ADVERTISEMENT

‘ಸರ್ಕಾರಿ ಶಾಲೆ ಸಾಯಿಸುವ ಕೆಲಸ ಬಿಡಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:59 IST
Last Updated 20 ಜನವರಿ 2017, 19:59 IST

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ಸಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಟೀಕಿಸಿದರು. ಹೆಬ್ಬಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಶೇ 25ರಷ್ಟು ಸಂಸದರು, ಶಾಸಕರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರಿ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿರುವ ಇವರು ಸರ್ಕಾರಿ ಶಾಲೆ, ಕಾಲೇಜುಗಳ ಉದ್ದಾರಕ್ಕೆ ಕೆಲಸ ಮಾಡುವುದಿಲ್ಲ. ಅದರ ಪಕ್ಕದಲ್ಲಿಯೆ ಇರುವ ತಮ್ಮ ಶಾಲೆಗಳ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಸರ್ಕಾರಿ ಸಂಸ್ಥೆಗಳಿಗೆ ಅನುದಾನ, ನೆರವು ನೀಡುವ ಕುರಿತು ಆಲೋಚನೆಯನ್ನೇ ಮಾಡುವುದಿಲ್ಲ ಎಂದು ದೂರಿದರು.

ಸಂಸದರು, ಶಾಸಕರ ಮಾಲೀಕತ್ವದ ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆ ಮೇಲೆ ಗದಾಪ್ರಹಾರ ನಡೆಸುತ್ತಾ, ಸರ್ಕಾರಗಳಿಗೆ ಸವಾಲು ಒಡ್ಡುತ್ತಿವೆ. ಈ ವ್ಯವಸ್ಥೆ ಬದಲಾಗಬೇಕಾಗಿದೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆಗೆ ಆಕ್ಷೇಪ: ರಾಜ್ಯ ಸರ್ಕಾರ ಎಲ್ಲಾ ವಿಷಯಗಳಲ್ಲಿಯೂ ಮತ ಬೇಟೆಯ ರಾಜಕಾರಣ ಮಾಡುತ್ತಿದ್ದು, ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಪಠ್ಯಪುಸ್ತಕಗಳನ್ನೂ ಇದಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಸದಾನಂದಗೌಡ ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.