ADVERTISEMENT

ಸರಳ ಸಂಭ್ರಮಾಚರಣೆ; ಅಭಿಮಾನಕ್ಕೆ ಎಲ್ಲಿದೆ ಎಣೆ

ಚುನಾವಣೆ ನೀತಿಸಂಹಿತೆ ಕಾವಿನಲ್ಲಿ ಡಾ. ರಾಜ್‌ಕುಮಾರ್‌ 90ನೇ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 4:58 IST
Last Updated 25 ಏಪ್ರಿಲ್ 2018, 4:58 IST
ನಗರದಲ್ಲಿ ಮಂಗಳವಾರ ಡಾ.ರಾಜ್ ಕುಮಾರ್ ಸಮಾಧಿ ಬಳಿ ಆಯೋಜಿಸಿದ್ದ ಡಾ.ರಾಜ್ ಕುಮಾರ್ ಅವರ ೯೦ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ರಾಜ್ ಅಳಿಯ ಎಸ್.ಎ ಗೋವಿಂದರಾಜ್, ಮಗಳು ಲಕ್ಷ್ಮಿ, ನಟ ಶಿವ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ಡಾ.ರಾಜ್ ಕುಮಾರ್ ಸಮಾಧಿ ಬಳಿ ಆಯೋಜಿಸಿದ್ದ ಡಾ.ರಾಜ್ ಕುಮಾರ್ ಅವರ ೯೦ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ರಾಜ್ ಅಳಿಯ ಎಸ್.ಎ ಗೋವಿಂದರಾಜ್, ಮಗಳು ಲಕ್ಷ್ಮಿ, ನಟ ಶಿವ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅವರ ಜತೆಗಿನ ಒಡನಾಟದ ಖುಷಿಯನ್ನು ಬರೀ ಮಾತಿನಿಂದ ಹೇಳಲಿಕ್ಕೆ ಸಾಧ್ಯವೇ ಇಲ್ಲ. ಅವರ ವ್ಯಕ್ತಿತ್ವವೇ ಅಂಥದ್ದು’ – ರಾಜ್‌ಕುಮಾರ್‌ ಅವರ ಒಡನಾಟದ ನೆನಪುಗಳನ್ನು ಮೆಲುಕು ಹಾಕುತ್ತ ಹಿರಿಯ ನಿರ್ದೇಶಕ ಭಗವಾನ್ ಭಾವುಕರಾಗಿ ಕಣ್ಣೊರೆಸಿಕೊಂಡರು.

ಮಂಗಳವಾರ ನಟ ರಾಜ್‌ಕುಮಾರ್ ಅವರ 90ನೇ ಜನ್ಮದಿನ ಸಂದರ್ಭದಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೊದದಲ್ಲಿ ಹಬ್ಬದ ಸಂಭ್ರಮವಿತ್ತು. ಆ ಸಂಭ್ರಮದಲ್ಲಿ ಭಾಗಿಯಾಗಿದ್ದ ಭಗವಾನ್ ಅವರ ಮಾತುಗಳನ್ನು ಒಂದಿಷ್ಟು ತರುಣ ತರುಣಿಯರು ಬೆರಗಾಗಿ ಕೇಳುತ್ತಿದ್ದರು. ಇನ್ನೊಂದೆಡೆ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳ ಜಯಘೋಷ.

