ADVERTISEMENT

ಸರ್ಕಾರದಿಂದ ವಿವರಣೆ ಬಯಸಿದ ಹೈಕೋರ್ಟ್‌

ವಕೀಲರ ಕಲ್ಯಾಣ ನಿಧಿ ಸ್ಟ್ಯಾಂಪ್‌ ಶುಲ್ಕ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 20:05 IST
Last Updated 19 ಜುಲೈ 2017, 20:05 IST
ಸರ್ಕಾರದಿಂದ ವಿವರಣೆ ಬಯಸಿದ ಹೈಕೋರ್ಟ್‌
ಸರ್ಕಾರದಿಂದ ವಿವರಣೆ ಬಯಸಿದ ಹೈಕೋರ್ಟ್‌   

ಬೆಂಗಳೂರು: ‘ವಕಾಲತ್‌ ನಾಮೆ ಹಾಗೂ ಜ್ಞಾಪನಾ ಪತ್ರಗಳಿಗೆ (ಮೆಮೊ) ಲಗತ್ತಿಸಬೇಕಾದ ಸ್ಟ್ಯಾಂಪ್‌ಗಳ ಶುಲ್ಕದಲ್ಲಿ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ನಡುವೆ ಏಕೆ ಅಂತರ ಇದೆ’ ಎಂದು ಹೈಕೋರ್ಟ್‌ ಪ್ರಶ್ನಿಸಿದೆ.

ವಕೀಲರ ಕಲ್ಯಾಣ ನಿಧಿ ಅಧಿನಿಯಮ–1983ಕ್ಕೆ ತರಲಾಗಿರುವ ತಿದ್ದುಪಡಿ ಪ್ರಶ್ನಿಸಿ ರಾಜ್ಯ ವಕೀಲರ ಕಲ್ಯಾಣ ವೇದಿಕೆ ಅಧ್ಯಕ್ಷ ಶಿವರಾಜ ಪಾಟೀಲ ಸೇರಿದಂತೆ 45 ಜನ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

‘ಹೈಕೋರ್ಟ್‌ನಲ್ಲಿ ಸಲ್ಲಿಸಲಾಗುವ ವಕಾಲತ್‌ಗಳಿಗೆ ₹50 ಹಾಗೂ ಮೆಮೊಗಳಿಗೆ ₹ 30 ಮೊತ್ತದ ಸ್ಟ್ಯಾಂಪ್‌ ಲಗತ್ತಿಸಬೇಕಿದೆ. ಆದರೆ, ಅಧೀನ ನ್ಯಾಯಾಲಯ, ಅರೆ ನ್ಯಾಯಿಕ ಪ್ರಾಧಿಕಾರ, ಗ್ರಾಹಕ  ನ್ಯಾಯಾಲಯ ಹಾಗೂ ವಿವಿಧ ಸಕ್ಷಮ ಪ್ರಾಧಿಕಾರಗಳ ಮುಂದೆ ಸಲ್ಲಿಸಲಾಗುವ ವಕಾಲತ್ತು ಅಥವಾ ಹಾಜರಾತಿ ಮೆಮೊಗಳಿಗೆ ₹ 30 ಮೊತ್ತದ ಸ್ಟ್ಯಾಂಪ್‌, ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ಮಧ್ಯಂತರ ಅರ್ಜಿ ಮತ್ತು ಮೆಮೊಗಳಿಗೆ ₹ 20 ಮೊತ್ತದ ಸ್ಟ್ಯಾಂಪ್‌ ಲಗತ್ತಿಸಬೇಕು ಎಂದು ಆದೇಶಿಸಲಾಗಿದೆ. ಇದು ತಾರತಮ್ಯದಿಂದ ಕೂಡಿಲ್ಲವೇ’ ಎಂದು ನ್ಯಾಯಪೀಠ ಕೇಳಿದೆ.

ADVERTISEMENT

ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲ ಟಿ.ಎಸ್‌.ಕಿರಣ್‌ ಕುಮಾರ್‌, ‘ಇದರಲ್ಲಿ ತಾರತಮ್ಯ ಏನಿಲ್ಲ. ವಕೀಲರ ಪರಿಷತ್‌ ಸಲ್ಲಿಸಿದ ಮನವಿ ಆಧರಿಸಿ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಕುರಿತಂತೆ ನಿರ್ಧಾರ ಕೈಗೊಳ್ಳುವ ಮುನ್ನ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ನಿಗದಿತ ಸಮಯದೊಳಗೆ ಯಾವುದೇ ಆಕ್ಷೇಪಣೆ ಬಾರದ ಕಾರಣ ಸರ್ಕಾರ ಅಧಿಸೂಚನೆ ಹೊರಡಿಸಿದೆ’ ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಈ ಕುರಿತಂತೆ ಎಲ್ಲಾ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಕಲ್ಯಾಣ ನಿಧಿಯ ಸ್ಟ್ಯಾಂಪ್‌ ಶುಲ್ಕದ ವಿವರ ತರಿಸಿಕೊಳ್ಳಿ. ಆಕ್ಷೇಪಣೆ ಸಲ್ಲಿಸಿ’ ಎಂದು ಸೂಚಿಸಿದರು. ಇದೇ 24ಕ್ಕೆ ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.