ADVERTISEMENT

ಸಾಕ್ಷ್ಯ ಒದಗಿಸಿದ ಮೊಬೈಲ್, ಚಾಕು, ಹಗ್ಗ 

ಡೆಲ್ಲಿ ಪಬ್ಲಿಕ್‌ ಶಾಲೆಯ ಶಿಕ್ಷಕಿ ಕೊಲೆ ಪ್ರಕರಣ; ಪತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2017, 20:17 IST
Last Updated 29 ಜುಲೈ 2017, 20:17 IST
ಸಾಕ್ಷ್ಯ ಒದಗಿಸಿದ ಮೊಬೈಲ್, ಚಾಕು, ಹಗ್ಗ 
ಸಾಕ್ಷ್ಯ ಒದಗಿಸಿದ ಮೊಬೈಲ್, ಚಾಕು, ಹಗ್ಗ    

ಬೆಂಗಳೂರು: ಡೆಲ್ಲಿ ಪಬ್ಲಿಕ್‌ ಶಾಲೆಯ  ಶಿಕ್ಷಕಿ ಪ್ರಿಯಾಂಕಾ ಗುಪ್ತಾ (24) ಕೊಲೆ ಪ್ರಕರಣದ ಅಪರಾಧಿ, ಅವರ ಪತಿ ಸತೀಶ್‌ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಶನಿವಾರ ಆದೇಶ ಹೊರಡಿಸಿದೆ.

ಹುಳಿಮಾವು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಸಪ್ಪಣವರ ಅವರು, ಆದೇಶ ಹೊರಡಿಸಿ ₹30 ಸಾವಿರ ದಂಡ ಸಹ ವಿಧಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಚನ್ನಪ್ಪ ಹರಸೂರ, ‘ಈ ಪ್ರಕರಣದಲ್ಲಿ ಕೃತ್ಯವನ್ನು ಕಣ್ಣಾರೆ ಕಂಡ ಸಾಕ್ಷಿಗಳು ಇರಲಿಲ್ಲ.  ಸಾಂದರ್ಭಿಕ ಸಾಕ್ಷ್ಯಗಳನ್ನೇ ಪರಿಗಣಿಸಿ ಶಿಕ್ಷೆ ಪ್ರಕಟಿಸಿದ ವಿಶೇಷ ಪ್ರಕರಣ ಇದಾಗಿದೆ’ ಎಂದು ಹೇಳಿದರು.

ADVERTISEMENT

‘ಕೃತ್ಯದ ಬಳಿಕ ಅಪರಾಧಿಯು ಮನೆ ಬೀಗ ಹಾಕಿ, ಅದರ ಕೀಯನ್ನು ಕಸವಿದ್ದ ಜಾಗದಲ್ಲಿ ಎಸೆದಿದ್ದರು. ಅದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಜತೆಗೆ ಮೊಬೈಲ್‌ ವಿವರವೂ ಪ್ರಕರಣದಲ್ಲಿ ಸಾಕ್ಷಿಯಾಯಿತು.’

‘ಕೃತ್ಯಕ್ಕಾಗಿ ಅಪರಾಧಿಯು ಅಂಗಡಿಯೊಂದರಲ್ಲಿ ಹಗ್ಗ  ಹಾಗೂ ಚಾಕು ಖರೀದಿಸಿದ್ದರು. ಅವುಗಳನ್ನು ಸಹ ನ್ಯಾಯಾಲಯ ಪ್ರಕರಣದ ಸಾಂದರ್ಭಿಕ ಸಾಕ್ಷ್ಯಗಳನ್ನಾಗಿ ಪರಿಗಣಿಸಿತು’ ಎಂದು ಚನ್ನಪ್ಪ ವಿವರಿಸಿದರು.

‘ಇಂಥ ಪ್ರಕರಣದಲ್ಲಿ ಕಣ್ಣಾರೆ ಕಂಡ ಸಾಕ್ಷಿಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಪ್ರಿಯಾಂಕಾ ಕೊಲೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ವೈದ್ಯರು ಹಾಗೂ ಪಂಚನಾಮೆಯಲ್ಲಿ ಪಾಲ್ಗೊಂಡಿದ್ದ ಪಂಚರು ಸಾಕ್ಷಿಗಳಾದರು’ ಎಂದರು.