ಇಕ್ಕೆಲಗಳಲ್ಲಿ ಸಾಲಾಗಿ ನಿಲ್ಲಿಸಿದ್ದ ರಾಜ್‌ ನಟನಾಜೀವನದ ಪ್ರಮುಖ ಪಾತ್ರಗಳ ಚಿತ್ರ ಮತ್ತು ವಿವರಗಳನ್ನು ಅಭಿಮಾನಿಯೊಬ್ಬ ಅಂಗೈ ಮೇಲೆಯೇ ಬರೆದುಕೊಳ್ಳುತ್ತಿದ್ದ. ಜ್ವರದಂತೆ ಏರುತ್ತಿರುವ ಬಿಸಿಲನ್ನು ಲೆಕ್ಕಿಸದೇ ಗುಂಪು ಗುಂಪಾಗಿ ನಿಂತ ‘ಅಭಿಮಾನಿ ದೇವರು’ಗಳು ಅಣ್ಣಾವ್ರ ಸಮಾಧಿಯನ್ನು ಕಣ್ತುಂಬಿಕೊಳ್ಳುವುದರಲ್ಲಿ ಮೈಮರೆತಿದ್ದರು. ಹೂವಿನಿಂದ ಅಲಂಕರಿಸಿದ ಸಮಾಧಿ ಮೇಲಿನ ಚಿತ್ರದಲ್ಲಿನ ರಾಜ್‌ಕುಮಾರ್‌ ಇನ್ನೇನು ಜನರತ್ತ ಕೈಯೆತ್ತಿ ಮುಗಿಯುತ್ತಾರೇನೋ ಎನಿಸುವಂತೆ ನಗುತ್ತಿದ್ದರು.

ADVERTISEMENT

ಬೆಳಿಗ್ಗೆ 9.30ಕ್ಕೆ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್, ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು. ಪಕ್ಕದಲ್ಲಿಯೇ ಇದ್ದ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಸಮಾಧಿಗೂ ನಮಿಸಿದರು. ನಂತರ ಅಭಿಮಾನಿಗಳಿಗೆ ಸಿಹಿ ಹಂಚಿದ ಶಿವರಾಜ್‌, ಸಮೀಪದಲ್ಲಿನ ರಕ್ತದಾನ ಶಿಬಿರಕ್ಕೂ ಭೇಟಿ ನೀಡಿದರು.

11.30ಕ್ಕೆ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಪುನೀತ್ ರಾಜ್‌ಕುಮಾರ್, ‘ನನ್ನ ತಂದೆ ಅಭಿಮಾನಿಗಳನ್ನು ದೇವರು ಎಂದು ಕರೆದರು. ಅಂಥ ಅಭಿಮಾನಿ ದೇವರುಗಳು ಇಂದು ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದಿದ್ದಾರೆ. ಅವರನ್ನು ಪ್ರೀತಿಸುವ ಜನರು ನಮನ ಸಲ್ಲಿಸುತ್ತಿದ್ದಾರೆ. ಇದನ್ನು ನೋಡಿ ಅಪ್ಪಾಜಿ ಸಂತೋಷಪಡುತ್ತಿದ್ದಾರೆ ಎಂದು ಅನಿಸುತ್ತಿದೆ’ ಎಂದರು.

ನೀತಿಸಂಹಿತೆಯ ಬಿಗಿ: ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆಯ ಪರಿಣಾಮ ರಾಜ್‌ ಹುಟ್ಟುಹಬ್ಬದ ಸಂಭ್ರಮಾಚರಣೆಯ ಮೇಲೂ ಆಗಿದೆ. ಪ್ರತಿವರ್ಷವೂ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಪಾನೀಯ, ಅನ್ನಸಂತರ್ಪಣೆ ನಡೆಯುತ್ತಿತ್ತು. ಈ ಬಾರಿ ಅವುಗಳಿಗೆ ಅವಕಾಶ ಇರಲಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ರಾಜ್‌ ಸಮಾಧಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಿತ್ತು.

ರಾಜ್‌ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿಯೂ ಜನ ವಿರಳವಾಗಿಯೇ ಇದ್ದರು. ‘ಪ್ರತಿ ವರ್ಷ 400-500 ಜನ ರಕ್ತದಾನ ಮಾಡುತ್ತಾರೆ. ಈ ಸಲ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ರಕ್ತದಾನ ಶಿಬಿರದ ಸಿಬ್ಬಂದಿಯೊಬ್ಬರು ತಿಳಿಸಿದರು.

