಲಿಗರಿಗೂ ಮನವಿ ಮಾಡಿ­ದ್ದಾರೆ ಎಂದು ಗೊತ್ತಾಗಿದೆ.

ಆರಂಭದಿಂದಲೂ ಖಾತೆ ಬದ­ಲಾವಣೆಗೆ ಪಟ್ಟು ಹಿಡಿದಿದ್ದ ಅವರು, ಇತ್ತೀಚೆಗೆ ಬಹಿರಂಗವಾಗಿ ಈ ಬಗ್ಗೆ ಬೇಡಿಕೆ ಹೊರಹಾಕಿದ್ದರು. ಜನರ ಜೊತೆ ನೇರವಾಗಿ ಸಂಪರ್ಕ ಇರುವ ಖಾತೆ ಬೇಕು ಎಂಬ ಇಂಗಿತ ಹೊರ­ಹಾಕಿದ್ದ ಸತೀಶ್‌, ಸಮಾಜ ಕಲ್ಯಾಣ ಖಾತೆ ನೀಡುವಂತೆ ಬೇಡಿಕೆ ಇರಿಸಿದ್ದರು. ಅಬಕಾರಿ ಖಾತೆಯನ್ನು ಬದಲಿಸದಿದ್ದರೆ ಸಚಿವ ಸ್ಥಾನ ತೊರೆದು ಜನಪರ ಕಾರ್ಯಗಳಲ್ಲಿ ತೊಡಗಿಸಿ­ಕೊಳ್ಳುವುದಾಗಿ ಇತ್ತೀಚೆಗಷ್ಟೇ ಪ್ರಕಟಿ­ಸಿದ್ದರು.


ಮುಖ್ಯಮಂತ್ರಿಯವರು ಇತ್ತೀಚೆಗೆ ಬೆಳಗಾವಿಗೆ ಹೋಗಿದ್ದಾಗ ಅಬಕಾರಿ ಸಚಿವರು ದೂರ ಉಳಿದಿ­ದ್ದರು. ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿದ್ದ ಅವರು, ಮುಖ್ಯಮಂತ್ರಿ ಜೊತೆ ಭಿನ್ನಾಭಿಪ್ರಾಯವಿಲ್ಲ ಎಂದಿ­ದ್ದರು. ಆದರೆ, ಮಂಗಳವಾರ ಬೆಳಿಗ್ಗೆ ದಿಢೀರನೆ ರಾಜೀನಾಮೆ ಪತ್ರ ರವಾನಿಸಿದರು.

ಸಂಧಾನಯತ್ನ ವಿಫಲ: ಡಿಸೆಂಬರ್‌ನಲ್ಲಿ ಬೆಳಗಾವಿ­ಯಲ್ಲಿ ನಡೆದ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸತೀಶ್‌ ನಿರ್ಧರಿಸಿದ್ದರು. ಈ ಬಗ್ಗೆ ಸುಳಿವು ಪಡೆದ ಮುಖ್ಯ­ಮಂತ್ರಿಯವರು ಅಧಿವೇಶನ ಆರಂಭಕ್ಕೂ ಕೆಲ ದಿನಗಳ ಮೊದಲು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರನ್ನು ಅಲ್ಲಿಗೆ ಕಳುಹಿಸಿ ಸಂಧಾನಕ್ಕೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಅಬಕಾರಿ ಸಚಿವರು ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಲು ಮತ್ತೆ ಮುಂದಾಗಿರುವ ಕುರಿತು ಇತ್ತೀಚೆ­ಗಷ್ಟೆ ಸಿದ್ದರಾಮಯ್ಯ ಅವರಿಗೆ ತಿಳಿದಿತ್ತು. ಆ ಬಳಿಕ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಅವರ ಮೂಲಕ ಮನವೊಲಿಕೆಗೆ ಯತ್ನಿಸಿದ್ದರು. ಸಿದ್ದರಾ­ಮಯ್ಯ ಅವರು ಮಾತುಕತೆಗೆ ಯತ್ನಿಸಿ­ದರೂ ಸತೀಶ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.