ಘಟನೆ ವಿವರ: ಇನ್ಫೊಸಿಸ್‌ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಸತೀಶ್‌ಕುಮಾರ್‌, ಪ್ರಿಯಾಂಕಾ ಅವರನ್ನು ಮದುವೆಯಾಗಿದ್ದರು.  ದಂಪತಿ ಹುಳಿಮಾವಿನಲ್ಲಿ ವಾಸವಿದ್ದರು.

‘2010ರ ಆಗಸ್ಟ್‌ 10ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕುರ್ಚಿ ಮೇಲೆ ಪ್ರಿಯಾಂಕಾ ಅವರನ್ನು ಕುಳ್ಳಿರಿಸಿದ್ದ ಸತೀಶ್‌ಕುಮಾರ್‌, ಬಟ್ಟೆಯಿಂದ ಕಣ್ಣು, ಹಗ್ಗದಿಂದ ಕೈ ಹಾಗೂ ಕಾಲು ಕಟ್ಟಿದ್ದರು. ತದನಂತರ ಹಗ್ಗದಿಂದ ಕುತ್ತಿಗೆ ಬಿಗಿದಿದ್ದರು. ನಂತರ ಚಾಕುವಿನಿಂದ ಕತ್ತು ಕೊಯ್ದಿದ್ದರು’ ಎಂದು ಚನ್ನಪ್ಪ ತಿಳಿಸಿದರು.  

‘ಬಳಿಕ ಹುಳಿಮಾವು ಠಾಣೆಗೆ ದೂರು ಕೊಟ್ಟಿದ್ದ ಸತೀಶ್‌ಕುಮಾರ್‌, ಯಾರೋ ದರೋಡೆಗೆ ಮನೆಗೆ ಬಂದು ಈ ಕೊಲೆ ಮಾಡಿ ಹೋಗಿದ್ದಾರೆ ಎಂದು ಹೇಳಿದ್ದ. ಜತೆಗೆ ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನಿಸಿದ್ದ. ಪೊಲೀಸರು ತನಿಖೆ ನಡೆಸಿದಾಗಲೇ ಅವರೇ ಕೊಲೆ ಮಾಡಿದ್ದು ಗೊತ್ತಾಗಿತ್ತು.’ 

‘ಆರೋಪಿ ವಿರುದ್ಧ  ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯ ನಾಶ (ಐಪಿಸಿ 201) ಆರೋಪದಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ತಿಳಿಸಿದರು.

***

ತಂದೆ–ತಾಯಿ ದ್ವೇಷಿಸಿದ್ದಕ್ಕೆ ಹತ್ಯೆಗೈದಿದ್ದ

ಸತೀಶ್‌ಕುಮಾರ್‌ ಅವರ ತಂದೆ–ತಾಯಿಯನ್ನು ಪ್ರಿಯಾಂಕಾ ದ್ವೇಷಿಸುತ್ತಿದ್ದರು. ಅದೇ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಆರೋಪಿಯು ತನಿಖಾಧಿಕಾರಿ ಬಳಿ ಹೇಳಿಕೊಂಡಿದ್ದ.

‘ಹಠಕ್ಕೆ ಬಿದ್ದು ನನ್ನ ತಂದೆ–ತಾಯಿಗೆ ಬೇರೆ ಮನೆ ಮಾಡುವಂತೆ ಮಾಡಿದ್ದಳು.  ನನ್ನ ಜತೆಯೂ ಆಕೆ ಚೆನ್ನಾಗಿರಲಿಲ್ಲ. ನನ್ನ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ’ ಎಂದು ಸತೀಶ್‌ಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದರು.

‘ಪತ್ನಿಗೆ ಕೀಲು ನೋವು ಇತ್ತು. ಕರ್ನಾಟಕ, ಕೇರಳದ ಹಲವು ವೈದ್ಯರ ಬಳಿ ತೋರಿಸಿದರೂ ಗುಣವಾಗಿರಲಿಲ್ಲ. ಆಕೆಯ ಆರೈಕೆ ನಾನೇ ಮಾಡುವಂತಾಗಿತ್ತು. ಆಕೆಯನ್ನೇ ಮುಗಿಸಿದರೆ ಪೋಷಕರೊಂದಿಗೆ ನೆಮ್ಮದಿಯಿಂದ ಇರಬಹುದು ಎಂದು ಈ ಕೃತ್ಯ ಎಸಗಿದೆ’ ಎಂದು ತಿಳಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.