ರಾಜ್‌ ಸಮ್ಮುಖದಲ್ಲಿ ಸಪ್ತಪದಿ!
ರಾಜ್ ಸಮಾಧಿ ಸ್ಥಳಕ್ಕೆ ಬೆಳಿಗ್ಗೆಯೇ ಹಾಜರಿದ್ದ ಆ ಯುವ ಜೋಡಿ ಮದುಮಕ್ಕಳ ದಿರಿಸಿನಲ್ಲಿದ್ದರು. ರಾಜ್‌ ಸಮಾಧಿಯ ಸಮ್ಮುಖದಲ್ಲಿ ಮದುವೆಯಾಗಬೇಕು ಎಂಬ ಹಂಬಲದಿಂದ ರುದ್ರ ಕಲ್ಲೊಡೆಯಾರ್‌ ಮತ್ತು ಶಿಲ್ಪಶ್ರೀ ಅವರು ದಾವಣಗೆರೆಯಿಂದ ಬಂದಿದ್ದರು. ಆದರೆ ಸಮಾಧಿ ಎದುರು ಮದುವೆಯಾಗಲು ಅವರಿಗೆ ಅನುಮತಿ ಸಿಗಲಿಲ್ಲ. ಆದ್ದರಿಂದ ಕುರುಬರಹಳ್ಳಿ ಸರ್ಕಲ್‌ನಲ್ಲಿರುವ ರಾಜ್‌ ಪ್ರತಿಮೆಯ ಎದುರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ರುದ್ರ ಅವರು ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

‘ನಾನು ಮತ್ತು ಶಿಲ್ಪಶ್ರೀ ಇಬ್ಬರೂ ಅಪ್ಪಾಜಿ ಅವರ ಅಭಿಮಾನಿಗಳು. ಅವರನ್ನು ನಾವು ದೇವರು ಎಂದೇ ಪೂಜಿಸುತ್ತೇವೆ. ಅವರ ಆಶೀರ್ವಾದ ಪಡೆದುಕೊಂಡು ಹೋದ ಮೇಲೆಯೇ ನನಗೆ ಚಿತ್ರರಂಗದಲ್ಲಿ ಕೆಲಸ ಸಿಕ್ಕಿದ್ದು. ನಾನು ಅವರ ಸಮಾಧಿ ಬಳಿ ಹೋಗಿ ಪ್ರಾರ್ಥನೆ ಮಾಡಿಕೊಂಡಾಗಲೆಲ್ಲ ಒಳ್ಳೆಯದಾಗಿದೆ. ಜನವರಿಯಲ್ಲಿಯೇ ನಮ್ಮ ಮದುವೆ ನಿಶ್ವಿತವಾಗಿತ್ತು. ಆದರೆ ಅಪ್ಪಾಜಿ ಹುಟ್ಟಿದ ದಿನ ಅವರ ಆಶೀರ್ವಾದ ಪಡೆದುಕೊಂಡೇ ಮದುವೆಯಾಗಬೇಕು ಎಂದು ಮುಂದೂಡಿದ್ದೆವು. ಸಮಾಧಿಯ ಸನ್ನಿಧಿಯಲ್ಲಿ ಮದುವೆಯಾಗಲು ಅವಕಾಶ ಸಿಗದಿದ್ದರೂ, ಅಪ್ಪಾಜಿ ಪ್ರತಿಮೆಯ ಎದುರು ಸರಳವಾಗಿ ವಿವಾಹ ಆಗುತ್ತಿರುವ ತೃಪ್ತಿ ಇದೆ’ ಎಂದು ‘ಪ್ರಜಾವಾಣಿ’ ಜತೆ ಮಾತನಾಡಿದ ರುದ್ರ ಹೇಳಿದರು.

ಯುವ ಜೋಡಿಗಳಿಗೆ ಶುಭ ಹಾರೈಸಿದ ರಾಘವೇಂದ್ರ ರಾಜ್‌ಕುಮಾರ್‌ ಅವರು ತಮ್ಮ ಮನೆಗೆ ಊಟಕ್ಕೂ ಆಹ್ವಾನಿಸಿದರು. ಮಧ್ಯಾಹ್ನದವರೆಗೂ ಸ್ಮಾರಕದ ಸಮೀಪದಲ್ಲಿಯೇ ಇದ್ದ ರುದ್ರ ಮತ್ತು ಶಿಲ್ಪಶ್ರೀ ನಂತರ ಕುರುಬರಹಳ್ಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.