ADVERTISEMENT

ಸಾಲ ಮರುಪಾವತಿಸದ ‘ನೈಸ್‌’

ಹಣಕಾಸು ಸಂಸ್ಥೆಗಳಿಂದ ಪಿಡಬ್ಲ್ಯುಡಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 19:53 IST
Last Updated 19 ಡಿಸೆಂಬರ್ 2014, 19:53 IST

ಬೆಂಗಳೂರು: ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಶಾಸಕ ಅಶೋಕ್ ಖೇಣಿ ಒಡೆತನದ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ (ನೈಸ್) ಕಂಪೆನಿ ಸಾಲ ಮರು­ಪಾವ­ತಿ­­ಯಲ್ಲಿ ವಿಫಲವಾಗುತ್ತಿರುವುದು ಸಾಲ ನೀಡಿದ ಹಣಕಾಸು ಸಂಸ್ಥೆಗಳನ್ನು ಕಂಗೆಡಿಸಿದೆ.

ಈ ಯೋಜನೆಯ ಅನುಷ್ಠಾನಕ್ಕಾಗಿಯೇ ‘ನೈಸ್’ ಮತ್ತು ಅದರ ಸಹವರ್ತಿ ಕಂಪೆನಿ ‘ನೆಸೆ’ಗೆ ದೊಡ್ಡಮೊತ್ತದ ಸಾಲ ನೀಡಿರುವ ಐಡಿಎಫ್‌ಸಿ (ಹಿಂದಿನ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್) ಇತ್ತೀಚೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಆತಂಕ ಹೊರಹಾಕಿದೆ. ನೈಸ್ ಕಂಪೆನಿ ಸಾಲ ಮರುಪಾವತಿ ಸಾಮರ್ಥ್ಯ ದಕ್ಕಿಸಿಕೊಳ್ಳುವುದಕ್ಕೆ ಪೂರಕವಾಗಿ ಬಿಎಂಐಸಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ನೆರವಾಗುವಂತೆ ಈ ಸಂಸ್ಥೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ.

ಐಡಿಎಫ್‌ಸಿ, ಎಚ್‌ಡಿಎಫ್‌ಸಿ, ಬ್ಯಾಂಕ್ ಆಫ್‌ ಇಂಡಿಯಾ, ಜೆ ಅಂಡ್ ಕೆ ಬ್ಯಾಂಕ್ ಮತ್ತು ಆದಿತ್ಯ ಬಿರ್ಲಾ ಸಂಸ್ಥೆಗಳನ್ನು ಒಳಗೊಂಡ ಹಣಕಾಸು ಸಂಸ್ಥೆಗಳ ಸಮೂಹವು 2011ರಿಂದ ಈಚೆಗೆ ಬಿ.ಎಂ.ಐ.ಸಿ ಯೋಜನೆಗಾಗಿ ₨ 2,120 ಕೋಟಿ ಸಾಲ ನೀಡಿದೆ. ಈ ಸಾಲಕ್ಕಾಗಿ ಬಿ.ಎಂ.ಐ.ಸಿ ಯೋಜನೆ ಮತ್ತು ಅದರ ವ್ಯಾಪ್ತಿಗೆ ಬರುವ ಆಸ್ತಿಗಳ ಮೇಲೆ ಹಕ್ಕು ಸಾಧಿಸುವ ಒಪ್ಪಂದ­ವನ್ನೂ 2011ರಲ್ಲಿ ಮಾಡಿಕೊಳ್ಳ­ಲಾಗಿತ್ತು ಎಂಬ ಉಲ್ಲೇಖ ಪತ್ರದಲ್ಲಿದೆ.

2014ರ ನವೆಂಬರ್ 13ರಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಆರ್.ಕಾಂಬ್ಳೆ ಅವರಿಗೆ ಪತ್ರ ಬರೆದಿರುವ ಐ.ಡಿ.ಎಫ್‌.ಸಿ ಹಿರಿಯ ನಿರ್ದೇಶಕ (ಯೋಜನಾ ಹಣಕಾಸು) ಆರ್‌.ದೀಪಕ್, ‘ಐಡಿಎಫ್‌ಸಿ ನೇತೃತ್ವದ ಹಣಕಾಸು ಸಂಸ್ಥೆಗಳ ಸಮೂಹವು ಬಿ.ಎಂ.ಐ.ಸಿ ಯೋಜನೆ ಅನುಷ್ಠಾನಕ್ಕಾಗಿ ನೈಸ್ ಮತ್ತು ನೆಸೆ ಕಂಪೆನಿಗಳಿಗೆ ₨ 2,120 ಕೋಟಿಯಷ್ಟು ಸಾಲ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕಂಪೆನಿಗಳು ನಿಗದಿತವಾಗಿ ಸಾಲ ಮರುಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ಗೂ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು. ನೈಸ್‌ ಕಂಪೆನಿಯು ಕೋರಿರುವ ಅನುಮತಿಗಳನ್ನು ಬಿಎಂಐಸಿಎಪಿಎ ಮೂಲಕ ಕೊಡಿಸಬೇಕು.  ಬಿಎಂಐಸಿ ಯೋಜನೆ ತ್ವರಿತವಾಗಿ ಅನುಷ್ಠಾನ­ಗೊಳ್ಳಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಮಧ್ಯಪ್ರವೇಶಕ್ಕೆ ಮನವಿ: ನವೆಂಬರ್ 16ಕ್ಕೆ ಕಾಂಬ್ಳೆ ಅವರಿಗೆ ಎರಡನೆ ಪತ್ರ ಬರೆದಿರುವ ದೀಪಕ್, ‘ನೈಸ್‌ ಕಂಪೆನಿಯು ಬಿಎಂಐಸಿ ಯೋಜನಾ ಪ್ರದೇಶದಲ್ಲಿ ಕೆಲವು ಆಸ್ತಿಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವವನ್ನೂ ಹೊಂದಿದೆ. ಆದರೆ ಈ ಆಸ್ತಿಗಳ ಅಭಿವೃದ್ಧಿಗೆ ಬಿಎಂಐಸಿ ಯೋಜನಾ ಪ್ರಾಧಿಕಾರದಿಂದ ಸಕಾಲದಲ್ಲಿ ಒಪ್ಪಿಗೆ ದೊರೆಯುತ್ತಿಲ್ಲ ಎಂದು ಅದು ಹೇಳಿದೆ.

ಈ ಕಾರಣದಿಂದಾಗಿಯೇ ಸಾಲ ಮರುಪಾವತಿಗೆ ಅಡ್ಡಿಯಾಗುತ್ತಿದೆ ಎಂಬ ಉತ್ತರವನ್ನೂ ನೀಡಿದೆ. ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದೇ ಇರುವುದರಿಂದ ಕಂಪೆನಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಸಾಲ ನೀಡಿರುವವರಲ್ಲಿ ಆತಂಕ ಸೃಷ್ಟಿಸಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಲೋಕೋಪಯೋಗಿ ಇಲಾಖೆ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು. ನೈಸ್‌ ಕಂಪೆನಿಯು ಕೋರಿರುವ ಅನುಮತಿಗಳನ್ನು ಬಿಎಂಐಸಿಎಪಿಎ ಮೂಲಕ ಕೊಡಿಸಬೇಕು. ಆ ಮೂಲಕ ಮೂಲ ಒಪ್ಪಂದದಂತೆ ಬಿಎಂಐಸಿ ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.